ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರಾವಳಿಯ ಗ್ರಾಮೀಣ ಪತ್ರಿಕೋದ್ಯಮದ ಹೆಸರು ಬಂದಾಗಲೆಲ್ಲಾ ಅಗ್ರಪಂಕ್ತಿಯಲ್ಲಿ ನಿಲ್ಲುವ ಹಿರಿಯ ಪತ್ರಕರ್ತ, ವಿಜಯ ಕರ್ನಾಟಕದ ದೈನಿಕ ಕುಂದಾಪುರದ ಸಿನಿಯರ್ ಕಾಫಿ ಎಡಿಟರ್ ಜಾನ್ ಡಿಸೋಜಾ ಅವರಿಗೆ ಪ್ರಸಕ್ತ ಸಾಲಿನ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಬಿಎಸ್ಸಿ ಪದವೀಧರರಾಗಿರುವ ಜಾನ್ ಡಿಸೋಜಾ ಅವರನ್ನು ಸೆಳದದ್ದು ಪತ್ರಿಕೋದ್ಯಮ ಕ್ಷೇತ್ರ. ವಿದ್ಯಾರ್ಥಿಯಾಗಿದ್ದಾಗಲೇ ಕುಂದಪ್ರಭ ವಾರಪತ್ರಿಕೆಯ ಮೂಲಕ ಪತ್ರಿಕೋದ್ಯಮದ ಪ್ರವೇಶಿಸಿದ ಅವರು ಗ್ರಾಮಾಂತರ ಪ್ರದೇಶಗಳು ಹಾಗೂ ತನಿಖಾ ವರದಿಗಾಗಿ ಸುತ್ತಾಟ, ಮನೆ ಮನೆಗೆ ಪತ್ರಿಕೆಯ ಹಾಕುವುದರಿಂದ ಹಿಡಿದು ಸ್ಥಳೀಯ ಪತ್ರಿಕೆಯ ಎಲ್ಲಾ ಆಯಾಮಗಳಲ್ಲಿಯೂ ಅನುಭವ ಪಡೆದವರು. ಅದರ ನಡುವೆ ಜೈಕೊಂಕಣಿ ಕೊಂಕಣಿ ಭಾಷಿಕ ಪತ್ರಿಕೆಯ ಹೊಣೆಗಾರಿಕೆ. ಪದವಿಯ ಬಳಿಕ ೧೯೯೯ರಿಂದ ಒಂದು ವರ್ಷ ಕುಂದಪ್ರಭದ ವರದಿಗಾರರಾಗಿ ಆ ಬಳಿಕ ೨೦೦೧ರಲ್ಲಿ ಹೊಸತಾಗಿ ಆರಂಭಗೊಂಡಿದ್ದ ವಿಜಯ ಕರ್ನಾಟಕ ಪತ್ರಿಕೆಯ ಕುಂದಾಪುರದ ವರದಿಗಾರರಾದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಅಲ್ಲಿಂದಿಚಿಗೆ ಜಾನ್ ಅವರು ಹಿಂತಿರುಗಿ ನೋಡಿದ್ದಿಲ್ಲ. ಸಾಮಾನ್ಯರನ್ನೂ ಸೆಳೆಯುವ ತನ್ನ ವಿಶಿಷ್ಟ ಬರವಣಿಗೆ ಶೈಲಿಯ ಮೂಲಕವೇ ಜನರನ್ನು ತಲುಪಿದ್ದಾರೆ. ಹಳ್ಳಿ ಹಳ್ಳಿಗಳನ್ನು ಸುತ್ತಿ ಕುಂದಾಪುರ ತಾಲೂಕಿನ ಮೂಲೆ ಮೂಲೆಗಳ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಇವರ ಪತ್ರಿಕೋದ್ಯಮದಲ್ಲಿನ ಸೇವೆಯನ್ನು ಪರಿಗಣಿಸಿ ರಾಜೇಶ್ ಶಿಬಾಜೆ ಪ್ರಶಸ್ತಿ, ಅಂಬೇಡ್ಕರ್ ಗೌರವ ಪ್ರಶಸ್ತಿ ಸೇರಿದಂತೆ ಹಲವು ಗೌರವ ಸನ್ಮಾನಗಳು ಸಂದಿವೆ. ಕುಂದಾಪ್ರ ಡಾಟ್ ಕಾಂ.
ಭಂಡಾರ್‌ಕಾರ‍್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಉಡುಪಿ ಜಿಲ್ಲಾ ಪ್ರಗತಿಪರರ ಚಿಂತಕರ ವೇದಿಕೆ, ಕೋಣಿ ಯಕ್ಷಗಾನ ಕಲಾ ಸಂಘದಲ್ಲಿ ಸದಸ್ಯರಾಗಿ ತೊಡಗಿಸಿಕೊಂಡಿದ್ದಾರೆ. ದಿ.ಫಿಲಿಪ್ ಡಿಸೋಜ, ತಾಯಿ ಇಸಬೆಲ್ ಡಿಸೋಜ ಅವರ ಪುತ್ರರಾದ ಜಾನ್ ಡಿಸೋಜಾ ಮೂಲತಃ ಬಸ್ರೂರಿನವರು. ಪ್ರಸ್ತುತ ಮಡದಿ ಪೂರ್ಣಿಮಾಜ್ಯೋತಿ ಹಾಗೂ ಇರ್ವರು ಪುತ್ರಿಯರೊಂದಿಗೆ ಕೋಣಿಯಲ್ಲಿ ನೆಲೆಸಿದ್ದಾರೆ. © ಕುಂದಾಪ್ರ ಡಾಟ್ ಕಾಂ.
– ಸುನಿಲ್ ಹೆಚ್. ಜಿ. ಬೈಂದೂರು