ಬಹ್ರೈನ್: ಮೊಗವೀರ್ಸ್ ಬಹ್ರೈನ್ ಸಂಸ್ಥೆಇತ್ತೀಚೆಗೆ ಗುದೈಬಿಯಾ ನಗರದ ಇಂಡಿಯನ್ ಕ್ಲಬ್‌ನ ಹೊರಾಂಗಣದಲ್ಲಿ ಅಟಿಲ್ ಎಂಬ ಭರ್ಜರಿ ತುಳುನಾಡ ಖಾದ್ಯ ಮೇಳವನ್ನು ಆಯೋಜಿಸಿತು.
ಸಂಸ್ಥೆ ಹುಟ್ಟಿದ ವರ್ಷದಿಂದ ಅಟಿಲ್ ಶೀರ್ಷಿಕೆಯೊಂದಿಗೆ ಆರಂಭಗೊಂಡ ಈ ತುಳುನಾಡ ಮಹಾ ಆಹಾರೋತ್ಸವ ಮೊಗವೀರ್ಸ್ ಬಹ್ರೈನ್‌ನ ಅತೀ ಆದ್ಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ದ್ವೀಪ ರಾಷ್ಟ್ರದ ತುಳು-ಕನ್ನಡಿಗ ಸಮುದಾಯದ ಮಧ್ಯೆ ಅತ್ಯಂತ ಜನಮೆಚ್ಚುಗೆ ಪಡೆಯುತ್ತಾ ಬಂದ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ. ಸಂಸ್ಥೆಯ ಹಿಂದಿನ ಆಹಾರ ಮೇಳಗಳಂತೆ ಈ ಬಾರಿಯ ಅಟಿಲ್ ಮೇಳದಲ್ಲೂ ತುಳು- ಕನ್ನಡಿಗರಿಗಾಗಿ ತಾಯ್ನಾಡಿನ ಸಾಂಪ್ರದಾಯಿಕ ಶೈಲಿಯ ಮನೆಪಾಕದ ಖಾದ್ಯ ಶಾಕಾಹಾರಿ, ಮಾಂಸಾಹಾರಿ ಖಾದ್ಯಗಳಲ್ಲದೆ, ಹಬ್ಬದ ತಿಂಡಿ-ತಿನಿಸುಗಳನ್ನು ಪ್ರದರ್ಶಿಸಿದರು.
ಸಂಸ್ಥೆಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ಶರ್ಮಿಳಾ ಭಾಸ್ಕರ್ ಕಾಂಚನ್ ಆಹಾರೋತ್ಸವಕ್ಕೆ ಶುಭ ಹಾರೈಸಿದರು. ಹಿರಿಯರಾದ ವಿಟಲ ಸುವರ್ಣ ಅವರು ತೆಂಗಿನಕಾಯಿ ಒಡೆಯುವ ಮೂಲಕ ಆಹಾರ ಮೇಳವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಉದ್ಘಾಟಿಸಿದರು. ಅನಂತರ ತುಳುನಾಡ ಸಂಸ್ಕೃತಿಯಂತೆ ಸಂಸ್ಥೆಯ ಮಹಿಳಾ ಸದಸ್ಯೆಯರು ಸುನಂದಾ ಸೀತಾರಾಮ್ ಪುತ್ರನ್ ನೇತೃತ್ವದಲ್ಲಿ ಬಾಳೆ ಎಲೆಯ ಮೇಲೆ ವಿವಿಧ ಭಕ್ಷéಗಳನ್ನು ಬಡಿಸಿ ಅದನ್ನು ಸಾಂಕೇತಿಕವಾಗಿ ಪ್ರಕೃತಿಗೆ ಸಮರ್ಪಿಸುವ ಮೂಲಕ ಖಾದ್ಯ ವೈವಿಧ್ಯಗಳ ಪ್ರದರ್ಶನ ಮತ್ತು ಆಸ್ವಾದನೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಹಲವು ಬಗೆಯ ಹಸಿತರಕಾರಿ ಮತ್ತು ಹಸಿ ಮೀನುಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಕಾರ್ಯಕ್ರಮದ ಕೊನೆಯಲ್ಲಿ ಅವೆಲ್ಲವನ್ನೂ ತಾಯ್ನಾಡಿನ ಶೈಲಿಯಲ್ಲಿ ಏಲಂ ಹಾಕಲಾಯಿತು. ಯಶಸ್ವಿಯಾದ ಆಹಾರ ಮೇಳಕ್ಕೆ ನೆರೆಯ ಸೌದಿ ಅರೇಬಿಯಾದಿಂದಲೂ ಆಹ್ವಾನಿತರು ಆಗಮಿಸಿದ್ದರು