ಚೆನ್ನೈ: ತಮಿಳುನಾಡಿನಲ್ಲೊಂದು ‘ತಾಳಿ ಕಿತ್ತೊಗೆಯುವ ಚಳವಳಿ’ ಶರುವಾಗಿದ್ದು ಅದೀಗ ವಿವಾದದ ರೂಪ ಪಡೆದಿದೆ. ಜನತಾ ಪರಿವಾರದಂತೆ ಒಡೆದು ಚೂರಾಗಿರುವ ದ್ರಾವಿಡ ಪಕ್ಷಗಳ ಮೂಲಸ್ಥಾನ ‘ದ್ರಾವಿಡ ಕಳಗಂ’ ಪಕ್ಷ ಈ ಆಂದೋಲನದ ರೂವಾರಿ. ಪ್ರಗತಿಪರರರು ಹಾಗೂ ಸಂಸ್ಕೃತಿ ಪ್ರಿಯರ ಮಧ್ಯೆ ಇದು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಪರ-ವಿರೋಧದ ಮಧ್ಯೆಯೇ ದ್ರಾವಿಡ ಕಳಗಂ ಆಯೋಜಿಸಿದ್ದ ‘ಮಂಗಳಸೂತ್ರ ಕಿತ್ತೊಗೆಯುವ ಕಾರ‌್ಯಕ್ರಮ’ಕ್ಕೆ ಮದ್ರಾಸ್ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ. ಆದರೆ, ಹೈಕೋರ್ಟ್ ತಡೆ ನೀಡುವಷ್ಟರಲ್ಲೇ 25 ಮಂದಿ ಮಹಿಳೆಯರು ತಾಳಿ ಕಿತ್ತೊಗೆದಿದ್ದಾರೆ.
ಕಳೆದ ತಿಂಗಳು ತಮಿಳು ವಾಹಿನಿಯೊಂದು ‘ತಾಳಿ ಒಂದು ವರವೇ? ಶಾಪವೇ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದಕ್ಕೆ ಆರೆಸ್ಸೆಸ್ ಅಂಗಸಂಸ್ಥೆಯಾದ ‘ಹಿಂದೂ ಮುನ್ನಾನಿ’ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕಾರ‌್ಯಕ್ರಮ ಪ್ರಸಾರ ಸ್ಥಗಿತಗೊಂಡಿತ್ತು. ಇದನ್ನು ಖಂಡಿಸಿ ‘ದ್ರಾವಿಡ ಕಳಗಂ’ ಪಕ್ಷವು ಏ.14ರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ‘ತಾಳಿ ಕಿತ್ತೊಗೆಯುವ ಹಾಗೂ ಗೋಮಾಂಸ ಸೇವನೆಯ ಕಾರ‌್ಯಕ್ರಮ’ ಹಮ್ಮಿಕೊಂಡಿತ್ತು. ಇದರಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರೂ, ತಾಳಿ ಕಿತ್ತಿದ್ದು 25 ಮಹಿಳೆಯರು ಮಾತ್ರ. ”ತಾಳಿ ಎಂಬುದು ಬೋಗದ ಹಾಗೂ ದಾಸ್ಯದ ಸಂಕೇತ. ಇದನ್ನು ಕತ್ತಿನಿಂದ ಕಿತ್ತೊಗೆದ ನಂತರ ಮನಸ್ಸು ನಿರಾಳವಾಯಿತು. ಕುತ್ತಿಗೆಯಲ್ಲಿ ಮಾಂಗಲ್ಯವಿರಲೇಬೇಕೆಂಬ ನಿಯಮವೇನೂ ಇಲ್ಲ. ಅದಿಲ್ಲದಿದ್ದರೆ ತೊಂದೆರೆ ಏನೂ ಆಗದು,” ಎಂಬುದು ಕಾರ‌್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ಹೇಳಿದರು. ಕೆಲ ಮಹಿಳೆಯರು ಕಪ್ಪು ಉಡುಗೆ ತೊಟ್ಟು ಮಾಂಗಲ್ಯವೆಂಬ ಕಟ್ಟಳೆಯನ್ನು ಮುರಿಯುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಹೈಕೋರ್ಟ್ ತಡೆ ಏಕೆ?:
ಅಖಿಲ ಭಾರತ ಹಿಂದೂ ಮಹಾ ಸಭಾ, ಹಿಂದೂ ಮುನ್ನಾನಿ ಸಂಘಟನೆಗಳ ವಿರೋಧದ ನಡುವೆ ಈ ವಿವಾದಿತ ಕಾರ‌್ಯಕ್ರಮಕ್ಕೆ ಸೋಮವಾರವೇ ಚಾಲನೆ ದೊರೆತಿತ್ತು. ಆದರೆ ಧಾರ್ಮಿಕ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ ಎಂಬ ಕಾರಣಕ್ಕೆ ರಾಜ್ಯ ಸರಕಾರದ ಆಣತಿಯಂತೆ ಪೊಲೀಸರು ‘ತಾಳಿ ತೆಗೆಯುವ ಹಾಗೂ ಗೋಮಾಂಸ ಸೇವನೆಯ ಕಾರ‌್ಯಕ್ರಮ’ಕ್ಕೆ ನಿರ್ಬಂಧ ಹೇರಿದ್ದರು. ಇದನ್ನು ಪ್ರಶ್ನಿಸಿ ದ್ರಾವಿಡ ಕಳಗಂ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಹರಿ ಪರಂಧಾಮನ್ ಅವರಿದ್ದ ಏಕ ಸದಸ್ಯ ನ್ಯಾಯಪೀಠವು, ಅಭಿವ್ಯಕ್ತಿ ಸ್ವಾತಂತ್ರವೂ ಸೇರಿದಂತೆ ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ನೀಡಿರುವ ಹಕ್ಕುಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ನಿರ್ಬಂಧ ತೆರವುಗೊಳಿಸಿತ್ತು.
ಇದಾದ ನಂತರ, ಮಂಗಳವಾರ ಬೆಳಗ್ಗೆ ‘ದ್ರಾವಿಡ ಕಳಗಂ’ ಪಕ್ಷವು ಕಾರ‌್ಯಕ್ರಮ ನಡೆಸಲು ಶುರು ಮಾಡಿತು. ಅದೇ ಹೊತ್ತಿಗೆ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದದ ಆದೇಶ ಪ್ರಶ್ನಿಸಿ, ರಾಜ್ಯ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಕೆ.ಅಗ್ನಿಹೋತ್ರಿ ಹಾಗೂ ಎಂ.ವೇಣುಗೋಪಾಲ್ ನೇತೃತ್ವದ ವಿಭಾಗೀಯ ಪೀಠವು, ”ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತವಾಗಿ ಸಭೆ ಸೇರುವ ಹಾಗೂ ಮೂಲಭೂತ ಹಕ್ಕಿನ ಬಳಕೆಯು ಎಲ್ಲೆ ಮೀರಿದಾಗ ಅದು ಸಂಸ್ಕೃತಿಯ ನಾಶಕ್ಕೆ ಎಡೆಮಾಡಿಕೊಡುತ್ತದೆ. ಸಂವಿಧಾನದ ಕಲಂ 19(2) (3) ಅನುಷ್ಠಾನ ಸಮರ್ಪಕವಾಗದಿದ್ದರೆ ಕಾನೂನು ಸುವ್ಯವಸ್ಥೆಗೆ ತೊಡಕುಂಟಾಗಬಲ್ಲದು. ಹಾಗಾಗಿ ತಾಳಿ ತೆಗೆಯುವ ಕಾರ‌್ಯಕ್ರಮಕ್ಕೆ ತಡೆ ನೀಡಲಾಗುತ್ತಿದೆ,” ಎಂದು ಹೇಳಿ, ಮುಂದಿನ ವಿಚಾರಣೆಯನ್ನು ಏ. 28ಕ್ಕೆ ನಿಗದಿಗೊಳಿಸಿತು.
ಸುದ್ದಿ ಕೃಪೆ: ವಿಜಯ ಕರ್ನಾಟಕ