ಬೆಂಗಳೂರು: ಪ್ರವಾಸಿಗರನ್ನು ಸೆಳೆಯಲು ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಮೂಲಸೌಕರ್ಯ ಹೆಚ್ಚಿಸಿ ಅಭಿವೃದ್ಧಿಪಡಿಸಲು ಕರ್ನಾಟಕ ರಾಜ್ಯಕ್ಕೆ ನೂತನ ಪ್ರವಾಸೋದ್ಯಮ ನೀತಿ ಸಿದ್ಧಪಡಿಸಲಾಗಿದೆ. ಈ ನೀತಿಗೆ ಸಚಿವ ಸಂಪುಟ ಸಮ್ಮತಿಸಿದ್ದು, ಶೀಘ್ರವೇ ಹೊಸ ನೀತಿ ಜಾರಿಗೊಳಿಸಲಾಗುವುದು ಎಂದು ರಾಜ್ಯದ ಪ್ರವಾಸೋದ್ಯಮ ಹಾಗೂ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ವಿದೇಶದ ಜಿಡಿಪಿಯಲ್ಲಿ ಪ್ರವಾಸೋದ್ಯಮದ ಪಾತ್ರ ಹಿರಿದು. ಕಾಂಬೋಡಿಯಾ, ಮಲೇಶ್ಯ, ಸಿಂಗಪುರ, ದುಬೈಗಳಲ್ಲಿ ಶೇ. 18ರಿಂದ 20 ಜಿಡಿಪಿ ಇದೆ. ಭಾರತದಲ್ಲಿ ಪ್ರವಾಸೋದ್ಯಮದಿಂದ ಶೇ. 6.1 ಜಿಡಿಪಿ ಇದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಐಟಿ-ಬಿಟಿಯಿಂದ ಎಂಜಿನಿಯರ್‌ಗಳಿಗೆ ಮಾತ್ರ ಕೆಲಸ ಸಿಗುತ್ತದೆ. ಆದರೆ ಪ್ರವಾಸೋದ್ಯಮ ಬೆಳೆದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಿ ಸ್ಥಳೀಯರಿಗೂ ಕೆಲಸ ಸಿಗುತ್ತದೆ ಎಂದರು.
ಪ್ರವಾಸಿ ಕೇಂದ್ರಗಳನ್ನು ನಿಯಂತ್ರಿಸಲು ಟೂರಿಸ್ಟ್ ಗೈಡ್‌ಗಳ ನೇಮಕಕ್ಕೆ ಚಿಂತನೆ ನಡೆಸಲಾಗಿದೆ. ಗೈಡ್‌ಗಳಿಗೆ ನೋಂದಣಿ, ಲೈಸೆನ್ಸ್, ಯೂನಿಫಾರಂ ನೀಡಲಾಗುತ್ತದೆ. ಪ್ರವಾಸಿ ತಾಣಗಳ ಬಗ್ಗೆ ಮುಂಚಿತವಾಗಿ ಪ್ರವಾಸಿಗರಿಗೆ ಮಾಹಿತಿ ಒದಗಿಸಲು ಟೂರಿಸ್ಟ್ ಮಿತ್ರ ಬರಲಿದ್ದಾರೆ. ವಿದೇಶಗಳಲ್ಲಿ ಇರುವಂತೆ ಟೂರಿಸ್ಟ್ ವೆಬ್‌ಸೈಟ್ ತಯಾರಿಸಿ ಅದರಲ್ಲಿ ಎಲ್ಲ ಟೂರಿಸ್ಟ್ ಸ್ಥಳಗಳು ಮತ್ತು ಪೂರಕ ವ್ಯವಸ್ಥೆಗಳ ಬಗ್ಗೆ ಪ್ರಕಟಿಸಲಾಗುತ್ತದೆ. ಈ ವ್ಯವಸ್ಥೆ ಭಾರತದಲ್ಲಿ ಇಲ್ಲ. ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಅಳವಡಿಸಿಕೊಳ್ಳಲು ಚಿಂತಿಸಲಾಗಿದೆ ಎಂದರು.
ಹೊಸ ನೀತಿಯಿಂದ ಕರಾವಳಿ ಟೂರಿಸಂ ಸಹಿತ ಪ್ರವಾಸಿ ಕೇಂದ್ರಗಳ ಗುಣಮಟ್ಟ ವೃದ್ಧಿಸಲಿದೆ. ಮೂಲಸೌಕರ್ಯ ವೃದ್ಧಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ಪ್ರವಾಸಿ ಕೇಂದ್ರಗಳ ಆಸುಪಾಸಿನವರು ಪ್ರವಾಸಿ ಸ್ಥಳಗಳನ್ನು ಲೀಸ್‌ಗೆ ಪಡೆದು ಅಭಿವೃದ್ಧಿಪಡಿಸಲು ಅವಕಾಶ ಕಲ್ಪಿಸಲಾಗಿದೆ. ಕ್ಯಾಬಿನೆಟ್‌ನಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಪ್ರವಾಸಿ ಕೇಂದ್ರಗಳಲ್ಲಿ ಮೂಲಸೌಕರ್ಯ ವೃದ್ಧಿಸಲು ಕಾರ್ಪೊರೇಟ್ ಉದ್ಯಮಿಗಳಿಗೆ ಪ್ರವಾಸಿ ತಾಣಗಳ ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 9 ಪ್ರಸ್ತಾವನೆಗಳು ಬಂದಿವೆ. ಪರಿಶೀಲನೆಯಲ್ಲಿದೆ. ತಾಣಗಳ ಅಭಿವೃದ್ಧಿಗೆ ಮೊದಲು ಅದನ್ನು ಸಂಪರ್ಕಿಸುವ ರಸ್ತೆಗಳು ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಪ್ರವಾಸಿ ಕೇಂದ್ರ ಸಂಪರ್ಕಿಸುವ ರಸ್ತೆಗಳ ಕಾಮಗಾರಿಗೆ 200 ಕೋ. ರೂ. ಅನುದಾನ ನೀಡಲಾಗಿದೆ ಎಂದು ದೇಶಪಾಂಡೆ ಹೇಳಿದರು.









