ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮ್ಮ ದೇಶ ಅಭಿವೃದ್ಧಿಯಾಗಬೇಕಾದರೆ ನಮ್ಮಲ್ಲಿರುವ ಮಾನವ ಸಂಪನ್ಮೂಲದ ಅಭಿವೃದ್ಧಿಯಾಗಬೇಕು. ಭಾರತ ದೇಶ ಮಾನವ ಸಂಪನ್ಮೂಲದಲ್ಲಿ ದೊಡ್ಡ ಅಭಿವೃದ್ಧಿ ಸಾಧಿಸಿರುವುದರಿಂದಾಗಿ ಜಗತ್ತಿನ ದೃಷ್ಟಿ ಭಾರತದ ಕಡೆ ನೆಟ್ಟಿದೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನುಡಿದರು.
ತಾಲೂಕಿನ ಬೀಜಾಡಿ-ಗೋಪಾಡಿಯ ಮೂಡು ಶಾಲಾ ವಠಾರದ ಮಿತ್ರ ಸೌಧದಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಬೀಜಾಡಿ ಹಾಗೂ ಮಿತ್ರ ಸಂಗಮ ಬೀಜಾಡಿ-ಗೋಪಾಡಿಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಕುಂದಾಪುರ ತಾಲ್ಲೂಕು ಯುವಜನ ಮೇಳ ’ಸಂಗಮ-2016’ ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿಯೇ ದೊಡ್ಡ ಯುವ ಸಮೂಹವನ್ನು ಹೊಂದಿರುವ ಭಾರತಕ್ಕೆ ಅದುವೇ ನಿಜವಾದ ಆಸ್ತಿಯಾಗಿದೆ. ಜನಸಂಖ್ಯೆಯ ಒಂದೆ ಕಾರಣಕ್ಕಾಗಿ ಸಂನ್ಮೂಲ ಕ್ರೋಢಿಕರಣಗೊಳ್ಳುವುದಿಲ್ಲ. ಸ್ಥಳೀಯವಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುವುದರಿಂದಾಗಿ ದೇಶ ಬೆಳೆಯುತ್ತದೆ. ಯುವ ಜನರಲ್ಲಿ ಸಮರ್ಪಣಾ ಮನೋಭಾವಗಳಿರಬೇಕು. ಬದುಕನ್ನು ಕಟ್ಟುವ ಜತೆಯಲ್ಲಿ ಇನ್ನೊಬ್ಬರಿಗೆ ಬದುಕು ಕಟ್ಟಿ ಕೊಡುವ ಕಾರ್ಯಗಳು ನಡೆಯಬೇಕು. ಸಾಮಾಜಿಕ ಜವಾಬ್ದಾರಿಯ ನಿರ್ವಹಣೆ ಪ್ರತಿಯೊಬ್ಬರ ಹೊಣೆ ಎನ್ನುವ ಅರಿವು ಇರಬೇಕು. ಪರಿಸ್ಥಿತಿ ಬದಲಾದಾಗ, ಅನೀವಾರ್ಯವಾಗಿ ಈ ಬದಲಾವಣೆಗಳಿಗೆ ನಾವು ಹೊಂದಿಕೊಳ್ಳಬೇಕು. ಸಂಸ್ಕೃತಿಯ ತಾಯಿ ಬೇರಿನಂತೆ ಇರುವ ಕಲಾ ಪ್ರಕಾರಗಳು ಜೀವಂತವಾಗಿಡಲು ಪ್ರತಿಯೊಬ್ಬರ ಕೊಡುಗೆಗಳು ಅವಶ್ಯ ಎಂದು ಹೇಳಿದರು.
ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಕು ಅಧ್ಯಕ್ಷತೆ ವಹಿಸಿದ್ದರು. ಬೀಜಾಡಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಕುಂದಾಪುರ ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕಾವೇರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ವೈಲೆಟ್ ಬರೆಟ್ಟೋ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿಯಮ್ಮ, ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಧನಂಜಯ ಅರಸ್, ಮಿತ್ರ ಸಂಗಮದ ಉಪಾಧ್ಯಕ್ಷ ಗಿರೀಶ್ ಕೆ.ಎಸ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ದೇವಾಡಿಗ, ಹಾಗೂ ಕೋಶಾಧಿಕಾರಿ ಶಂಕರನಾರಾಯಣ ಬಾಯಿರಿ ಇದ್ದರು. ಮಿತ್ರ ಸಂಗಮದ ಅಧ್ಯಕ್ಷ ಅನುಪ್‌ಕುಮಾರ ಬಿ.ಆರ್ ಸ್ವಾಗತಿಸಿದರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ಅಧಿಕಾರಿ ಕುಸುಮಾಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು, ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು, ಚಂದ್ರ ಬಿ.ಎನ್ ವಂದನೆ ಸಲ್ಲಿಸಿದರು.