ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರುಗಿತು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಸಮಾರಂಭಕ್ಕೆ ಚಾಲನೆ ನೀಡಿದರು.
ಹಸ್ತಪತ್ರಿಕೆ ಬಿಡುಗಡೆಗೊಳಿಸಿದ ಉದ್ಯಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಮತ್ತು ಆಸ್ಪತ್ರೆಯ ರೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ದಿಕ್ಸೂಚಿ ಭಾಷಣ ಮಾಡಿ, ಬಾಲ್ಯದಿಂದಲೇ ಮಕ್ಕಳಿಗೆ ಶಿಕ್ಷಣದ ಜೊತೆಗೆ ಅನಂತ ಕೌಶಲ್ಯಗಳನ್ನು ಕಲಿಸುವುದು ಕೂಡಾ ಭವಿಷ್ಯದ ಜೀವನಕ್ಕೆ ಸಹಕರಿಯಾಗುತ್ತದೆ. ಜೀವನದಲ್ಲಿ ಆಗಾಗ ಬರುತ್ತಿರುವ ಅವಕಾಶಗಳಿಂದ ಮಕ್ಕಳು ವಂಚಿತರಾಗದೇ ಕಠಿಣ ಪರಿಶ್ರಮ, ಸತತ ಪ್ರಯತ್ನಗಳಿಂದ ಮುನ್ನುಗ್ಗಿದಾಗ ಬೆಳಕು ಕಾಣಬಹುದು ಎಂದರು.
ಸಾಂಸಾರಿಕ ವರ್ತನೆಯ ನಿರೀಕ್ಷೆಯಂತೆ ಮಕ್ಕಳನ್ನು ಬೆಳೆಸುವುದು ಸಾಮಾನ್ಯ ಸಂಗತಿಯಾದರೂ ಕೂಡಾ ಅವರಿಗೆ ಮೌಲ್ಯ, ನೈತಿಕತೆ, ಸಾಮಾಜಿಕ ಜ್ಞಾನ ಹಾಗೂ ಸೇವಾಮನೋಭಾವನೆಯ ಬಗ್ಗೆ ತಿಳಿಹೇಳಬೇಕು. ಇದು ನಮ್ಮ ನಡೆ-ನುಡಿಯ ಮೇಲೆ ಅವಲಂಬಿತವಾಗಿದ್ದು, ಮನೆಯಿಂದಲೇ ಈ ರೀತಿಯಾಗಿ ಕಲಿಕೆ ಪ್ರಾರಂಭಿಸಬೇಕು. ಯಾವುದೇ ವಿಚಾರವನ್ನು ನಾವು ಒಪ್ಪಿಕೊಂಡು ಗೌರವಿಸುತ್ತೇವೋ ಅಲ್ಲಿಂದ ಶಿಕ್ಷಣ ಆರಂಭಗೊಳ್ಳುತ್ತದೆ ಎಂದರು.
ಸಂಪಾದನೆಗಷ್ಟೆ ವೃತ್ತಿ ಎಂಬ ಭಾವನೆ ಬಿಟ್ಟು ಬದಲಾವಣೆ ಬಯಸುತ್ತಿರುವ ವಿದ್ಯಾರ್ಥಿ ಸಮಾಜಕ್ಕಾಗಿ ಶಿಕ್ಷಕರು ಬದಲಾಗಬೇಕು. ವಿದ್ಯಾಥಿಗಳಲ್ಲಿ ಭೇಧ-ಭಾವ ತೋರದೆ ಅಪಹಾಸ್ಯದಿಂದ ಅವರನ್ನು ಕೆಣಕದೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುವ ಮೂಲಕ ವೃತ್ತಿಧರ್ಮವನ್ನು ಪಾಲಿಸಬೇಕು. ನಾವು ಮಾಡುವ ಕರ್ಮಗಳಿಂದ ವಿಮುಖರಾದರೆ ನಮಗೆ ನಾವೇ ದ್ರೋಹ ಮಾಡಿಕೊಂಡಂತೆ ಅಲ್ಲದೇ ಮುಂದಾಗುವ ಅನಾಹುತಕ್ಕೆ ನಾವೇ ಹೊಣೆಗಾರರಾಗುತ್ತೇವೆ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭ ಪ್ರತಿಭಾ ಪುರಸ್ಕಾರ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ವಿಜ್ಞಾನ ವಸ್ತುಪ್ರದರ್ಶನದ ವಿಜೇತರಿಗೆ ಬಹುಮಾನ ನೀಡಲಾಯಿತು. ತಾಪಂ ಸದಸ್ಯೆ ಸುಜಾತಾ ದೇವಾಡಿಗ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ಎಸ್. ರಾಜು ಪೂಜಾರಿ, ಸದಸ್ಯರಾದ ನಾಗರಾಜ ಗಾಣಿಗ, ಮಣಿಕಂಠ, ಯೋಗೇಶ್ ಬಂಕೇಶ್ವರ್, ಹಾವಳಿ ಬಿಲ್ಲವ, ಪ್ರಾಂಶುಪಾಲ ಪಾಲಾಕ್ಷ ಟಿ., ನಿವೃತ್ತ ಮುಖ್ಯಶಿಕ್ಷಕ ಶ್ರೀನಿವಾಸ್ ಮಾಸ್ತರ್, ವಿದ್ಯಾರ್ಥಿ ನಾಯ್ ಶರತ್ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲೆ ಜ್ಯೋತಿ ಶ್ರೀನಿವಾಸ್ ವರದಿ ವಾಚಿಸಿದರು. ಮಂಜುನಾಥ ಪಟಗಾರ್ ಸ್ವಾಗತಿಸಿ, ರಾಜಪ್ಪ ವಿ. ವಂದಿಸಿದರು. ರವೀಂದ್ರ ಪಿ. ನಿರೂಪಿಸಿದರು. ಮಧ್ಯಾಹ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.