ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಪೋಷಕರು ಶಾಲೆಗೆ ಮಕ್ಕಳನ್ನು ಸೇರಿಸಿದ ತಕ್ಷಣ ತಮ್ಮ ಜವಾಬ್ದಾರಿಗಳನ್ನು ಮರೆಯಬಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರೊಂದಿಗೆ ಪೋಷಕರ ಸಹಕಾರವೂ ಅತೀ ಮುಖ್ಯ. ಆಗ ಮಾತ್ರ ಶಿಕ್ಷಣದ ಸಾರ್ಥಕತೆ ಸಾಧ್ಯ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅಭಿಪ್ರಾಯ ಪಟ್ಟರು.
ಅವರು ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಬಗೆಗೆ ವ್ಯಾಮೋಹ ಹೆಚ್ಚುತ್ತಿದೆ. ಆದರೆ ಕನ್ನಡ ಮಾಧ್ಯಮ ಶಾಲೆಗಳು ಯಾವುದರಲ್ಲೂ ಕಡಿಮೆ ಇರುವುದಿಲ್ಲ. ಆಂಗ್ಲ ಭ್ರಮೆಯಿಂದ ಹೊರಬಂದು ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಆಗಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಪೋಸ್ತಲಿಕ್ ಕಾರ್ಮೆಲ್ ಕರ್ನಾಟಕ ಪ್ರಾಂತ್ಯಾಧಿಕಾರಿ ಸಿಸ್ಟ್ರ್ ಕಾರ್ಮೆಲ್ ರೀಟಾ ಎ.ಸಿ ಸ್ಮರಣ ಸಂಚಿಕೆಯ ಮುಖಪುಟ ಅನಾವರಣಗೊಳಿಸಿದರು.
ಗಂಗೊಳ್ಳಿಯ ಚರ್ಚಿನ ಧರ್ಮಗುರು ಅಲ್ಬರ್ಟ್ ಕ್ರಾಸ್ತಾ ,ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ ಪುತ್ರನ್ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಎಮ್ ಎಮ್ ಇಬ್ರಾಹಿಂ ಮತ್ತು ನಾಖುದಾ ಝೈನುಲ್ ಅಭಿದಿನ್ ಅವರನ್ನು ಮತ್ತು ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯ ಶಿಕ್ಷಕರು ಹಾಗು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು
ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆಯ ಮುಖ್ಯೋಪಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೋ,ಸಿಸ್ಟರ್ ಐಡಾ ಬರ್ಬೋಜ,ಸಿಸ್ಟರ್ ಸಂಧ್ಯಾ, ಉದ್ಯಮಿ ದೇವಲ್ ನಾರಿಯೋ ಕುಟಿನ್ಹೊ,ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ರಾಜು ದೇವಾಡಿಗ, ಪ್ರಧಾನ ಕಾರ‍್ಯದರ್ಶಿ ದಿವಾಕರ ಖಾರ್ವಿ ಉಪಸ್ಥಿತರಿದ್ದರು.
ಸ್ಟೆಲ್ಲಾ ಮಾರಿಸ್ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ‍್ಯದರ್ಶಿ ಸಿಸ್ಟರ್ ಜ್ಯೂಲಿ ಆನ್ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.ಸಿಸ್ಟರ್ ವಿನ್ನಿ ಡಿಸೋಜ ವರದಿ ವಾಚಿಸಿದರು. ಶಾಂತಿ ಕ್ರಾಸ್ತಾ ಬಹುಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕಿ ಫೆಲ್ಸಿಯಾನಾ ಡಿಸೋಜ ಮತ್ತು ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ‍್ಯಕ್ರಮ ನಿರೂಪಿಸಿದರು.. ದೈಹಿಕ ಶಿಕ್ಷಣ ಶಿಕ್ಷಕ ಎಡ್ವಿನ್ ಮೆಂಡೋನ್ಸಾ ವಂದಿಸಿದರು.