ಕುಂದಾಪುರ: ಕಳೆದ ವಾರ ಕೊಲೆಯಾದ ಗೋಪಾಡಿಯ ಗರ್ಭಿಣಿ ಮಹಿಳೆ ಹತ್ಯೆ ಪ್ರಕರಣದ ಸಮಗ್ರ ತನಿಖೆ ಹಾಗೂ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ತಾಲೂಕು ಮೂಕಾಂಬಿಕಾ ಮಹಿಳಾ ಮಂಡಳಗಳ ಒಕ್ಕೂಟದ ನೇತತ್ವದಲ್ಲಿ ಇಲ್ಲಿನ ಸಹಾಯಕ ಕಮಿಷನರ್ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಒಕ್ಕೂಟದ ಅಧ್ಯಕ್ಷೆ ರಾಧಾದಾಸ್ ಈ ಸಂದರ್ಭ ಮಾತನಾಡಿ ಒಂಟಿಯಾಗಿದ್ದ ಗರ್ಭಿಣಿ ಮಹಿಳೆಯನ್ನು ಅಮಾನುಷವಾಗಿ ಹತ್ಯೆಗೈಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಬೇಕು. ಈ ಘಟನೆಯಲ್ಲಿ ಈತನೊಂದಿಗೆ ಅನ್ಯರು ಭಾಗಿಯಾಗಿರುವ ಶಂಕೆಯಿದ್ದು ತನಿಖೆ ಚುರುಕುಗೊಳಿಸಿ ಅವರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ತಾಲೂಕಿನಲ್ಲಿ ಇತ್ತೀಚೆಗೆ ಎಂಟು ಮಹಿಳೆಯರ ಕೊಲೆಯಾಗಿದ್ದು ಕೃತ್ಯದ ಆರೋಪಿಗಳಿಗೆ ಶಿಕ್ಷೆಯಾಗಿರುವುದಿಲ್ಲ. ಗೋಪಾಡಿಯ ಘಟನೆಯ ಬಳಿಕ ಮಹಿಳೆಯರು ಭೀತಿಗೊಳಗಾಗಿದ್ದಾರೆ ಎಂದು ಅವರು ತಿಳಿಸಿದರು. ಮನವಿ ಸ್ವೀಕರಿಸಿದ ಸಹಾಯಕ ಕಮಿಷನರ್ ಚಾರುಲತಾ ಸೋಮಲ್ ಪ್ರತಿಕ್ರಿಯಿಸಿದ ಘಟನೆಯ ಬಗೆಗಿನ ಮಾಹಿತಿ ಇದೆ. ಸಂಬಂಧಿತ ಅಧಿಕಾರಿಗಳಿಗೆ ಘಟನೆ ಬಗ್ಗೆ ಸಮಗ್ರ ತನಿಖೆಗೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದರು. ತಹಸೀಲ್ದಾರ ಗಾಯತ್ರಿ ಎನ್.ನಾಯಕ್ ಉಪಸ್ಥಿತರಿದ್ದರು.
ಬೀಜಾಡಿ ಮೀನುಗಾರ ಮಹಿಳೆಯರ ಸಹಕಾರಿ ಸಂಘದ ನಿರ್ದೇಶಕಿ ರತ್ನಾ ಮೊಗವೀರ‌್ತಿ, ಮೀನುಗಾರ ಮಹಿಳಾ ನಾಯಕಿ ಗುಲಾಬಿ, ಜಿ.ಪಂ.ಸದಸ್ಯ ಗಣಪತಿ ಟಿ.ಶ್ರೇಯಾನ್, ರಾಜ್ಯ ಬಿಜೆಪಿ ಮೀನುಗಾರ ಪ್ರಕೋಷ್ಠ ಸಂಚಾಲಕ ಕಿಶೋರ್, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ, ಬೈಂದೂರು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಶೇರೆಗಾರ್, ಮೀನುಗಾರ ಮಹಿಳೆಯರು, ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.