ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮೀನುಗಾರಿಕೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಬಂದರುಗಳ ಅಭಿವೃದ್ಧಿಗೆ ಸರಕಾರ ವಿಶೇಷ ಒತ್ತು ನೀಡಲಿದೆ. ಆ ನಿಟ್ಟಿನಲ್ಲಿ ಕರಾವಳಿಯ ಬಂದರುಗಳ ಸ್ಥಿತಿ-ಗತಿಯ ಕುರಿತು ಅವಲೋಕನ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಮತ್ತು ಬಂದರು, ಒಳನಾಡು ಸಚಿವ ಡಾ| ಎಚ್.ಸಿ. ಮಹದೇವಪ್ಪ ತಿಳಿಸಿದರು.
ಅವರು ಮಂಗಳವಾರ ಬಂದರುಗಳ ವೀಕ್ಷಣೆಯ ಸಲುವಾಗಿ ಹಂಗಾರಕಟ್ಟೆ ಮೀನುಗಾರಿಕೆ ಜೆಟ್ಟಿಗೆ ಆಗಮಿಸಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದರು. ಬಂದರುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಹಾಗೂ ಜೆಟ್ಟಿ ವಿಸ್ತರಣೆ ಮುಂತಾದ ಪ್ರಮುಖ ಕಾಮಗಾರಿಗಳಿಗೆ ಒತ್ತು ನೀಡಲಿದ್ದು, ಹಂಗಾರಕಟ್ಟೆಯಲ್ಲಿ ತಡೆಗೋಡೆ ನಿರ್ಮಾಣ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿ ತಡೆಗೋಡೆ ನಿರ್ಮಾಣಕ್ಕೆ ಸರ್ವೇ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಶೀಘ್ರ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ ಮತ್ತು ಇಲ್ಲಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ನೀಡಲಾಗುವುದು ಎಂದರು.
ಈ ಸಂದರ್ಭ ಕೋಡಿಬೆಂಗ್ರೆಯ ಮೀನುಗಾರಿಕೆ ಜೆಟ್ಟಿ ವಿಸ್ತರಣೆ ಹಾಗೂ ಅಭಿವೃದ್ಧಿಯ ಕುರಿತು ಕ್ರಮ ಕೈಗೊಳ್ಳುವಂತೆ ಹಂಗಾರಕಟ್ಟೆ-ಕೋಡಿಬೆಂಗ್ರೆ ಯಾಂತ್ರೀ ಕೃತ ಮೀನುಗಾರರ ಸಂಘದ ಅಧ್ಯಕ್ಷ ಬಿ.ಬಿ. ಕಾಂಚನ್ ಸಚಿವರಲ್ಲಿ ಮನವಿ ಮಾಡಿದರು. ಹಂಗಾರಕಟ್ಟೆ ಬಂದರು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಂದ್ರ ಸುವರ್ಣ, ಮೀನುಗಾರ ಮುಖಂಡರಾದ ಕೇಶವ ಕುಂದರ್ ಅವರು ಮೀನುಗಾರರ ಸಮಸ್ಯೆ ಕುರಿತು ಸಚಿವರಿಗೆ ತಿಳಿಸಿದರು. ಬಂದರು ಇಲಾಖೆಯ ಅಧಿಕಾರಿಗಳಾದ ಕೆ.ಎಸ್. ಜಂಬೋಳ, ಕೆ.ಆರ್. ದಯಾನಂದ, ಎ.ಎಸ್. ನಾಗರಾಜ್ ಹಾಗೂ ಮೀನುಗಾರ ಮುಖಂಡರಾದ ಕ್ಯಾಪ್ಟನ್ ಕೃಷ್ಣಪ್ಪ, ರಾಜ್ ಕುಮಾರ್, ಜಯಂತ್, ಉತ್ತರ ಎಂ. ಕರ್ಕೇರ, ಬಸವ ಕುಂದರ್ ಮುಂತಾದವರು ಉಪಸ್ಥಿತರಿದ್ದರು.