ತಂತ್ರಜ್ಞಾನದಿಂದ ನಮ್ಮ ನಾಳೆಗಳು, ನಮ್ಮಿಂದ ತಂತ್ರಜ್ಞಾನದ ನಾಳೆಗಳ ನಿರ್ಮಾಣವಾಗಲಿ: ಟಿ. ಜಿ. ಶ್ರೀನಿಧಿ

Click Here

Call us

Call us

Call us

ತಂತ್ರಜ್ಞಾನ ಕ್ಷೇತ್ರದಲ್ಲಿ ಸದಾ ಹೊಸ ಬೆಳವಣಿಗೆಗಳು ಆಗುತ್ತಿರುತ್ತವೆ. ಅವುಗಳೆಲ್ಲದರ ಅನುಕೂಲತೆಗಳು ಹೆಚ್ಚುಹೆಚ್ಚು ಜನರನ್ನು ತಲುಪಬೇಕಾದರೆ ಅದು ಅವರ ಭಾಷೆಯಲ್ಲೇ ಲಭ್ಯವಿರಬೇಕು. ತಂತ್ರಜ್ಞಾನದ ಸಹವಾಸ ನಮಗೇಕೆ ಎಂದು ಕುಳಿತವರು ಕೂಡ ಅದು ತಮ್ಮ ಭಾಷೆಯಲ್ಲೇ ಲಭ್ಯವಾದಾಗ ಅತ್ತ ಒಮ್ಮೆಯಾದರೂ ನೋಡುವುದು ಖಂಡಿತ. ಈಗ ನಮ್ಮ ಮನೆಗಳಲ್ಲೇ ನೋಡಿ, ಟೆಕ್ನಾಲಜಿಯೆಲ್ಲ ನಮಗೆ ಅರ್ಥವಾಗದ್ದು ಎಂದು ಕೆಲ ವರ್ಷಗಳ ಹಿಂದಷ್ಟೇ ಹೇಳುತ್ತಿದ್ದ ಅದೆಷ್ಟು ಜನ ಹಿರಿಯರು ಇದೀಗ ಫೇಸ್ಬುಕ್ – ವಾಟ್ಸ್ಆಪ್ಗಳಲ್ಲಿ ಸಕ್ರಿಯರಾಗಿಲ್ಲ?

Call us

Click Here

“ಹಾರುವ ಹಕ್ಕಿಗೆ ಬೀಸುವ ಗಾಳಿಗೆ ಸೀಮೆಯ ಹಂಗಿಲ್ಲ, ಮನುಜ ಮನುಜನ ನಡುವಲಿ ಮಾತ್ರ ಗಡಿಗಳಿಗೆಣೆಯಿಲ್ಲ” – ಇದು ಆ ಗೀತೆಯ ಮೊದಲ ಕೆಲ ಸಾಲುಗಳ ಭಾವಾರ್ಥ.

ನಿಜ, ಬಹುತೇಕ ಸರಹದ್ದುಗಳೆಲ್ಲ ಮನುಷ್ಯರದೇ ಸೃಷ್ಟಿ. ರಾಷ್ಟ್ರಗಳ, ರಾಜ್ಯಗಳ, ಭಾಷೆಗಳ, ಧರ್ಮಗಳ ಹೆಸರಿನಲ್ಲಿ ಅದೆಷ್ಟೋ ಸರಹದ್ದುಗಳನ್ನು ನಮ್ಮ ಸುತ್ತಲೂ ನಾವೇ ನಿರ್ಮಿಸಿಕೊಂಡುಬಿಟ್ಟಿದ್ದೇವೆ.

ಇಂತಹ ಸರಹದ್ದುಗಳ ಕಾಟ ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಇವುಗಳ ಕೈವಾಡ ತಂತ್ರಜ್ಞಾನ ಕ್ಷೇತ್ರದಲ್ಲೂ ಇದೆ. ತಂತ್ರಜ್ಞಾನದ ಭಾಷೆ, ತಂತ್ರಜ್ಞಾನ ಕುರಿತ ಅರಿವು, ಅದನ್ನು ಬಳಸುವ ಅವಕಾಶ – ಹೀಗೆ ಹಲವು ಅಂಶಗಳು ಇಲ್ಲಿ ನಮ್ಮನ್ನು ನಿರ್ಬಂಧಿಸುವ ಸರಹದ್ದುಗಳಂತೆ, ಮಿತಿಗಳಂತೆ ವರ್ತಿಸಬಲ್ಲವು. ಆಶಾದಾಯಕವಾದ ನಾಳೆಗಳು ನಿರ್ಮಾಣವಾಗಬೇಕಾದರೆ ಇಂತಹ ಸವಾಲುಗಳನ್ನು ನಿವಾರಿಸಿಕೊಳ್ಳಬೇಕಾದ್ದು ಅತ್ಯಗತ್ಯ.

ಈ ಮಾತು ಬಂದಾಗಲೆಲ್ಲ ಅದು ಆಗಬೇಕು – ಇದು ಆಗಬೇಕು ಎಂಬ ಹೇಳಿಕೆಗಳು, ಅವೆಲ್ಲದರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರದ ಮೇಲೆ ಹೊರೆಸಿ ಸುಮ್ಮನಾಗುವ ಜಾಣತನ ಎರಡೂ ಸಾಮಾನ್ಯವಾಗಿ ಕಾಣಸಿಗುತ್ತವೆ. ಆದರೆ ಇದನ್ನೆಲ್ಲ ಬೇರೆ ಯಾರೋ ಮಾಡಲಿ ಎಂದು ಕಾಯುವ ಅಗತ್ಯ ಖಂಡಿತಾ ಇಲ್ಲ. ಏಕೆಂದರೆ ತಂತ್ರಜ್ಞಾನ ಕ್ಷೇತ್ರದ ಸವಾಲುಗಳನ್ನು ನಿವಾರಿಸುವಲ್ಲಿ ನಮ್ಮಂತಹ ಸಾಮಾನ್ಯ ಬಳಕೆದಾರರ ಜವಾಬ್ದಾರಿಯೂ ಬಹಳಷ್ಟಿದೆ. ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ, ಸಿನಿಕತೆಯಿಲ್ಲದೆ ಹೊಸದನ್ನು ಸ್ವಾಗತಿಸುವ ಕುತೂಹಲ, ಬಳಸಿ ನೋಡಿದ್ದರ ಕುರಿತು ರಚನಾತ್ಮಕ ಪ್ರತಿಕ್ರಿಯೆ ನೀಡುವ ಅಭ್ಯಾಸ – ಇವನ್ನೆಲ್ಲ ಬೆಳೆಸಿಕೊಳ್ಳುವುದು ಈ ನಿಟ್ಟಿನಲ್ಲಿ ಬಹಳ ಉಪಯುಕ್ತವಾಗಬಲ್ಲ ಕ್ರಮಗಳು.

Click here

Click here

Click here

Click Here

Call us

Call us

ಸಿನಿಕತೆಯ ಸಮಸ್ಯೆ ಸಣ್ಣದೇನಲ್ಲ. “ಯಂತ್ರ ಬಳಸಿ ಆಕಾಶದಲ್ಲಿ ಹಾರುವುದೆಂದರೇನು? ಅದೆಲ್ಲಾದರೂ ಸಾಧ್ಯವೇ?” ಎಂದು ರೈಟ್ ಸಹೋದರರ ತಂದೆ ಪ್ರಶ್ನಿಸಿದ್ದರೆಂದು ಹೇಳುವ ಒಂದು ಕತೆಯಿದೆ. ಆ ಕತೆ ನಿಜವೋ ಸುಳ್ಳೋ, ಆದರೆ ಹೊಸ ಸಂಗತಿಗಳ ಕುರಿತು ಇಂತಹ ಪ್ರತಿಕ್ರಿಯೆಗಳನ್ನು ನೀಡುವುದರಲ್ಲಿ ನಾವೇನೂ ಕಡಿಮೆಯಿಲ್ಲ. ಕೆಲ ವರ್ಷಗಳ ಹಿಂದೆ ಕನ್ನಡಕ್ಕೆ ಯಾಂತ್ರೀಕೃತ ಅನುವಾದ ಸೌಲಭ್ಯ ದೊರೆತಾಗ ಅದರ ಸಾಧಕ ಬಾಧಕಗಳ ಬಗ್ಗೆ ಮಾತನಾಡುವುದಕ್ಕಿಂತ ಅನುವಾದದ ತಪ್ಪುಗಳನ್ನು ಹುಡುಕುವವರ ಸಂಖ್ಯೆಯೇ ಜಾಸ್ತಿಯಾಗಿರಲಿಲ್ಲವೇ?

ಸಿನಿಕತೆ ಬೇಡ, ಸರಿ. ಹಾಗೆಂದು ಪಾಲಿಗೆ ಬಂದದ್ದೇ ಪಂಚಾಮೃತ ಎಂದುಕೊಳ್ಳುವ ಅಗತ್ಯವೂ ಇಲ್ಲ ಬಿಡಿ. ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಮಾರುಕಟ್ಟೆ ಇನ್ನೂ ಸೀಮಿತವಾಗಿರುವ ಸನ್ನಿವೇಶದಲ್ಲಿ ನಮಗೆ ಮಾರುಕಟ್ಟೆಯನ್ನು ಬೆಳೆಸುವ ಸದುದ್ದೇಶ ಇರಬೇಕು ಎನ್ನುವುದಷ್ಟೇ ಮೇಲೆ ಹೇಳಿದುದರ ಉದ್ದೇಶ.

ಮಾರುಕಟ್ಟೆಯ ವರ್ತನೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಒಂದೇ ರೀತಿ ಇರುತ್ತದೆ. ಗ್ರಾಹಕರ ಸಂಖ್ಯೆ ಮತ್ತು ಅವರ ಬೇಡಿಕೆಗಳ ಪ್ರಮಾಣ ಹೆಚ್ಚಿದಂತೆ ಆ ಬೇಡಿಕೆಗಳನ್ನು ಪೂರೈಸುವವರ ಸಂಖ್ಯೆಯೂ ಹೆಚ್ಚುತ್ತದೆ, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ದೊರಕುತ್ತವೆ. ಹೆಚ್ಚಿನ ಭೌಗೋಳಿಕ ವ್ಯಾಪ್ತಿಯಿರುವ ಇಂಗ್ಲಿಷಿನಂತಹ ಭಾಷೆಗಳಲ್ಲಿ ಈ ಪ್ರಕ್ರಿಯೆಗೆ ಜಾಸ್ತಿ ಸಮಯ ಬೇಡ; ಆದರೆ ಸೀಮಿತ ಗಾತ್ರದ ಕನ್ನಡದಂತಹ ಮಾರುಕಟ್ಟೆಗಳು ಬೆಳೆಯಲು ಕೊಂಚ ಸಮಯ ಬೇಕು. ಮಾರುಕಟ್ಟೆ ಬೆಳೆಯಲಿ ಆಮೇಲೆ ನೋಡೋಣ ಎನ್ನುವಂತೆಯೂ ಇಲ್ಲ. ಏಕೆಂದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಮಾರುಕಟ್ಟೆಯನ್ನು ಬೆಳೆಸುವ ಜವಾಬ್ದಾರಿಯೂ ನಮ್ಮದೇ.

ಮಾರುಕಟ್ಟೆ ಬೆಳೆಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯೆಂದರೆ ಹೆಚ್ಚುಹೆಚ್ಚು ಬಳಕೆದಾರರ ಸೃಷ್ಟಿ. ಈಗಾಗಲೇ ಲಭ್ಯವಿರುವ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳುವುದು, ಆ ಸವಲತ್ತುಗಳನ್ನು ಬಳಸುವುದು ಹಾಗೂ ಅವನ್ನು ನಮ್ಮ ಆಪ್ತರಿಗೆ ಪರಿಚಯಿಸುವುದರ ಮೂಲಕ ನಾವು ಇಲ್ಲಿ ನೆರವಾಗಬಹುದು. ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ಪುಸ್ತಕ, ಪತ್ರಿಕೆ ಹಾಗೂ ಜಾಲತಾಣಗಳನ್ನು ಪ್ರೋತ್ಸಾಹಿಸುವುದು ಈ ಕುರಿತು ನಾವು ಮಾಡಬಹುದಾದ ಇನ್ನೊಂದು ಕೆಲಸ.

ಅಗತ್ಯ ತಾಂತ್ರಿಕ ಜ್ಞಾನವಿರುವವರು ಹೊಸ ಸವಲತ್ತುಗಳನ್ನು ರೂಪಿಸುವ, ಲಭ್ಯ ಸವಲತ್ತುಗಳನ್ನು ಕನ್ನಡೀಕರಿಸುವ ಅಥವಾ ಕನಿಷ್ಟಪಕ್ಷ ತಮ್ಮ ಜ್ಞಾನವನ್ನು ಇತರರೊಡನೆ ಅವರ ಭಾಷೆಯಲ್ಲೇ ಹಂಚಿಕೊಳ್ಳುವ ಪ್ರಯತ್ನ ಮಾಡಬಹುದು. ಎಂಬತ್ತರ ದಶಕದಲ್ಲೇ ಕನ್ನಡ ತಂತ್ರಾಂಶವೊಂದನ್ನು ರೂಪಿಸಿ ಮುಕ್ತವಾಗಿ ವಿತರಿಸಿದ ನಾಡೋಜ ಕೆ. ಪಿ. ರಾಯರಂತಹ ಮಹನೀಯರ ಉದಾಹರಣೆಗಳು ಇಲ್ಲಿ ನಮಗೆ ಮಾರ್ಗದರ್ಶಕವಾಗಬೇಕಿವೆ.

ಅಂದಹಾಗೆ ತಂತ್ರಾಂಶಗಳನ್ನು, ಜಾಲತಾಣಗಳನ್ನು, ಕನ್ನಡದಲ್ಲೂ ನೋಡಲು ಅನುವುಮಾಡಿಕೊಡುವ ಉದ್ದೇಶದಿಂದ ಹಲವು ಅನುವಾದ ಕಾರ್ಯಕ್ರಮಗಳು ಗುಂಪುಗುತ್ತಿಗೆ, ಅಂದರೆ ಕ್ರೌಡ್ಸೋರ್ಸಿಂಗ್ ಆಧಾರದಲ್ಲಿ ನಡೆಯುತ್ತಿವೆ. ಇಂತಹ ಕೆಲಸಗಳಲ್ಲಿ ಪಾಲ್ಗೊಳ್ಳಲು ಹೆಚ್ಚಿನ ತಾಂತ್ರಿಕ ಜ್ಞಾನವೇನೂ ಬೇಕಿಲ್ಲ ಎನ್ನುವುದು ವಿಶೇಷ. ಫೇಸ್ಬುಕ್ನಲ್ಲೋ ಇನ್ನೊಂದು ಜಾಲತಾಣ ಅಥವಾ ತಂತ್ರಾಂಶದಲ್ಲೋ ಬಳಸಿರುವ ಕನ್ನಡ ಸರಿಯಿಲ್ಲ ಎಂದು ಲೇವಡಿಮಾಡಿ ಸಂದೇಶಗಳನ್ನು ಹರಿಬಿಡುವ ಬದಲು ಸೂಕ್ತ ಅನುವಾದಕ್ಕೆ ನಮ್ಮ ಕೈಲಾದಷ್ಟು ಸಹಾಯಮಾಡುವುದು ನಿಜಕ್ಕೂ ಒಳ್ಳೆಯ ಕೆಲಸವಾಗಬಲ್ಲದು.

ಸರಕಾರ ಹಾಗೂ ಸಂಘಸಂಸ್ಥೆಗಳೂ ತಂತ್ರಜ್ಞಾನದ ಹೊಸ ಹೊಸ ಸವಲತ್ತುಗಳನ್ನು ಕನ್ನಡದಲ್ಲಿ ಒದಗಿಸುವ ಮೂಲಕ ಕನ್ನಡದ ಬಳಕೆ ಹೆಚ್ಚುವಂತೆ ಮಾಡುವುದು ಸಾಧ್ಯವಿದೆ. ಈ ಕ್ಷೇತ್ರದ ಆಸಕ್ತರನ್ನು ಒಂದು ವೇದಿಕೆಯಡಿ ಕರೆತರುವುದು, ಇಂಜಿನಿಯರಿಂಗ್ ಕಾಲೇಜಿನ ಪ್ರಾಜೆಕ್ಟುಗಳಲ್ಲಿ ಕನ್ನಡದ ಕೆಲಸಕ್ಕೆ ಮಹತ್ವ ದೊರಕುವಂತೆ ಮಾಡುವುದು, ಜನರ ದೈನಂದಿನ ವ್ಯವಹಾರದ ಅಗತ್ಯಗಳಿಗೆ ಹೊಂದುವ ತಂತ್ರಜ್ಞಾನದ ಸುಲಭೋಪಾಯಗಳನ್ನು (ಮೊಬೈಲ್ ಆಪ್ ಇತ್ಯಾದಿ) ಕನ್ನಡದಲ್ಲಿ ಒದಗಿಸುವುದು – ಇವು ಈ ನಿಟ್ಟಿನಲ್ಲಿ ಮಾಡಬಹುದಾದ ಕೆಲಸಗಳು. ಕನ್ನಡ ತಂತ್ರಾಂಶಗಳನ್ನು ರೂಪಿಸುವ ಉದ್ದೇಶದಿಂದ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗಾಗಲೇ ಇಂಜಿನಿಯರಿಂಗ್ ಕಾಲೇಜುಗಳೊಡನೆ ಕೈಜೋಡಿಸುವ ಪ್ರಯತ್ನದಲ್ಲಿರುವುದನ್ನು ಇಲ್ಲಿ ವಿಶೇಷವಾಗಿ ಉದಾಹರಿಸಬಹುದು.

ಇಂತಹ ಪ್ರಯತ್ನಗಳ ಜೊತೆಗೆ ತಂತ್ರಜ್ಞಾನದ ಜಗತ್ತಿನಲ್ಲಿ, ಅದರ ಭಾಗವಾದ ಜಾಗತಿಕ ಸಂಸ್ಥೆಗಳಲ್ಲಿ ಕನ್ನಡವನ್ನೂ ಸಮರ್ಥವಾಗಿ ಪ್ರತಿನಿಧಿಸುವುದು ಸರಕಾರವೇ ಮಾಡಬೇಕಿರುವ, ಸರಕಾರ ಮಾತ್ರ ಮಾಡಬಹುದಾದ ಇನ್ನೊಂದು ಕೆಲಸ. ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಈಗಾಗಲೇ ಇರುವ ಅಪಾರ ಪ್ರಮಾಣದ ಕನ್ನಡದ ಮಾಹಿತಿಯನ್ನು ಮುಕ್ತವಾಗಿ ಒದಗಿಸುವುದು ಇನ್ನೊಂದು ಹೆಜ್ಜೆ – ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಈ ಕುರಿತ ಕೆಲಸ ಈಗಾಗಲೇ ಪ್ರಾರಂಭವಾಗಿರುವುದು ಖುಷಿಯ ಸಂಗತಿ.

ತಂತ್ರಜ್ಞಾನ ಕ್ಷೇತ್ರದಲ್ಲಿ ಸದಾ ಹೊಸ ಬೆಳವಣಿಗೆಗಳು ಆಗುತ್ತಿರುತ್ತವೆ. ಅವುಗಳೆಲ್ಲದರ ಅನುಕೂಲತೆಗಳು ಹೆಚ್ಚುಹೆಚ್ಚು ಜನರನ್ನು ತಲುಪಬೇಕಾದರೆ ಅದು ಅವರ ಭಾಷೆಯಲ್ಲೇ ಲಭ್ಯವಿರಬೇಕು. ತಂತ್ರಜ್ಞಾನದ ಸಹವಾಸ ನಮಗೇಕೆ ಎಂದು ಕುಳಿತವರು ಕೂಡ ಅದು ತಮ್ಮ ಭಾಷೆಯಲ್ಲೇ ಲಭ್ಯವಾದಾಗ ಅತ್ತ ಒಮ್ಮೆಯಾದರೂ ನೋಡುವುದು ಖಂಡಿತ. ಈಗ ನಮ್ಮ ಮನೆಗಳಲ್ಲೇ ನೋಡಿ, ಟೆಕ್ನಾಲಜಿಯೆಲ್ಲ ನಮಗೆ ಅರ್ಥವಾಗದ್ದು ಎಂದು ಕೆಲ ವರ್ಷಗಳ ಹಿಂದಷ್ಟೇ ಹೇಳುತ್ತಿದ್ದ ಅದೆಷ್ಟು ಜನ ಹಿರಿಯರು ಇದೀಗ ಫೇಸ್ಬುಕ್ – ವಾಟ್ಸ್ಆಪ್ಗಳಲ್ಲಿ ಸಕ್ರಿಯರಾಗಿಲ್ಲ?

ಕಂಪ್ಯೂಟರ್ ತಂತ್ರಾಂಶಗಳಿಗೆ ಸಂಬಂಧಪಟ್ಟಂತೆ ಇದೇ ಉದ್ದೇಶವನ್ನಿಟ್ಟುಕೊಂಡ ಅನೇಕ ಪ್ರಯತ್ನಗಳು ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಹಲವು ವರ್ಷಗಳಿಂದ ನಡೆಯುತ್ತಲೇ ಬಂದಿವೆ. ಇವೆಲ್ಲ ಪ್ರಯತ್ನಗಳ ಫಲವಾಗಿ ಸಾಕಷ್ಟು ತಂತ್ರಾಂಶಗಳ ರಚನೆಯೂ ಆಗಿದೆ. ಅವುಗಳ ಮೂಲಕ ದೊಡ್ಡ ಪ್ರಮಾಣದ ಮಾಹಿತಿಯೂ ಸ್ಥಳೀಯ ಭಾಷೆಗಳಲ್ಲೇ ಸೃಷ್ಟಿಯಾಗುತ್ತಿದೆ.
ಹೀಗಿದ್ದರೂ ಕಂಪ್ಯೂಟರಿನ ಇಡೀ ವಾತಾವರಣವನ್ನು ನಮ್ಮ ಭಾಷೆಗೆ ತರುವುದು ಮಾತ್ರ ಸಾಧ್ಯವಾಗಿರಲಿಲ್ಲ. ತಂತ್ರಾಂಶ ಕನ್ನಡದ್ದೇ ಆದರೂ ಅದನ್ನು ಡೌನ್ಲೋಡ್ ಮಾಡಲು, ನಮ್ಮ ಕಂಪ್ಯೂಟರಿನಲ್ಲಿ ಅಳವಡಿಸಿಕೊಳ್ಳಲು ಅಷ್ಟಿಷ್ಟು ಇಂಗ್ಲಿಷ್ ಅಗತ್ಯ ಇದ್ದೇ ಇತ್ತು. ಒಟ್ಟಾರೆ ಜನಸಂಖ್ಯೆಯ ಹೋಲಿಕೆಯಲ್ಲಿ ಕಂಪ್ಯೂಟರ್ ಬಳಕೆದಾರರ ಸಂಖ್ಯೆ ಕಡಿಮೆಯಿದ್ದುದರಿಂದ, ಮತ್ತು ಪ್ರಾಯಶಃ ಅವರಲ್ಲಿ ಬಹಳಷ್ಟು ಜನಕ್ಕೆ ಇಂಗ್ಲಿಷಿನ ಪ್ರಾಥಮಿಕ ಜ್ಞಾನವೂ ಇದ್ದುದರಿಂದ ಇದು ದೊಡ್ಡ ಸಮಸ್ಯೆಯೆಂದೇನೂ ಅನಿಸಿರಲಿಲ್ಲ. ಕಂಪ್ಯೂಟರಿನ ಇಡೀ ಕಾರ್ಯಾಚರಣ ವ್ಯವಸ್ಥೆಯ (ಆಪರೇಟಿಂಗ್ ಸಿಸ್ಟಂ) ಸ್ಥಳೀಯ ಭಾಷಾ ಆವೃತ್ತಿಗಳನ್ನು ರೂಪಿಸಲು ನಡೆದ ಕೆಲ ಯತ್ನಗಳಿಗೆ ಹೆಚ್ಚಿನ ಯಶ ಸಿಗದಿದ್ದರ ಹಿನ್ನೆಲೆಯಲ್ಲೂ, ಬಹುಶಃ, ಇದೇ ಕಾರಣವೇ ಇತ್ತು.

ಆದರೆ ಹೊಸ ಬಳಕೆದಾರರು, ಅದರಲ್ಲೂ ಗ್ರಾಮೀಣ ಹಿನ್ನೆಲೆಯಿಂದ ಬಂದವರು, ಕಂಪ್ಯೂಟರಿನಿಂದ ದೂರವೇ ಉಳಿಯಲಿಕ್ಕೂ ಇದು ಕಾರಣವಾಗಿತ್ತು. ಕನ್ನಡದ ಮೇಲೆ ಒಳ್ಳೆಯ ಹಿಡಿತವಿದ್ದರೂ, ಕಂಪ್ಯೂಟರಿನಲ್ಲಿ ಕನ್ನಡ ಬಳಸಿ ಏನೆಲ್ಲ ಮಾಡುವ ಆಸಕ್ತಿಯಿದ್ದರೂ ಅದನ್ನು ಆಗಮಾಡಿಸಲು ಬೇಕಾದ ಇಂಗ್ಲಿಷ್ ಜ್ಞಾನದ ಕೊರತೆ ಹಲವರನ್ನು ಕಾಡಿದ್ದನ್ನು ರಾಜ್ಯದ ಹಲವೆಡೆ ತರಬೇತಿ ಕಾರ್ಯಾಗಾರಗಳಲ್ಲಿ ನಾನೇ ಸ್ವತಃ ನೋಡಿದ ಸಂದರ್ಭಗಳು ಇಲ್ಲಿ ನೆನಪಿಗೆ ಬರುತ್ತಿವೆ.

ಮೊಬೈಲ್ ಫೋನ್ ಜನಪ್ರಿಯತೆ ಹೆಚ್ಚಿದಂತೆ ಪರಿಸ್ಥಿತಿಯಲ್ಲಿ ದೊಡ್ಡದೊಂದು ಬದಲಾವಣೆ ಕಂಡುಬಂತು. ಔಪಚಾರಿಕ ವಿದ್ಯಾಭ್ಯಾಸದ ಮಟ್ಟ, ಇಂಗ್ಲಿಷ್ ಜ್ಞಾನ ಇತ್ಯಾದಿಗಳ ನಿರ್ಬಂಧಗಳನ್ನು ಮೀರಿ ಜನರು ತಂತ್ರಜ್ಞಾನದತ್ತ ಮುಖಮಾಡುವಂತೆ ಮಾಡಿದ್ದು ಮೊಬೈಲ್ ಫೋನಿನ ಅತಿದೊಡ್ಡ ಸಾಧನೆಯೆಂದೇ ಹೇಳಬಹುದು. ಸಾಮಾನ್ಯ ಫೋನು ಸ್ಮಾರ್ಟ್ ಆಗುವುದರೊಡನೆ ಅದೇ ಒಂದು ಕಂಪ್ಯೂಟರ್ ಆಗಿ ಬದಲಾಯಿತು, ಈ ಹಿಂದೆ ಕಂಪ್ಯೂಟರ್ ಬಳಸದಿದ್ದವರೂ ಮೊಬೈಲ್ ರೂಪದ ಈ ಕಂಪ್ಯೂಟರನ್ನು ಬಳಸಲು ಪ್ರಾರಂಭಿಸಿದರು. ಅದರೊಡನೆ ಸ್ಥಳೀಯ ಭಾಷೆಯಲ್ಲಿ ತಂತ್ರಜ್ಞಾನದ ಸವಲತ್ತುಗಳನ್ನು ಒದಗಿಸುವ ಪ್ರಶ್ನೆಗೆ ಮತ್ತೆ ಜೀವಬಂತು.

ಕಂಪ್ಯೂಟರಿನಂತೆ ಸ್ಮಾರ್ಟ್ಫೋನುಗಳಲ್ಲೇನೂ ಭೌತಿಕ ಕೀಲಿಮಣೆ ಇರುವುದಿಲ್ಲ; ಹಾಗಾಗಿ ಕೀಲಿಮಣೆಯಲ್ಲಿ ಇಂಗ್ಲಿಷ್ ಅಕ್ಷರವಿದೆ – ಅದಕ್ಕಾಗಿ ಇಂಗ್ಲಿಷ್ ಕಲಿಯಿರಿ ಎನ್ನುವ ನೆಪ ಇಲ್ಲಿ ನಡೆಯುವುದಿಲ್ಲ. ತಂತ್ರಜ್ಞಾನದ ಸವಲತ್ತುಗಳು ಸ್ಥಳೀಯ ಭಾಷೆಯಲ್ಲಿ ಇರಲೇಬೇಕು ಎನ್ನುವ ವಾದಕ್ಕೆ ಒತ್ತು ದೊರೆತದ್ದು ಬದಲಾದ ಈ ಪರಿಸ್ಥಿತಿಯಲ್ಲಿಯೇ.

ಸ್ಥಳೀಯ ಭಾಷೆಯಲ್ಲಿ ಸವಲತ್ತು ಎನ್ನುವ ಬೇಡಿಕೆಗೆ ಹಲವು ಆಯಾಮಗಳಿವೆ. ಮೊಬೈಲಿನಲ್ಲೋ ಕಂಪ್ಯೂಟರಿನಲ್ಲೋ ಬೇರೆ ಯಾವುದೇ ಸಾಧನದಲ್ಲೋ ದೊರಕುವ ಮಾಹಿತಿ ನಮ್ಮ ಆಯ್ಕೆಯ ಭಾಷೆಯಲ್ಲಿರಬೇಕು ಎನ್ನುವುದು ಈ ಪೈಕಿ ಮೊದಲನೆಯದು. ಸ್ಥಳೀಯ ಭಾಷೆಯನ್ನು ಮೂಡಿಸಲು ಬೇಕಾದ ಸೌಲಭ್ಯ, ತಂತ್ರಾಂಶಗಳಲ್ಲಿ ಸ್ಥಳೀಯ ಭಾಷೆಯ ಆಯ್ಕೆಗಳು (ಮೆನು), ಸ್ಥಳೀಯ ಅಗತ್ಯಗಳನ್ನು ಪೂರೈಸುವ ತಂತ್ರಾಂಶಗಳು – ಇವೆಲ್ಲ ಈ ಹಂತದ ಬೇಡಿಕೆಗಳು.

ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ನಡೆದಿದೆ, ನಡೆಯುತ್ತಿದೆ ಎನ್ನುವುದು ಗಮನಾರ್ಹ. ಒಂದು ಕಾಲದಲ್ಲಿ ಕನ್ನಡ ತಂತ್ರಾಂಶವೆಂದರೆ ಟೈಪಿಂಗ್ ಮಾತ್ರ ಎನ್ನುವ ಭಾವನೆಯಿತ್ತು. ಆದರೆ ಈಗ ಪರಿಸ್ಥಿತಿ ಗಮನಾರ್ಹವಾಗಿ ಬದಲಾಗಿದೆ. ಯಾವುದೇ ಸ್ಪರ್ಶಸಂವೇದಿ ಪರದೆಯ (ಟಚ್ಸ್ಕ್ರೀನ್) ಮೇಲೆ ಬೆರಳನ್ನೋ ಸ್ಟೈಲಸ್ ಕಡ್ಡಿಯನ್ನೋ ಬಳಸಿ ಬರೆದದ್ದನ್ನು ಗುರುತಿಸಿ ಡಿಜಿಟಲೀಕರಿಸುವುದು ಹಾಗೂ ಕ್ಷಣಾರ್ಧದಲ್ಲಿ ಅದನ್ನು ಇತರ ಭಾಷೆಗಳಿಗೆ ಅನುವಾದಿಸಿಕೊಳ್ಳುವುದನ್ನು ಸಾಧ್ಯವಾಗಿಸುವ ಸವಲತ್ತು ಇದೀಗ ಕನ್ನಡದಂತಹ ಪ್ರಾದೇಶಿಕ ಭಾಷೆಗಳಲ್ಲೂ ಬಂದಿದೆ. ಸ್ಕ್ಯಾನ್ ಮಾಡಿದ ಪುಟಗಳಲ್ಲಿ ಏನು ಮುದ್ರಿತವಾಗಿದೆ ಎಂದು ಗುರುತಿಸುವ, ಹಾಗೂ ಅದನ್ನು ಪಠ್ಯರೂಪಕ್ಕೆ ಬದಲಿಸಿಕೊಡುವ ಓಸಿಆರ್ (ಆಪ್ಟಿಕಲ್ ಕ್ಯಾರಕ್ಟರ್ ರೆಕಗ್ನಿಶನ್) ತಂತ್ರಾಂಶ ಕೂಡ ಇದೆ. ಪಠ್ಯವನ್ನು ಧ್ವನಿಗೆ ಪರಿವರ್ತಿಸುವ (ಟೆಕ್ಸ್ಟ್ ಟು ಸ್ಪೀಚ್) ತಂತ್ರಾಂಶಗಳ ಅಭಿವೃದ್ಧಿಯತ್ತಲೂ ಸಾಕಷ್ಟು ಕೆಲಸ ನಡೆದಿದೆ. ಅಕ್ಷರದೋಷಗಳನ್ನು ಗುರುತಿಸುವ, ತಪ್ಪುಗಳನ್ನು ತಿದ್ದಿಕೊಳ್ಳಲು ನೆರವಾಗುವ ಸವಲತ್ತುಗಳೂ ಬಂದಿವೆ. ಒಂದು ಭಾಷೆಯಲ್ಲಿರುವ ಜಾಲತಾಣವನ್ನು ನಮ್ಮ ಆಯ್ಕೆಯ ಇನ್ನೊಂದು ಭಾಷೆಗೆ ಬದಲಾಯಿಸಿಕೊಳ್ಳುವುದು ಸಾಧ್ಯವಾಗುತ್ತಿದೆ. ಜಾಲತಾಣಗಳಲ್ಲಷ್ಟೇ ಅಲ್ಲ, ಜಾಲತಾಣದ ವಿಳಾಸ – ಇಮೇಲ್ ಅಡ್ರೆಸ್ಗಳಲ್ಲೂ ಸ್ಥಳೀಯ ಭಾಷೆಗಳು ಕಾಣತೊಡಗಿವೆ.

ಈಚೆಗೆ ಮಾರುಕಟ್ಟೆಗೆ ಬರುತ್ತಿರುವ ಹಲವು ಮೊಬೈಲ್ ಫೋನುಗಳಲ್ಲಿ ಇಂಗ್ಲಿಷ್ ಮಾತ್ರವೇ ಅಲ್ಲದೆ ಹಲವು ಭಾರತೀಯ ಭಾಷೆಗಳನ್ನು ಸುಲಭವಾಗಿ ಬಳಸುವುದು ಸಾಧ್ಯವಾಗಿದೆ. ಫೋನಿನ ಆಯ್ಕೆಗಳೆಲ್ಲವೂ ನಮ್ಮ ಭಾಷೆಯಲ್ಲೇ ಇರುವಂತೆ ಮಾಡಿಕೊಳ್ಳುವುದೂ ಇದೀಗ ಸುಲಭ.

ಹಲವು ವಾಣಿಜ್ಯ ಸಂಸ್ಥೆಗಳು, ಗೂಗಲ್ನಂತಹ ದಿಗ್ಗಜರೂ ಸ್ಥಳೀಯ ಭಾಷಾ ಸೌಲಭ್ಯಗಳನ್ನು ಒದಗಿಸಲು ಮುಂದೆಬಂದಿರುವ ಉದಾಹರಣೆಗಳನ್ನು ನಾವು ನೋಡುತ್ತಿದ್ದೇವೆ. ಇಂತಹ ಅನೇಕ ಸಂಸ್ಥೆಗಳು ತಾವೇ ಸೃಷ್ಟಿಸಿಕೊಂಡಿದ್ದ ಇಂಗ್ಲಿಷ್ ಮಾತ್ರವೆಂಬ ಬೇಲಿಯೂ ಈಗ ಸಡಿಲವಾಗುತ್ತಿದೆ. ನೀವು ಗೂಗಲ್ನೊಡನೆ ಹಿಂದಿಯಲ್ಲೇ ಮಾತನಾಡಬಹುದು ಎನ್ನುವಂತಹ ಜಾಹೀರಾತುಗಳು ಸಾಕಷ್ಟು ಪ್ರಮಾಣದಲ್ಲೇ ಬರುತ್ತಿವೆ. ನಾವು ಮಾತನಾಡಿದ್ದನ್ನು ಅರ್ಥಮಾಡಿಕೊಳ್ಳುವ ವ್ಯವಸ್ಥೆಗಳು, ಅನುವಾದಿಸುವಾಗ ಪದಗಳನ್ನಷ್ಟೇ ನೋಡದೆ
ಅವುಗಳನ್ನು ಬಳಸಿರುವ ಸನ್ನಿವೇಶವನ್ನೂ ಗಮನಿಸುವ ತಂತ್ರಾಂಶಗಳು ಸದ್ಯವೇ ಸ್ಥಳೀಯ ಭಾಷೆಗಳಲ್ಲೂ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

ಒಟ್ಟಿನಲ್ಲಿ, ಕಂಪ್ಯೂಟರ್ ಬಳಸಲು ಇಂಗ್ಲಿಷ್ ಬೇಕೇಬೇಕು ಎನ್ನುವ ಪರಿಸ್ಥಿತಿಯಿಂದ ಹೊರಟ ನಾವು ಇಂದು ತಂತ್ರಜ್ಞಾನವೆಂದರೆ ಇಂಗ್ಲಿಷ್ ಮಾತ್ರವೇ ಅಲ್ಲ ಎಂದು ಹೇಳುವ ಮಟ್ಟವನ್ನು ತಲುಪಿದ್ದೇವೆ. ಹೊಸ ಬಳಕೆದಾರರು ಹೆಚ್ಚುಹೆಚ್ಚಿನ ಸಂಖ್ಯೆಯಲ್ಲಿ ತಂತ್ರಜ್ಞಾನದ ಸಂಪರ್ಕಕ್ಕೆ ಬರಬೇಕೆಂದರೆ ಅವರು ಇಂಗ್ಲಿಷ್ ಕಲಿಯಲಿ ಎನ್ನದೆ ತಂತ್ರಜ್ಞಾನವೇ ತನ್ನ ಮಿತಿಗಳನ್ನೆಲ್ಲ ಮೀರಿ ಬಳಕೆದಾರರ ಭಾಷೆಯನ್ನು ಕಲಿಯುವಂತಾಗಬೇಕು. ಹಾಗೆ ಆದಾಗಲಷ್ಟೇ ಕಂಪ್ಯೂಟರ್ ಇರುವುದು ಟೈಪ್ ಮಾಡಲು, ಸ್ಮಾರ್ಟ್ಫೋನ್ ಇರುವುದು ವಾಟ್ಸಾಪ್ ಸಂದೇಶ ಕಳುಹಿಸಲು ಎನ್ನುವ ಪರಿಸ್ಥಿತಿ ಬದಲಾಗುತ್ತದೆ.

ಅಂದಹಾಗೆ ತಂತ್ರಜ್ಞಾನದ ನೆರವಿನಿಂದ ದೊರಕುವ ಸೌಲಭ್ಯಗಳು ಹೈಟೆಕ್ ಆಗಿಯೇ ಇರಬೇಕು ಎಂದೇನೂ ಇಲ್ಲ. ಕೆಲಸಮಯದ ಹಿಂದೆ ರಾಜಕಾರಣಿಯೊಬ್ಬರು ನಮ್ಮ ದೇಶದಲ್ಲಿ ಅದೆಷ್ಟೋ ದೊಡ್ಡ ಸಾಮರ್ಥ್ಯದ ಸೂಪರ್ಕಂಪ್ಯೂಟರುಗಳಿರಬೇಕು ಎಂದು ಪತ್ರಿಕಾ ಹೇಳಿಕೆ ನೀಡಿದಾಗ ಆ ಕ್ಷೇತ್ರದ ತಜ್ಞರೊಬ್ಬರು “ಸೂಪರ್ಕಂಪ್ಯೂಟರಿನ ಸಾಮರ್ಥ್ಯ ಎಷ್ಟು ಎನ್ನುವುದಕ್ಕಿಂತ ನಮ್ಮ ಅಗತ್ಯಗಳಿಗೆ ಅದನ್ನು ಎಷ್ಟು ಸಮರ್ಥವಾಗಿ ಬಳಸುತ್ತಿದ್ದೇವೆ ಎನ್ನುವುದು ಮುಖ್ಯ” ಎಂದು ಹೇಳಿದ್ದರು. ಸರಿಯಾದ ಮುಂದಾಲೋಚನೆಯಿಲ್ಲದೆ ತಂತ್ರಜ್ಞಾನವನ್ನು ಅಳವಡಿಸಲು ಹೋಗುವುದಕ್ಕೂ ವಿದ್ಯುತ್ತನ್ನೇ ಕಾಣದ ಊರ ಮಕ್ಕಳಿಗೆ ಲ್ಯಾಪ್ಟಾಪ್ ಹಂಚುವುದಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.

ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಣ್ಣಸಣ್ಣ ಕೆಲಸಗಳೂ ಮಹತ್ವದ ಪರಿಣಾಮ ಬೀರಬಲ್ಲವು ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ. ಕಣಜ ಅಂತರಜಾಲ ಕನ್ನಡ ಜ್ಞಾನಕೋಶದಲ್ಲಿ ಕನ್ನಡ ಮಾಧ್ಯಮದ ಪಠ್ಯಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಸೌಲಭ್ಯ ಒದಗಿಸಿದ ಆರೇ ತಿಂಗಳಿನಲ್ಲಿ ಬಳಕೆದಾರರು ಅರವತ್ತು ಸಾವಿರಕ್ಕೂ ಹೆಚ್ಚು ಬಾರಿ ಅವುಗಳನ್ನು ಬಳಸಿದ್ದಾರೆ. ಅಷ್ಟೇ ಅಲ್ಲ, ಪಠ್ಯಪುಸ್ತಕದ ಚಿತ್ರಗಳನ್ನು ಗೋಡೆಯ ಮೇಲೆ ಪ್ರೊಜೆಕ್ಟ್ ಮಾಡಿ ಮಕ್ಕಳಿಗೆ ವಿವರಿಸುವಂತಹ ಹೊಸ ಆಲೋಚನೆಗಳನ್ನೂ ಕಾರ್ಯಗತಗೊಳಿಸಿದ್ದಾರೆ.

ಕಣಜದ ಮೂಲಕವೇ ಲಭ್ಯವಿರುವ ಹಲವಾರು ಪತ್ರಿಕೆಗಳು, ವಿವಿಧ ಜಾಲತಾಣ ಹಾಗೂ ಆಪ್ಗಳ ಮೂಲಕ ದೊರಕುತ್ತಿರುವ ನಿಘಂಟುಗಳು, ವೈವಿಧ್ಯಮಯ ಮಾಹಿತಿ ನೀಡುತ್ತಿರುವ ವಿಕಿಪೀಡಿಯದಂತಹ ವಿಶ್ವಕೋಶಗಳು ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿವೆ. ತಂತ್ರಜ್ಞಾನದ ಜಗತ್ತನ್ನು ಹೆಚ್ಚುಹೆಚ್ಚು ಮಂದಿಗೆ ಪರಿಚಯಿಸಿ ಅವರನ್ನು ಕನ್ನಡದ ಮಾರುಕಟ್ಟೆಯ ಬಳಕೆದಾರರನ್ನಾಗಿ ರೂಪಿಸುವಲ್ಲಿ ಈ ತಾಣಗಳ ಪಾತ್ರ ಮಹತ್ವದ್ದು.

ನಾವು ಮಾತನಾಡಿದ್ದನ್ನು ಅರ್ಥಮಾಡಿಕೊಳ್ಳುವ ಸ್ಪೀಚ್ ರೆಕಗ್ನಿಶನ್ನಂತಹ ಉನ್ನತ ತಂತ್ರಜ್ಞಾನದ ವ್ಯವಸ್ಥೆಗಳು ಬೇಕಿರುವಂತೆಯೇ ಸಾಮಾನ್ಯ ಜನರ ಪ್ರಾಥಮಿಕ ಅಗತ್ಯಗಳಿಗೆ ಒದಗುವ ತಂತ್ರಜ್ಞಾನಗಳೂ ಇಂದು ಅಗತ್ಯವಾಗಿ ಬೇಕಾಗಿವೆ. ಫೋರ್ ಜಿ ಸಂಪರ್ಕ ಬಳಸಿ ಮೊಬೈಲಿನಲ್ಲೇ ಟೀವಿ ತೋರಿಸುವುದರ ಜೊತೆಗೆ ಎಸ್ಸೆಮ್ಮೆಸ್ ಮೂಲಕವೇ ಬ್ಯಾಂಕಿಂಗ್ ಸೌಲಭ್ಯ ನೀಡುವುದೂ ಇಂದಿನ ಅಗತ್ಯ.

೨೦೨೦ರ ವೇಳೆಗೆ ಅಂತರಜಾಲದ ಸಂಪರ್ಕಕ್ಕೆ ಬರುವ ಭಾರತೀಯರ ಒಟ್ಟುಸಂಖ್ಯೆ ಎಪ್ಪತ್ತು ಕೋಟಿಗಿಂತ ಹೆಚ್ಚಾಗಲಿದೆ ಎಂದು ನ್ಯಾಸ್ಕಾಮ್ನ ‘ಭಾರತದಲ್ಲಿ ಅಂತರಜಾಲದ ಭವಿಷ್ಯ’ ಎಂಬ ವರದಿ ಹೇಳುತ್ತದೆ. ತಂತ್ರಜ್ಞಾನದ ಸೌಲಭ್ಯ ಬಳಸಲು ದುಬಾರಿ ಸ್ಮಾರ್ಟ್ಫೋನನ್ನೋ ಕಂಪ್ಯೂಟರನ್ನೋ ಬಳಸಿ ಎಂದು ಇಷ್ಟೆಲ್ಲ ಜನಕ್ಕೆ ಹೇಳುವ ಬದಲು ನಿಮ್ಮ ಕೈಲಿರುವ ಒಂದೆರಡು ಸಾವಿರದ ಫೋನಿನಲ್ಲೇ ಏನೆಲ್ಲ ಮಾಡಬಹುದು ನೋಡೋಣ ಬನ್ನಿ ಎನ್ನುವವರು ಇವತ್ತಿನ ಪರಿಸ್ಥಿತಿಯಲ್ಲಿ ತುರ್ತಾಗಿ ಬೇಕಾಗಿದ್ದಾರೆ.

ತಂತ್ರಜ್ಞಾನ ಕ್ಷೇತ್ರದ ಕುರಿತು ಜನರಿಗೆ ಹೆಚ್ಚಿನ ಮಾಹಿತಿ ನೀಡುವುದರ ಅಗತ್ಯವೂ ಬಹಳಷ್ಟಿದೆ. ಹೊಸ ತಂತ್ರಜ್ಞಾನಗಳ ಬಗೆಗಷ್ಟೇ ಅಲ್ಲ, ಈಗಾಗಲೇ ಲಭ್ಯವಿರುವ ಸವಲತ್ತುಗಳನ್ನು ಜವಾಬ್ದಾರಿಯುತವಾಗಿ ಬಳಸುವುದು ಹೇಗೆ ಎನ್ನುವ ನಿಟ್ಟಿನಲ್ಲೂ ಸಾಕಷ್ಟು ಮಾಹಿತಿ ಪ್ರಸರಣದ ಅವಶ್ಯಕತೆಯಿದೆ. ಸಮಾಜ ಜಾಲಗಳಲ್ಲಿ ಇಂದು ಕಾಣುವ ತಪ್ಪು ಮಾಹಿತಿ, ದ್ವೇಷಸಾಧನೆ, ಬೇಜವಾಬ್ದಾರಿಯುತ ಬರಹಗಳು – ಮತ್ತು ಇವೆಲ್ಲವುಗಳಿಂದ ಆಗುವ ವ್ಯರ್ಥ ಕಾಲಹರಣದ ಬೆಲೆ ಎಷ್ಟು ಎನ್ನುವುದು ಎಲ್ಲರಿಗೂ ಅರಿವಾಗುವುದು ಅತ್ಯಗತ್ಯ. ಸಿಕ್ಕ ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸುವುದು ಹೇಗೆಂದು ತಿಳಿಯಲು, ಜಾಲಲೋಕದಲ್ಲಿ ನಮ್ಮ ಬೇಜವಾಬ್ದಾರಿಯುತ ಕೆಲಸಗಳ ಪರಿಣಾಮ ಏನಾಗಬಹುದೆಂದು ಅರಿಯಲು ಕೂಡ ಒಂದಷ್ಟು ಸಹಾಯ ಬೇಕಿದೆ.

ಇಂತಹ ಸಹಾಯವನ್ನು ಒದಗಿಸಿಕೊಡಲು ಪ್ರಯತ್ನಿಸುತ್ತಿರುವ ಕೆಲವು ಜಾಲತಾಣಗಳು ಕನ್ನಡದಲ್ಲಿವೆ; ಆದರೆ ಅವುಗಳ ಸಂಖ್ಯೆ ನಮ್ಮ ಜನಸಂಖ್ಯೆಯ ಹೋಲಿಕೆಯಲ್ಲಿ ಬಹಳ ಕಡಿಮೆ. ಪತ್ರಿಕೆಗಳಲ್ಲೂ ಒಂದಷ್ಟು ಒಳ್ಳೆಯ ಪ್ರಯತ್ನಗಳು ನಡೆದಿವೆ, ನಿಜ. ಆದರೆ ತಂತ್ರಜ್ಞಾನಕ್ಕೆ ಮೀಸಲಾದ ಸ್ಥಳಾವಕಾಶದ ಬಹುಪಾಲನ್ನು ಮೊಬೈಲ್ ಫೋನುಗಳೇ ಆಕ್ರಮಿಸಿಕೊಳ್ಳುತ್ತಿರುವುದು, ಮಿಕ್ಕ ಜಾಗದಲ್ಲಿ ತಂತ್ರಜ್ಞಾನದ ಪರಿಚಯಕ್ಕಿಂತ ಸುದ್ದಿಸ್ವಾರಸ್ಯಕ್ಕೆ ಪ್ರಾಮುಖ್ಯ ದೊರಕುತ್ತಿರುವುದು ಆತಂಕದ ಸಂಗತಿ. ಟೀವಿ ಮಾಧ್ಯಮದಲ್ಲಂತೂ ತಂತ್ರಜ್ಞಾನ ಕುರಿತು ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಈ ಸನ್ನಿವೇಶ ಕೊಂಚಮಟ್ಟಿಗೆ ಬದಲಾದರೂ ಅದು ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬೆಳವಣಿಗೆಗೆ ದೊಡ್ಡ ಕೊಡುಗೆಯಾಗಬಲ್ಲದು.

ಇದರ ಜೊತೆಗೆ ನಮ್ಮೊಡನೆ ನಮ್ಮ ಭಾಷೆಯಲ್ಲೇ ವ್ಯವಹರಿಸಿ ಎಂದು ವಾಣಿಜ್ಯ ಸಂಸ್ಥೆಗಳನ್ನು ಎಚ್ಚರಿಸುವ ಕೆಲಸ ಕೂಡ ಆಗುತ್ತಲೇ ಇರಬೇಕು. ಇದಕ್ಕೆ ತಂತ್ರಜ್ಞಾನದ ಸವಲತ್ತುಗಳನ್ನೇ ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂದು ಫೇಸ್ಬುಕ್ನಂತಹ ತಾಣಗಳಲ್ಲಿ ಸಕ್ರಿಯವಾಗಿರುವ ಕನ್ನಡ ಗ್ರಾಹಕ ಕೂಟಗಳು ತೋರಿಸಿಕೊಟ್ಟಿವೆ.

ತಂತ್ರಜ್ಞಾನವಷ್ಟೇ ಏಕೆ, ಯಾವ ಕ್ಷೇತ್ರದಲ್ಲೇ ಆದರೂ ಜನರ ಮನಸ್ಸನ್ನು ಸುಲಭವಾಗಿ ಮುಟ್ಟುವ ಸಂಗತಿಗಳಿಗೆ ಮಹತ್ವ ಹೆಚ್ಚು. ತಂತ್ರಜ್ಞಾನದ ಸಹಾಯದಿಂದ ನಮ್ಮ ನಾಳೆಗಳ ನಿರ್ಮಾಣವಿರಲಿ, ನಮ್ಮ ಸಹಾಯದಿಂದ ತಂತ್ರಜ್ಞಾನದ ನಾಳೆಗಳ ನಿರ್ಮಾಣವಿರಲಿ – ಕರ್ನಾಟಕದಲ್ಲಿರುವವರ ಮಟ್ಟಿಗೆ ಎಲ್ಲದರ ಕೇಂದ್ರದಲ್ಲೂ ಕನ್ನಡವೇ ಇರಬೇಕು. ಹಾಗೆ ಆದಾಗ ಮಾತ್ರ ನಾಳೆಗಳು ಸುಂದರವಾಗಿರುವುದು ಸಾಧ್ಯ.

Leave a Reply