ಕುಂದಾಪ್ರ ಡಾಟ್ ಕಾಂ ಸುದ್ದಿ.
ಮರವಂತೆ: ನಾವುಂದದ ಬೊಬ್ಬರ್ಯನ ಹಿತ್ಲು ಪದ್ಮಾವತಿ ಅಮ್ಮನವರ ಪುಷ್ಕರಿಣಿಯನ್ನು ಸಣ್ಣ ನೀರಾವರಿ ಇಲಾಖೆಯ ರೂ. ೪೫ ಲಕ್ಷ ಅನುದಾನದಲ್ಲಿ ಪುನರುತ್ಥಾನಗೊಳಿಸುವ ಕಾಮಗಾರಿಗೆ ಶಾಸಕ ಕೆ. ಗೋಪಾಲ ಪೂಜಾರಿ ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು. ಮಾತನಾಡಿದ ಅವರು ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಪಡೆದಿದ್ದ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ನಾಲ್ಕು ಶಾಸಕತ್ವ ಅವಧಿಗಳಲ್ಲಿ ಕಂಡುಕೇಳರಿಯದ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ಪ್ರಸಕ್ತ ಅವಧಿಯ ಉಳಿದೊಂದು ವರ್ಷಾವಧಿಯಲ್ಲೂ ಅದರ ವೇಗ ಇನ್ನಷ್ಟು ಹೆಚ್ಚಲಿದೆ. ಈ ದೇವಸ್ಥಾನದ ಅನ್ಯ ಕೆಲಸಗಳಿಗೂ ಅನುದಾನ ಒದಗಿಸಲಾಗುವುದು. ಮುಂದಿನ ತಿಂಗಳಿನಲ್ಲಿ ನಡೆಯುವ ವಿಧಾನ ಸಭೆಯ ಬಜೆಟ್ ಅಧಿವೇಶನದಲ್ಲಿ ಬೈಂದೂರು ತಾಲೂಕು ಆರಂಭದ ಘೋಷಣೆ ಮಾಡುವಂತೆ ಮುಖ್ಯ ಮಂತ್ರಿಗಳ ಮೇಲೆ ಒತ್ತಡ ತರಲಾಗಿದೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಶ್ಯಾಮಲಾ ಕುಂದರ್, ಜಗದೀಶ ಪೂಜಾರಿ, ಗ್ರಾ.ಪಂ ಉಪಾಧ್ಯಕ್ಷೆ ಜಯಂತಿ ಪುತ್ರನ್, ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಖಾರ್ವಿ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರವೀಣ್, ಸಹಾಯಕ ಇಂಜಿನಿಯರ್ ಆಲ್ವಿನ್ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕಕುಮಾರ ಶೆಟ್ಟಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಆನಂದ ತೋಳಾರ್ ವಂದಿಸಿದರು. ರಾಜ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು.