ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ವಾಮಿ ವಿವೇಕಾನಂದರ 154ನೇ ಜನ್ಮದಿನದ ಅಂಗವಾಗಿ ಬೈಂದೂರಿನಲ್ಲಿ ಜ.28ರಂದು ನಡೆಯುವ ವಿವೇಕ ಪರ್ವ ಕಾರ್ಯಕ್ರಮದಲ್ಲಿ ಹದಿನೈದು ಸಾವಿರಕ್ಕೂ ಮಿಕ್ಕಿ ಜನರು ಸೇರುವ ನಿರೀಕ್ಷೆಯಿದ್ದು ಕಾರ್ಯಕರ್ತರು ತಮ್ಮ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿಭಾಯಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಾ ಸಂಘದ ಪ್ರಮುಖ ಗೋಪಾಲಕೃಷ್ಣ ಶಿರೂರು ಹೇಳಿದರು.
ಅವರು ಬೈಂದೂರು ಸೀತಾರಾಮಚಂದ್ರ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಸಮರ್ಥ ಭಾರತ ಬೈಂದೂರು ಸಂಘಟನೆಯ ಪೂರ್ವಭಾರಿ ಸಭೆ ಹಾಗೂ ಬೈಠಕ್‌ನಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಬೈಂದೂರಿನ ಗಾಂಧಿಮೈದಾನದಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಸಂಘಚಾಲಕ ಡಾ. ವಾಮನ ಶೆಣೈ ಉಪಸ್ಥಿತರಿರಲಿದ್ದು, ನಟ ಉಪೇಂದ್ರ ಅತಿಥಿಯಾಗಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮುಖ್ಯ ಭಾಷಣಕಾರರಾಗಿ ಉಪಸ್ಥಿತರಿರಲಿದ್ದಾರೆ. ಯಡ್ತರೆಯಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಕಾರ್ಯಕ್ರಮಕ್ಕೆ ದೂರದಿಂದ ಆಗಮಿಸುವವರಿಗೆ ವಾಹನದ ವ್ಯವಸ್ಥೆ ಮುಂತಾದ ಪೂರಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದವರು ವಿವರಿಸಿದರು.
ಸಮರ್ಥ ಭಾರತದ ಕಾರ್ಯಕರ್ತರಿಗೆ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ, ಕಾರ್ಯಕ್ರಮದ ರೂಪುರೇಷೆಗಳ ಬಗೆಗೆ ಅಭಿಪ್ರಾಯ ಸಂಗ್ರಹಿಸಲಾಯಿತು. ಸಮರ್ಥ ಭಾರತ ಬೈಂದೂರು ಇದರ ಕಾರ್ಯಾಧ್ಯಕ್ಷ ಜಯಾನಂದ ಹೋಬಳಿದಾರ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು. ಸಂಚಾಲಕ ಶ್ರೀಧರ ಬಿಜೂರು ಕಾರ್ಯಕ್ರಮ ನಿರೂಪಿಸಿದರು.