ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗಬಾರದು. ನಿಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ತಾಯಂದಿರು ತಮ್ಮ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಆ ಮಾರ್ಗದಲ್ಲಿಯೇ ಅವರನ್ನು ಮುನ್ನೆಡೆಸುವ ಜೊತೆಗೆ ಬದುಕಿಗೆ ಬೇಕಾದ ಮೌಲ್ಯಯುತ ಶಿಕ್ಷಣ, ಸಂಸ್ಕಾರ ಹಾಗೂ ರಾಷ್ಟ್ರಪ್ರೇಮವನ್ನು ಕಲಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸಬೇಕು. ಇದರಿಂದ ಮಕ್ಕಳ ಭವಿಷ್ಯ ಉತ್ತಮಗೊಳಿಸಲು ಸಾಧ್ಯವಾಗುತ್ತದೆ ಎಂದು ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಹೇಳಿದರು.
ಹೇರಂಜಾಲು ಸಹಿಪ್ರಾ ಶಾಲೆಯ ನೂತನ ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ ಮತ್ತು ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗ ವೇದಿಕೆಯಲ್ಲಿ ನಡೆದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಸಂಪೂರ್ಣ ಶಿಕ್ಷಣಾ ವೆಚ್ಚ ಭರಿಸುವ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ಸರ್ಕಾರ ವಿದ್ಯೆಗೆ ಹೆಚ್ಚು ಒತ್ತು ಕೊಡುತ್ತಿದೆ. ಶಾಲೆಯಲ್ಲಿ ದೊರೆಯುವ ಸರಕಾರಿ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉತ್ತಮ ಕಲಿಕೆಯೊಂದಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆವಹಿಸಿದ್ದ ಜಿಪಂ ಸದಸ್ಯೆ ಗೌರಿದೇವಾಡಿಗ ನೂತನ ಅಕ್ಷರ ದಾಸೋಹ ಕೊಠಡಿ ಉದ್ಘಾಟಿಸಿದರು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಖಂಬದಕೋಣೆ ಗ್ರಾಪಂ ಸದಸ್ಯ ಪರಂಜ್ಯೋತಿ ಐತಾಳ್, ನಿವೃತ್ತ ಸಹಾಯಕ ಜಾನುವಾರು ಅಧಿಕಾರಿ ನಾಗೇಶ ರಾವ್ ಹೇರಂಜಾಲು, ದಾನಿ ಸುಬ್ಬ ಪೂಜಾರಿ ಹಿತ್ಲುಮನೆ, ಕ್ರೀಡಾ ಸಾಧಕ ಮಧುಕರ, ಮುಖ್ಯಶಿಕ್ಷಕ ಜಿ. ಹೆರಿಯಣ್ಣ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಇವರು ’ಉನ್ನತಿ’ ಶಾಲಾ ಹಸ್ತಪತ್ರಿಕೆ ಬಿಡುಗಡೆಗೊಳಿಸಿದರು.
ಖಂಬದಕೋಣೆ ಗ್ರಾಪಂ ಅಧ್ಯಕ್ಷ ರಾಜೇಶ್ ದೇವಾಡಿಗ, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಸಿಆರ್‌ಪಿ ಶಶಿಧರ್ ಗಾಂವಕರ್, ಎಸ್‌ಡಿಎಂಸಿ ಅಧ್ಯಕ್ಷೆ ಜಲಜಾಕ್ಷಿ ಗಾಣಿಗ, ಉಪಾಧ್ಯಕ್ಷೆ ಅಮಿತಾ ಶೆಟ್ಟಿ, ವಿದ್ಯಾರ್ಥಿ ನಾಯಕ ವಿಜೇತ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಗೀತಾ ಸ್ವಾಗತಿಸಿ, ಕವಿತಾ ಕಾಮತ್ ವಂದಿಸಿದರು. ಶೋಭಾ ಹಾಗೂ ಗೌರವ ಶಿಕ್ಷಕಿ ಸುಮನಾ ನಿರೂಪಿಸಿದರು. ನಂತರ ಸ್ಥಳೀಯ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.