ಕುಂದಾಪ್ರ ಡಾಟ್ ಕಾಂ ಸುದ್ದಿ
ಕೊಲ್ಲೂರು: ಕೊಲ್ಲೂರಿನಲ್ಲಿ ಮಾರ್ಚ್ 10ರಂದು ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವದ ಹೊರೆ ಕಾಣಿಕೆ ಸಮರ್ಪಣೆ ಮಾ. 6ರಿಂದ 8ರ ತನಕ ನಡೆಯಿತು.
ಕುಂದಾಪುರ ತಾಲೂಕಿನ ವಿವಿಧ ಗ್ರಾಮಗಳಿಂದ, ಸಂಘ ಸಂಸ್ಥೆಗಳಿಂದ ಹಸಿರು ಹೊರೆ ಕಾಣಿಕೆ ಸಮರ್ಪಣೆ ಮಾಡಲಾಯಿತು. ಮೂರು ದಿನಗಳ ಕಾಲ ನಿತ್ಯವೂ ವಿವಿಧ ಭಾಗಗಳಿಂದ ಹೊರೆ ಕಾಣಿಕೆ ಹರಿದು ಬಂದವು.
ಸಿಂಗಾರ ಹೂವಿನ ಗೊನೆ, ಅಕ್ಕಿ, ತೆಂಗಿನಕಾಯಿ, ಬೆಲ್ಲ, ವಿವಿಧ ಧಾನ್ಯಗಳು, ತರಕಾರಿ, ಹಣ್ಣು, ಅಡಿಕೆ ಹೀಗೆ ಸಾಕಷ್ಟು ಪ್ರಮಾಣದಲ್ಲಿ ಹೊರೆಕಾಣಿಕೆ ನಾಗದೇವರ ಪುಣ್ಯ ಕಾರ್ಯಕ್ಕೆ ಸಮರ್ಪಣೆಗೊಂಡಿತು. ಭಕ್ತಾದಿಗಳು ಸ್ವಯಂಪ್ರೇರಿತವಾಗಿ ಭಕ್ತಿ ಪೂರ್ವಕವಾಗಿ ಹೊರೆ ಕಾಣಿಕೆ ಸಲ್ಲಿಸಿ ಈ ಮಹತ್ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ಕಂಡು ಬಂತು.
ಹೊರೆಕಾಣಿಕೆ ಸಲ್ಲಿಸಿದ ಪ್ರತಿ ಯೋರ್ವರನ್ನು ಬ್ಯಾಂಡ್ ವಾದ್ಯ, ತಾಂಬೂಲ, ಶಾಲು ನೀಡುವ ಮೂಲಕ ವಿನಯ ಪೂರ್ವಕವಾಗಿ ಸೇವಾರ್ಥಿಗಳಾದ ನಯನ ರಮೇಶ ಗಾಣಿಗ, ಮಕ್ಕಳಾದ ಪವನ್ ಗಾಣಿಗ, ಪ್ರಸನ್ನ ಗಾಣಿಗ, ಪೃಥ್ವಿನ್ ಗಾಣಿಗ ಹಾಗೂ ಸ್ವಾಗತ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಸ್ವಾಗತಿಸಿಕೊಂಡರು. ಪ್ರತಿಯೋರ್ವ ಹಸಿರು ವಾಣಿ ಸಲ್ಲಿಸಿದವರಿಗೂ ಕೃತಜ್ಞತಾ ಪತ್ರ ನೀಡಿ ಗೌರವಿಸಲಾಯಿತು.
ಕೊಲ್ಲೂರು ಪರಿಸರದಲ್ಲಿ ನಡೆಯುತ್ತಿರುವ ಈ ಅಷ್ಟಪವಿತ್ರ ನಾಗಮಂಡಲೋತ್ಸವದ ಯಶಸ್ಸಿಗೆ ಅಪೂರ್ವವಾದ ಭಕ್ತಾದಿಗಳ ಬೆಂಬಲ ಕಂಡು ಬರುತ್ತಿದ್ದು, ಕೊಲ್ಲೂರು ನಾಗಮಂಡಲ ವಿಶಿಷ್ಟತೆಗಳೊಂದಿಗೆ ಮಾದರಿ ನಾಗಮಂಡಲವಾಗಿ ಮೂಡಿಬರಲಿದೆ ಎನ್ನುವ ನಿರೀಕ್ಷೆಗಳು ಕಂಡು ಬರುತ್ತಿವೆ.
ಈಗಾಗಲೇ ಸಹಸ್ರಾರು ಸಂಖ್ಯೆ ಯಲ್ಲಿ ಆಸುಪಾಸಿನ ಗ್ರಾಮಸ್ಥರು ನಾಗಮಂಡಲೋತ್ಸವದ ವಿವಿಧ ಕಾರ್ಯ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಇಡೀ ಕೊಲ್ಲೂರು ನಾನಾ ರೀತಿಯ ಬ್ಯಾನರ್‌ಗಳಿಂದ ಅಲಂಕೃತಗೊಂಡಿದ್ದು ಆಗಮಿಸುವ ಭಕ್ತರಿಗೆ ವಾಹನ ನಿಲುಗಡೆ ಹಾಗೂ ಸಂಚಾರ ವ್ಯವಸ್ಥೆಗಾಗಿ ಸೌಕರ್ಯ ಒದಗಿಸಲಾಗಿದ್ದು ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜು, ಲಲಿತಾಂಬಿಕಾ ವಸತಿಗೃಹ, ಕಾಶಿ ಹೊಳೆ ಬಳಿಯಲ್ಲಿ ವಿಶೇಷ ವ್ಯವಸ್ಥೆ ಏರ್ಪಡಿಸಲಾಗಿದೆ. ಭಕ್ತರಿಗೆ ಶೌಚಾಲಯದ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮದ ನಿರ್ವಾಹಕ ರಮೇಶ್ ಗಾಣಿಗ ಕೊಲ್ಲೂರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕುಂದಾಪುರ ವ್ಯಾಸರಾಯ ಮಠದ ಮಠಾಧೀಶ ಶ್ರೀ ಲಕ್ಷ್ಮೀಂದ್ರತೀರ್ಥ ಶ್ರೀಪಾದಂಗಳವರು ಆಶೀರ್ವದಿಸಲಿದ್ದು, ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ವಹಿಸುವರು. ಕೊಲ್ಲೂರು ದೇಗುಲದ ಅರ್ಚಕ ಡಾ| ಕೆ. ನರಸಿಂಹ ಅಡಿಗ, ಸಚಿವ ಕೆ. ಪ್ರಮೋದ್ ಮಧ್ವರಾಜ್, ಶಾಸಕ ಕೆ. ಗೋಪಾಲ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ. ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮೊದಲಾದ ಗಣ್ಯರು ಅತಿಥಿಗಳಾಗಿ ಆಗಮಿಸುವರು.