ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮಿತಿಯ ಕರೆಯ ಮೇರೆಗೆ ಮನೆ, ನಿವೇಶನ ರಹಿತ ಅರ್ಜಿದಾರರಿಗೆ,
ಸರಕಾರಿ ಜಮೀನು ಗುರುತಿಸಿ ನಿವೇಶನ ಹಕ್ಕು ಪತ್ರ ಮಂಜೂರು ಮಾಡಲು ಆಗ್ರಹಿಸಿ ರಾಜ್ಯಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳ
ಬೆಂಬಲದೊಂದಿಗೆ ನಿವೇಶನ ರಹಿತರು ೯೪ಸಿ, ೯೪ಸಿಸಿ ಕಲಂನಡಿಯ ಅರ್ಜಿದಾರರು ನವಂಬರ್ ೧೮ ರಂದು ಜೈಲ್ ಭರೋ ಹೋರಾಟ ಚಳವಳಿ
ನಡೆಸುವುದರ ಮೂಲಕ ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎನ್. ನಾಗರಾಜ ಕರೆ
ನೀಡಿದರು.
ಅವರು ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು, ಸಮ್ಮೇಳನದ ಆರಂಭದಲ್ಲಿ ಸಂಘದ
ಧ್ವಜಾರೋಹಣವನ್ನು ಉಡುಪಿ ಜಿಲ್ಲಾಧ್ಯಕ್ಷ ಯು. ದಾಸಭಂಡಾರಿ ನೆರವೇರಿಸಿ, ಹುತಾತ್ಮ ಸ್ತಂಭಕ್ಕೆ ಗೌರವ ಅರ್ಪಣೆ ಮಾಡಲಾಯಿತು.
ಮನೆ ನಿವೇಶನ ಅರ್ಜಿದಾರರಿಗೆ ಕೂಡಲೇ ಭೂಮಿ ಹಕ್ಕು ಪತ್ರ ವಿತರಣೆ ಮಾಡಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
ಸಮರ್ಪಕವಾಗಿ ಜ್ಯಾರಿಗೊಳಿಸಬೇಕು. ಭೂಕಂದಾಯ ಕಾಯಿದೆಯನ್ವಯ ೯೪ ಸಿ ಕಲಂ ಖಾತೆ ಅರ್ಜಿಸಲ್ಲಿಸಿದವರಿಗೆ ಗೋಮಾಳ, ಅರಣ್ಯ ಭೂಮಿ,
ಡೀಮ್ಡ್ ಫಾರೆಸ್ಟ್ ಮುಂತಾದ ಕಾನೂನಾತ್ಮಕ ತೊಡಕನ್ನು ನಿವಾರಿಸಿ ಹಕ್ಕು ಪತ್ರ ಮಂಜೂರು ಮಾಡಬೇಕು. ದಿನಬಳಕೆ ಆಹಾರ ವಸ್ತುಗಳ ಬೆಲೆ
ಏರಿಕೆಯನ್ನು ತಡೆಗಟ್ಟಬೇಕು ಎಂಬ ಬೇಡಿಕೆಗಳನ್ನು ಈಡೇರಿಸಲು ಸರಕಾರವನ್ನು ಒತ್ತಾಯಿಸಿ ಠರಾವುಗಳನ್ನು ಮಂಡಿಸಲಾಯಿತು.
ಸಮ್ಮೇಳನದ ಸಮಾರಂಭದ ಬೇಡಿಕೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ, ಮಹಾಬಲ ವಡೇರ ಹೋಬಳಿ, ಯು.
ದಾಸಭಂಡಾರಿ, ರಾಜೀವ ಪಡುಕೋಣೆ, ಶೀಲಾವತಿ, ಪಳ್ಳಿ ಉಸ್ಮಾನ್‌ಗುಲ್ವಾಡಿ, ರಮೇಶ ಪೂಜಾರಿ, ಚಿಕ್ಕಮೊಗವೀರ ಗಂಗೊಳ್ಳಿ, ಪದ್ಮಾವತಿ ಶೆಟ್ಟಿ,
ನಾಗರತ್ನ ನಾಡ, ವೆಂಕಟೇಶ ಕೋಣಿ ನಾಗರತ್ನ ನಾಡ ಪ್ರಧಾನ ಕಾರ್ಯದರ್ಶಿ ಪದ್ಮಾವತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.