ಕುಂದಾಪುರ: ಜನರ ಬೇಡಿಕೆಗಳನ್ನು ಪರಿಗಣಿಸಿ ಈ ಅಡೆತಡೆಗಳನ್ನು ನಿವಾರಣೆ ಮಾಡಿಕೊಂಡು ರೈತರಿಗೆ ಯೋಜನೆಯ ಮೊದಲ ಹಂತದ ನೀರನ್ನು ಬಿಡಲು ಸರಕಾರ ಕ್ರಮ ಕೈಗೊಂಡಿರುವುದನ್ನು ಜಿಲ್ಲಾ ರೈತ ಸಂಘ ಸ್ವಾಗತಿಸುತ್ತದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ ತಿಳಿಸಿದ್ದಾರೆ.
ಮಂಗಳವಾರ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಯೋಜನೆಯ ಹೇಳಲಾದ ಎಡದಂಡೆ, ಬಲದಂಡೆ ಕಾಲುವೆಗಳಿಗೆ ಹಾಗೂ ಏತ ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಕೃಷಿ ಪ್ರದೇಶಗಳಿಗೆ ನೀರುಣಿಸುವ ಕಾರ್ಯ ಸೂಚಿಯಲ್ಲಿ ಯಾವುದೆ ಬದಲಾವಣೆ ಮಾಡದಂತೆ ಹಾಗೂ ಯೋಜನೆಯ ಉಳಿದ ಕಾಮಗಾರಿಗಳನ್ನು ಕಾಲ ಮಿತಿಯೊಳಗೆ ಪೂರೈಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು. ವಾರಾಹಿ ನೀರಾವರಿ ಯೋಜನೆಯೊಂದಿಗೆ ಪ್ರಾರಂಭಿಸಲಾದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನಶ್ಚೇತನದ ಕುರಿತು ಏಕಪಕ್ಷೀಯ ತೀರ್ಮಾನ ತರವಲ್ಲ, ಈ ಭಾಗದ ರೈತರಿಗೆ ಅನೂಕೂಲವಾಗುವ ಹಾಗೂ ಇಲ್ಲಿವ ಮಣ್ಣಿನ ಜೈವಿಕ ಅಂಶಗಳಿಗೆ ಪೂರಕವಾಗುವ ಬೆಳೆಗಳ ಕುರಿತು ತಜ್ಞರ ಮಾಹಿತಿ ಪಡೆದು, ಸಕ್ಕರೆ ಕಾರ್ಖಾನೆಯನ್ನು ಉಳಿಸಿಕೊಳ್ಳುವ ಕುರಿತು ಮನವಿ ಮಾಡಲಾಗುವುದು.
ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆಯ ಆಸ್ತಿಯನ್ನು ಭೂ ಮಾಫಿಯಾಕ್ಕೆ ಬಲಿಯಾಗದಂತೆ ರೈತ ಸಂಘ ಕಣ್ಗಾವಲು ನಡೆಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲೆಯ ಜನರ ಆತಂಕಗಳಿಗೆ ಕಾರಣವಾಗಿರುವ ಕಸ್ತೂರಿ ರಂಗನ್ ವರದಿ, ಸಿ.ಆರ್.ಝಡ್, ಕುಮ್ಕಿ ಜಮೀನಿನ ಕುರಿತಾದ ತೊಡಕುಗಳನ್ನು ನಿವಾರಣೆ ಮಾಡಲು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ಜಿಲ್ಲಾ ರೈತ ಸಂಘದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು.
ವಾರಾಹಿಯ ಮೂಲ ಯೋಜನೆಯಲ್ಲಿ ಹೇಳಲಾದ ಅಂಶಗಳಿಗೆ ಪೂರಕವಾಗಿ ಹಾಗೂ ಜಿಲ್ಲೆಯ ಕೃಷಿಕರಿಗೆ ಅನುಕೂಲವಾಗುವ ದಿಸೆಯಲ್ಲಿ ಕಾಲುವೆಗಳಲ್ಲಿ ಪೂರ್ಣ ಪ್ರಮಾಣದ ನೀರನ್ನು ಹರಿಸುವಂತೆಯೂ ಸರಕಾರದ ಪ್ರಮುಖರನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಭಾರತೀಯ ಸಂಘದ ಅಧ್ಯಕ್ಷ, ಉಡುಪಿ ಜಿಲ್ಲಾ ರೈತ ಸಂಘದ ಪ್ರಮುಖರಾದ ಬಿ.ವಿ ಪೂಜಾರಿ, ಉಡುಪಿ ಜಿಲ್ಲಾ ರೈತ ಸಂಘದ ಪ್ರಮುಖರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ರಾಜೇಶ್ ಕೆ.ಸಿ., ನ್ಯಾಯವಾದಿ ಉಮೇಶ್ ಶಾನ್ಕಟ್ಟು, ಸಂತೋಷ್ ಶೆಟ್ಟಿ ಬಲಾಡಿ, ಹರಿಪ್ರಸಾದ ಶೆಟ್ಟಿ, ಸೀತಾರಾಮ ಗಾಣಿಗ ಮಾತನಾಡಿದರು.
ರೈತ ಸಂಘದ ಪ್ರಮುಖರಾದ ಶೇಷಗಿರಿ ಗೋಟ ಬೀಜಾಡಿ, ಎಸ್. ರಾಜು ಪೂಜಾರಿ ಬೈಂದೂರು, ಕೆದೂರು ಸದಾನಂದ ಶೆಟ್ಟಿ, ಎಸ್.ದಿನಕರ ಶೆಟ್ಟಿ, ಸರ್ವೋತ್ತಮ ಹೆಗ್ಡೆ ಹಾಲಾಡಿ, ವಿನಯ್ ಶೆಟ್ಟಿ ಅಂಪಾರು, ದೇವಾನಂದ ಶೆಟ್ಟಿ ಬಸ್ರೂರು, ದಿನೇಶ್ ಹೆಗ್ಡೆ ಮೊಳಹಳ್ಳಿ, ಸತೀಶ್ ಕಿಣಿ ಬೆಳ್ವೆ, ಪ್ರಸನ್ನಕುಮಾರ ಶೆಟ್ಟಿ ಕೆರಾಡಿ, ವಾಸುದೇವ ಪೈ ಸಿದ್ದಾಪುರ ಉಪಸ್ಥಿತರಿದ್ದರು. ಈ ಸಂದರ್ಭ ಕಳೆದ ನಾಲ್ಕು ದಶಕಗಳಿಂದ ವಿದ್ಯುತ್ ಕಾಣದ ಗ್ರಾಮಕ್ಕೆ ವಿದ್ಯುತ್ ತರಲು ಶ್ರಮಿಸಿದ ಚಿತ್ತೂರು ಗ್ರಾಮ ಪಂಚಾಯತ್ ಸದಸ್ಯ ಅರುಣ್ ಶೆಟ್ಟಿಯವರನ್ನು ಜಿಲ್ಲಾ ರೈತ ಸಂಘದ ಪರವಾಗಿ ಸಮ್ಮಾನಿಸಲಾಯಿತು.
ಬಸ್ರೂರು ವಿ.ಎಸ್.ಎಸ್ ಬ್ಯಾಂಕ್‌ನ ಉಪಾಧ್ಯಕ್ಷ ವಿಕಾಸ್ ಹೆಗ್ಡೆ ಬಸ್ರೂರು ಸ್ವಾಗತಿಸಿದರು. ಸದಾಶಿವ ಶೆಟ್ಟಿ ಶಂಕರನಾರಾಯಣ ವಂದಿಸಿದರು.