ಮೂಡುಬಿದಿರೆ: `ಸರಕಾರಿ ಶಾಲೆಯೇ ಇರಲಿ ಅಥವಾ ಖಾಸಗಿ ಶಾಲೆಯೇ ಇರಲಿ ಅವುಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸಿ ಏಕರೂಪ ಶಿಕ್ಷಣ ನೀತಿಯನ್ನು ತರಬೇಕಿದೆ. ಈ ಎರಡೂ ವ್ಯವಸ್ಥೆಗಳ ಗೊಂದಲಗಳು ನಿರ್ಮಿಸುವ ಕಂದರಗಳನ್ನು ದಾಟುವುದು ಎಲ್ಲ ವಿದ್ಯಾರ್ಥಿಗಳಿಗೂ ಸಾಧ್ಯವಿಲ್ಲ. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳಾಗಬೇಕಿದೆ. ದೇಸೀ ಚಿಂತನೆಗಳಿಗೆ ಒತ್ತು ಕೊಟ್ಟು ಅದನ್ನು ಅನುಷ್ಠಾನಗೋಳಿಸುವ ಗಟ್ಟಿತನ ನಮ್ಮ ನಾಯಕರಿಗೆ ಬೇಕಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ-೨೦೧೬ರಲ್ಲಿ ಶಿಕ್ಷಣದ ಕುರಿತು ವಿಶೇಷೋಪನ್ಯಾಸ ನೀಡಿದ ಅವರು ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಕೆಲವು ಮಹತ್ವದ ಸಂಗತಿಗಳನ್ನು ವಿಶ್ಲೇಷಿಸಿದರು. ಹೊರರಾಜ್ಯದ ಐಎಎಸ್ ಅಧಿಕಾರಿಗಳ ಜೊತೆಗೆ ಎಸಿ ರೂಮಿನಲ್ಲಿ ಚರ್ಚೆ ಮಾಡಿ ನಮ್ಮ ರಾಜ್ಯದ ಶಿಕ್ಷಣ ನೀತಿಗಳನ್ನು ರೂಪಿಸಲಾಗುತ್ತಿದೆ. ಆದರೆ ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾರ್ಯ ಮಾಡಿದ ಅನುಭವಿಗಳ ಜೊತೆಗೆ ಚರ್ಚಿಸಿ ನಮ್ಮ ರಾಜ್ಯಕ್ಕೆ ಬೇಕಾದ ಪ್ರಬಲ ಶಿಕ್ಷಣ ನೀತಿಗಳನ್ನು ರೂಪಿಸುವ ಅವಶ್ಯಕತೆ ಖಂಡಿತ ಇದೆ. ಮಕ್ಕಳಲ್ಲಿ ಕ್ಷೀಣಿಸುತ್ತಿರುವ ಗುಣಗಳು, ಹವ್ಯಾಸಗಳು ಹಾಗೂ ಸಂಬಂಧದ ಮೌಲ್ಯಗಳನ್ನು ಮತ್ತೆ ಪುನರ್ನಿರ್ಮಿಸುವ ಶಿಕ್ಷಣ ಜಾರಿಗೆ ಬರಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತನಾಡಿದ ಡಾ. ಆಳ್ವ, ನಮ್ಮ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಮೊದಲು ಬಲಪಡಿಸಬೇಕು. ಹಾಗಾದಾಗ ಮಾತ್ರ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಯಾಗಿಸಲು ಸಾಧ್ಯ. ಕನ್ನಡ ಮಾಧ್ಯಮ ಶಾಲೆಗಳ ಪರಿಸ್ಥಿತಿ ಇಂದು ತುಂಬಾ ಚಿಂತಾಜನಕವಾಗಿದೆ. ಈ ಮಾಧ್ಯಮದ ಮಹತ್ವವನ್ನು ಅರಿಯಲು ಸೋಲುತ್ತಿರುವ ಸರಕಾರಗಳು ಹಾಗೂ ಪಾಲಕರೇ ಇದಕ್ಕೆ ಹೊಣೆಗಾರರಾಗುತ್ತಾರೆ. ಸಿಬಿಎಸ್‌ಇ ಶಾಲೆಗಳ ಮೇಲಿನ ವ್ಯಾಮೋಹ ಕನ್ನಡ ಶಾಲೆಗಳನ್ನು ಈ ಪರಿಸ್ಥಿತಿಗೆ ದೂಡಿವೆ. ಸಿಬಿಎಸ್‌ಇ ಶಾಲೆಗಳನ್ನು ಆರಂಭಿಸಿದ್ದು, ಕೇಂದ್ರ ಸರಕಾರದಿಂದ ಪದೇ ಪದೇ ವರ್ಗಾವಣೆಗೊಳ್ಳುತ್ತಿದ್ದ ನೌಕರರ ಮಕ್ಕಳ ಶಿಕ್ಷಣದ ಅಗತ್ಯತೆಯನ್ನು ಪೂರೈಸಲು. ಆದರೆ ಈ ಪರಿಸ್ಥಿತಿಯ ದುರುಪಯೋಗ ಪಡೆದುಕೊಂಡಿರುವ ಒಂದು ವರ್ಗದ ಜನರು ಸಿಬಿಎಸ್‌ಇ ಶಾಲೆಗಳನ್ನು ಒಂದು ದಂಧೆಯಾಗಿ ಮಾಡಿಕೊಂಡಿವೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದರು.
ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಅದ್ಭುತವಾದುದನ್ನು ಸಾಧಿಸುವ ಸಾಮರ್ಥ್ಯವಿದೆ ಎಂದ ಡಾ. ಮೋಹನ್ ಆಳ್ವ, ಪದವಿಪೂರ್ವ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ವಿದ್ಯಾರ್ಥಿಗಳು ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳ ಸಾಧನೆಯನ್ನೂ ಮೀರಿಸುತ್ತದೆ ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು. ಸಿಬಿಎಸ್‌ಇ ಹಾಗೂ ರಾಜ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ದೊಡ್ಡ ಅಸಮಾನತೆಗಳು ವಿದ್ಯಾರ್ಥಿಗಳ ಸಾಧನೆಯನ್ನು ಬುಡಮೇಲುಗೊಳಿಸಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಪದವಿ ಹಂತದ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದಾಗ ಅಲ್ಲಿ ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ಹಾಗೂ ಡೀಮ್ಡ್ ವಿಶ್ವ ವಿದ್ಯಾಲಯಗಳ ಆಟಾಟೋಪಗಳು ಹೆಚ್ಚಿವೆ. ಇಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗುವುದರಿಂದ ಸರಕಾರ ಈ ವಿಷಯದತ್ತ ಗಂಭೀರ ಗಮನ ಹರಿಸಬೇಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಖಂಡಿತ ಭೇಕು ಆದರೆ ಅವುಗಳೆಲ್ಲವನ್ನೂ ಒಂದೇ ಚೌಕಟ್ಟಿನಡಿಯಲ್ಲಿ ತರುವ ಅವಶ್ಯಕತೆಯಿದೆ ಎಂದರು.