ಹೆಬ್ರಿ: ಬಸ್‌ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಯುವಕನೊಬ್ಬ ವಾಂತಿ ಮಾಡಲೆಂದು ಕಿಟಕಿಯಿಂದ ಹೊರಕ್ಕೆ ಬಾಗಿದ ವೇಳೆ ಯುವಕನ ತಲೆ ವಿದ್ಯುತ್ ಕಂಬಕ್ಕೆ ಬಡಿದು ದಾರುಣವಾಗಿ ಮೃತಪಟ್ಟ ಘಟನೆ ಹೆಬ್ರಿ ಠಾಣೆ ವ್ಯಾಪ್ತಿಯ ನಾಡ್ಪಾಲು ಜಕ್ಕನಮಕ್ಕಿ ಎಂಬಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಮೃತಪಟ್ಟ ಯುವಕನನ್ನು ಶಿವಮೊಗ್ಗ ಮೂದ ಸುಭಾನ್(18) ಎಂದು ಗುರುತಿಸಲಾಗಿದೆ. ಬಸ್ ಚಾಲಕ ಶಿವಕುಮಾರ್ ಹಾಗೂ ನಿರ್ವಾಹಕ ಮೇಘರಾಜ್ ವಿರುದ್ಧ ಮತನ ಸಂಬಂಧಿಕರು ಹೆಬ್ರಿ ಠಾಣೆಗೆ ದೂರು ನೀಡಿದ್ದಾರೆ.
ಘಟನೆಯ ವಿವರ: ಶಿವಮೊಗ್ಗದಿಂದ ಹೆಬ್ರಿ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಮಿನಿ ಬಸ್ಸಿನಲ್ಲಿ ಭಾನುವಾರ ಮುಂಜಾನೆ ಪ್ರಯಾಣಿಸುತ್ತಿದ್ದ ಸುಭಾನ್ ಸೋಮೇಶ್ವರ ಬಳಿಯ ಜಕ್ಕನಮಕ್ಕಿ ತಿರುವಿನಲ್ಲಿ ವಾಂತಿ ಮಾಡಲೆಂದು ಬಸ್ಸಿನ ಕಿಟಿಕಿ ಮೂಲಕ ತಲೆ ಹೊರ ಹಾಕಿದ್ದ. ಇದೇ ವೇಳೆ ಹೆಬ್ರಿ ಕಡೆಯಿಂದ ಎದುರಿನಿಂದ ಬಂದ ಕ್ಯಾಂಟರ್ ಲಾರಿಗೆ ಸೈಡ್ ಕೊಡುವ ಭರದಲ್ಲಿ ಮಿನಿ ಬಸ್ ಚಾಲಕ ಬಸ್ಸನ್ನು ತೀರಾ ಎಡಕ್ಕೆ ಚಲಾಯಿಸಿದ್ದರಿಂದ ತಲೆ ಹೊರ ಹಾಕಿದ್ದ ಯುವಕನ ತಲೆ ಅವನಿಗೆ ತಿಳಿಯದೆಯೇ ರಸ್ತೆ ಬದಿಗಿದ್ದ ವಿದ್ಯುತ್ ಕಂಬಕ್ಕೆ ಬಡಿದ ಪರಿಣಾಮ ಯುವಕ ಸ್ಥಳದಲ್ಲೆ ಮತಪಟ್ಟ. ಬಸ್ ಚಾಲಕನ ಅತಿವೇಗ, ಅಜಾಗರೂಕತೆಯ ಚಾಲನೆ ಹಾಗೂ ನಿರ್ವಾಹಕನ ನಿರ್ಲಕ್ಷ್ಯ ಘಟನೆಗೆ ಸಾಕ್ಷಿಯಾಗಿ ಯುವಕನ ಪ್ರಾಣ ಹಾರಿ ಹೋಗುವಂತಾಯಿತು.
ಬಸ್ಸಿನಲ್ಲಿ ವಾಂತಿಗಾಗಿ ಪ್ಲಾಸ್ಟಿಕ್ ಚೀಲ ಕಡ್ಡಾಯವಾಗಿ ವಿತರಿಸಬೇಕು ಹಾಗೂ ಎಡಗಡೆಯಲ್ಲಿ ಕಿಟಿಕಿ ತೆರೆದು ತಲೆ ಹೊರ ಹಾಕಬಾರದು ಎಂಬ ಸಾಮಾನ್ಯ ನಿಯಮವನ್ನು ಪಾಲಿಸದಿರುವುದು ಯುವಕ ಸಾವಿಗೆ ಕಾರಣವಾಯಿತು. ಮಧ್ಯಾಹ್ನದ ವೇಳೆ ಹೆಬ್ರಿ ಸರಕಾರಿ ಆಸ್ಪತ್ರೆಯಲ್ಲಿ ಮತ ಯುವಕನ ಶವ ಪರೀಕ್ಷೆ ನಡೆಸಿ ವಾರೀಸುದಾರರಿಗೆ ಒಪ್ಪಿಸಲಾಯಿತು. ಯುವಕನ ಸಂಬಂಧಿಗಳು, ಸ್ನೇಹಿತರು ಸೇರಿದಂತೆ ನೂರಾರು ಮಂದಿ ದುಖಃತಪ್ತರಾಗಿ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು.