ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಸಂಸ್ಕೃತಿಯೆಂಬುದು ಒಬ್ಬ ಮನುಷ್ಯನಲ್ಲಿ ಎಲ್ಲಾ ಒಳ್ಳೆಯ ಗುಣಗಳನ್ನು ಬೆಳೆಸುತ್ತದೆ. ನಾವು ಪಡೆದುಕೊಳ್ಳುತ್ತಿರುವ ಶಿಕ್ಷಣದ ಉದ್ದೇಶವೂ ಒಳ್ಳೆಯ ಗುಣಗಳನ್ನು ಬೆಳೆಸುವುದೇ ಆದ್ದರಿಂದ ನಮ್ಮ ಕಲಿಕೆಯನ್ನು ಒಂದು ಸಂಸ್ಕೃತಿಯೆಂದೇ ಎಂದು ಆಳ್ವಾಸ್ ವಿದ್ಯಾರ್ಥಿಸಿರಿ ೨೦೧೬ರ ಅಧ್ಯಕ್ಷೆ ವಿ ಎಸ್.ಡಿ.ಎಂ. ಪ್ರೌಢಶಾಲೆಯ ವಿದ್ಯಾರ್ಥಿನಿ ಅನನ್ಯಾ ಹೇಳಿದರು.
ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಜರುಗಲಿರುವ ಆಳ್ವಾಸ್ ನುಡಿಸಿರಿ – ಕನ್ನಡ ನಾಡು, ನುಡಿ, ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿದ್ದ ಆಳ್ವಾಸ್ `ವಿದ್ಯಾರ್ಥಿ ಸಿರಿ’-ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಅವರು ಮಾತನಾಡಿದರು.
ಮನುಷ್ಯನಲ್ಲಿರುವ ಜ್ಞಾನ, ಆಲೋಚನಾ ಶಕ್ತಿಯೇ ಅವನನ್ನು ಇತರ ಪ್ರಾಣಿಗಳಿಗಿಂತ ಭಿನ್ನವಾಗಿ ನಿಲ್ಲುವಂತೆ ಮಾಡುತ್ತದೆ. ಮನುಷ್ಯನ ಪರಿಪೂರ್ಣ ವ್ಯಕ್ತಿತ್ವಕ್ಕೆ ಅವನಲ್ಲಿರುವ ಬುದ್ಧಿವಂತಿಕೆಯೇ ಬುನಾದಿಯಾಗುತ್ತದೆ. ಇದೇ ಕಾರಣಕ್ಕೆ ವೇದ ಕಾಲದಿಂದಲೂ ನಮ್ಮಲ್ಲಿ ಜ್ಞಾನಾರ್ಜನೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ’ ಎಂದರು.
ಇಂದಿನ ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಯನ್ನು ಹೊಂದುವಂತಾಗಬೇಕು. ಕೇವಲ ಪುಸ್ತ ಓದುವುದರಿಂದ ಮಾತ್ರ ನಮ್ಮ ವ್ಯಕ್ತಿತ್ವ ಪರಿಪೂರ್ಣವಾಗದು. ಅದರ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ಕೂಡ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಇಲ್ಲದಿದ್ದರೆ ಕೊನೆಯ ಪಕ್ಷ ಅದರ ಬಗ್ಗೆ ಪರಿಚಯವನ್ನಾದರೂ ಅವರು ಹೊಂದಿರುವಂತಾಗಬೇಕು. ಮಕ್ಕಳನ್ನು ಪಠ್ಯೇತರ ಚಟುವಟಿಕೆಗಳಿಂದ ದೂರವಿರಿಸಿ ಬರೀ ಪುಸ್ತಕದ ಹುಳುಗಳಾಗುವಂತೆ ಮಾಡುವುದು ಪೋಷಕರು ಮಾಡುವ ದೊಡ್ಡ ಅಪರಾಧ ಎಂದು ಅಭಿಪ್ರಾಯಪಟ್ಟರು.
ಆಳ್ವಾಸ್ ನುಡಿಸಿರಿಯಲ್ಲಿ ಈ ಬಾರಿ ವಿಶೇಷವಾಗಿ ನಡೆಯುತ್ತಿರುವ ಆಳ್ವಾಸ್ ಸಿನಿಸಿರಿ ಉದ್ಘಾಟನೆಯನ್ನು ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಉದ್ಘಾಟಿಸಿದರು. `ಸಿನಿಮಾ ಮತ್ತು ಸಾಹಿತ್ಯ ಯಾವತ್ತೂ ಬೇರೆ ಬೇರೆಯಲ್ಲ. ಆದರೆ ದುರಂತವೆಂದರೆ ನಮ್ಮಲ್ಲಿ ಸಿನಿಮಾ ಮತ್ತು ಸಾಹಿತ್ಯದ ನಡುವೆ ದೊಡ್ಡ ಕಂದರ ಸೃಷ್ಟಿಯಾಗಿದೆ. ನಾವು ಮೊದಲು ಈ ಎರಡು ಜಗತ್ತುಗಳ ನಡುವಿನ ಅಂತರವನ್ನು ಕಡಿಮೆ ಮಾಡುವತ್ತ ದೃಷ್ಟಿ ಹರಿಸಬೇಕಿದೆ. ಆಳ್ವಾಸ್ ಸಿನಿಸಿರಿ ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ. ಸಿನಿಸಿರಿಯಲ್ಲಿ ಪ್ರದರ್ಶನಗೊಳ್ಳಲಿರುವ ೧೨ ಚಿತ್ರಗಳು ವಿಭಿನ್ನ ವಿಭಿನ್ನತೆಯಿಂದ ಕೂಡಿದ್ದು, ಸಾಹಿತ್ಯ ಹಾಗೂ ಸಿನಿಮಾದ ಸೃಜನಾತ್ಮಕತೆಯ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತವೆ’ ಎಂದರು.
ಉನ್ನತ ಸಂಸ್ಕೃತಿಯನ್ನು ಹೊಂದಿರುವ ಸಮಾಜವನ್ನು ನಿರ್ಮಿಸುವಲ್ಲಿ ಒಂದು ಕುಟುಂಬದ ಪಾತ್ರ ತುಂಬಾ ಮುಖ್ಯವಾದುದು. ಇದಕ್ಕಾಗಿ ನಮ್ಮ ಮನೆಯ ಮಕ್ಕಳಲ್ಲಿ ಯುವಜನತೆಯಲ್ಲಿ, ಆರೋಗ್ಯಕರ ಗುಣಗಳನ್ನು ಬೆಳೆಸಬೇಕಾದದ್ದು ತುಂಬಾ ಮುಖ್ಯ’ ಎಂದು ಹೇಳಿದರು.
ಆಳ್ವಾಸ್ ವಿದ್ಯಾರ್ಥಿಸಿರಿಯನ್ನು ಕನ್ನಡ ರಂಗಭೂಮಿಯ ಖ್ಯಾತ ಕಲಾವಿದೆ ಬಿ. ಜಯಶ್ರೀ ಉದ್ಘಾಟಿಸಿದರು. `ಆಳ್ವಾಸ್ ಸಿನಿಸಿರಿ’-ಮಿನಿ ಚಲನಚಿತ್ರೋತ್ಸವವನ್ನು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಉದ್ಘಾಟಿಸಿದರು. ಡಾ. ಎಂ. ಮೋಹನ ಆಳ್ವ ಉಪಸ್ಥಿತರಿದ್ದರು.
ಸೃಜನಶೀಲತೆಗೆ ಗರಿ ವಿದ್ಯಾರ್ಥಿಸಿರಿ
ವಿದ್ಯಾರ್ಥಿಗಳ ಪ್ರತಿಭೆಗೆ, ಸೃಜನಶೀಲತೆಗೆ ವಿದ್ಯಾರ್ಥಿಸಿರಿ ದೊಡ್ಡ ವೇದಿಕೆಯನ್ನು ಕಲ್ಪಿಸಿತು. ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರದ್ಯುಮ್ನ ಮೂರ್ತಿ ಹಾಗೂ ಎಸ್.ಡಿ.ಎಂ. ಪ್ರೌಢಶಾಲೆಯ ವಿದ್ಯಾರ್ಥಿನಿ ಪೂರ್ಣಿಮಾ ಜೈನ್ ಕಥಾಭಿನಯ ಮಾಡಿದರೆ, ಪುತ್ತೂರಿನ ಸದನ ವಸತಿ ಶಾಲೆಯ ವಿದ್ಯಾರ್ಥಿ ತಂಡ ಹಾಗೂ ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಅಯನಾ ವಿ. ರಮಣ್ ತಮ್ಮ ನೃತ್ಯದ ಮೂಲಕ ಸಭಿಕರನ್ನು ರಂಜಿಸಿದರು.
ವಿದ್ಯಾರ್ಥಿ ಕಾರ್ಯಕ್ರಮಗಳ ಬಳಿಕ ವೇದಿಕೆ ಹಿರಿಯರ ಪಾಲಾಯಿತು. ಬೆಂಗಳೂರಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಜಾನಕಿ ಸುಂದರೇಶ್ ವಿಶೇಷ ಉಪನ್ಯಾಸ, ಪೈವಳಿಕೆಯ ಸರಕಾರಿ ಪ್ರೌಢಶಾಲೆಯ ಗೋವರ್ಧನ ಗಿರಿಧಾರಿ ಹರಿಕಥೆ ಕಾರ್ಯಕ್ರಮ ನೀಡಿದರು. ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಸರಕಾರಿ ಪ.ಪೂ. ಕಾಲೇಜಿನ ಸಹನಾ ವಿ.ಎನ್., ವಳಕಾಡಿನ ಸರಕಾರಿ ಪ್ರೌಢಶಾಲೆಯ ಕಿಶನ್, ಮಹಾಜನ ಸಂಸ್ಕೃತ ಪ್ರೌಢಶಾಲೆಯ ಶರ್ವಾಣಿ ಕೆ., ಶ್ರೀರಾಮ ಪ.ಪೂ. ಕಾಲೇಜಿನ ಸುರೇಖಾ ಮರಾಠೆ ಕವನ ವಾಚನ ನಡೆಸಿದರು. ಆಳ್ವಾಸ್ ಕಿರಿಯ ಪ್ರಾಥಮಿಕ ಶಾಲೆಯ ಮನುಜ ನೇಹಿಗ ರಂಗಜಾದೂ, ಆಳ್ವಾಸ್ ಪ.ಪೂ. ಕಾಲೇಜಿನ ಪ್ರಣವ್ ಬೆಳ್ಲಾರೆ ಏಕಪಾತ್ರಾಭಿನಯವನ್ನು ಪ್ರಸತುತ ಪಡಿಸಿದರು.