ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಲಾಲ ಸಮುದಾಯ ಈ ನೆಲದ ನಾಗರಿಕತೆಯ ಹುಟ್ಟಿನೊಂದಿಗೆ ಜನ್ಮ ತಾಳಿದ ಶ್ರೇಷ್ಠ ಸಮುದಾಯ. ಕುಂಬಾರ, ಮೂಲ್ಯ, ಹಾಂಡ, ಗುನುಗ ಹೀಗೆ ಬೇರೆ ಬೇರೆ ಹೆಸರುಗಳಿಂದ ಈ ನಾಡಿನ ಮೂಲೆ ಮೂಲೆಯಲ್ಲೂ ಸಾಕಷ್ಟು ಸಂಖ್ಯೆಯಲ್ಲಿರುವ ಕುಂಬಾರ ಸಮುದಾಯ ಇಂದು ಬಲಿಷ್ಠ ಸಂಘಟನೆಯಲ್ಲಿ ಒಗ್ಗೂಡುತ್ತಿವೆ. ಈ ಕುಂಬಾರ ಸಮುದಾಯಕ್ಕೆ ಮುಂಬರುವ ಚುನಾವಣೆಯಲ್ಲಿ ರಾಜಕೀಯ ಸ್ಥಾನಮಾನ ಕೊಡುವ ಕೆಲಸವನ್ನು ಎಲ್ಲ ರಾಜಕೀಯ ಪಕ್ಷಗಳು ಮಾಡಬೇಕು ಎಂದು ಕರಾವಳಿ ಕುಲಾಲಧಿ ಕುಂಬಾರರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಅವರು ಹೇಳಿದರು.
ಅವರು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ಕುಂದಾಪುರ ಕುಂಬಾರರ ಯುವ ವೇದಿಕೆ ಹೆಂಗವಳ್ಳಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿ ಅಭಿಮತ ವ್ಯಕ್ತಪಡಿಸಿದರು.
ಕುಂಬಾರ ಸಮುದಾಯದ ಸಂಘಟನೆಗೆ ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ರಾಜ್ಯಕ್ಕೆ ಮಾದರಿಯಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಮುಂಚೂಣಿಯಲ್ಲಿವೆ. ಕುಂದಾಪುರ, ಕಾರ್ಕಳ, ಕಾಪು, ಸುರತ್ಕಲ್, ಕುಳಾಯಿ, ಬೆಳ್ತಂಗಡಿ, ಬಂಟ್ವಾಳ ಹಾಗೂ ಉಳ್ಳಾಲ ವಿಧಾನ ಸಭಾ ಯುವ ಘಟಕಗಳು ಪೈಪೋಟಿಯ ರೀತಿಯಲ್ಲಿ ಕುಲಾಲ ಯುವಕರನ್ನು ಸಂಘಟಿಸುತ್ತಿವೆ. ಇದು ಎಲ್ಲ ಪಕ್ಷಗಳ ರಾಜಕರಣಿಗಳ ಗಮನಕ್ಕೆ ಬಂದಿದ್ದು, ಕುಂಬಾರ ಸಮುದಾಯಕ್ಕೆ ಮುಂದಿನ ಚುನಾವಣೆಗಳಲ್ಲಿ ಸಾಮಾಜಿಕ ನ್ಯಾಯ ಸಿಗುವ ಭರವಸೆ ಸಿಕ್ಕಿದೆ ಎಂದು ಹೇಳಿದರು.
ಕುಂದಾಪುರ ಕುಲಾಲ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಹಾಗೂ ಕುಂದಾಪುರ ವೈದ್ಯ ಡಾ| ಎಂ.ವಿ. ಕುಲಾಲ್ ಅವರು ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ, ಕುಲಾಲ ಯುವ ವೇದಿಕೆಗಳೊಂದಿಗೆ ಸಮಸ್ತ ಕುಲಾಲರು ಒಗ್ಗೂಡುತಿದ್ದು, ಸಮುದಾಯ ಸಂಘಟನೆಗಳು ಬಲಿಷ್ಟವಾಗುತ್ತಿವೆ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಹಲವು ಕುಲಾಲ ನಾಯಕರು ಇತ್ತೀಚಿನ ದಿನಗಳಲ್ಲಿ ರಾಜಕೀಯ ಕ್ಷೇತ್ರಗಳಲ್ಲಿಯೂ ಹೆಸರು ಗಳಿಸುತ್ತಿದ್ದಾರೆ. ಅವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ರಾಜಕೀಯ ಪಕ್ಷಗಳು ನೀಡಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಕರಾವಳಿ ಕುಲಾಲ ಯುವ ವೇದಿಕೆ ಹೆಂಗವಳ್ಳಿ ಘಟಕದ ಅಧ್ಯಕ್ಷ ಗೋವಿಂದ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಕುಲಾಲ ಸಮಾಜ ಸುಧಾರಕ ಸಂಘದ ಅಧ್ಯಕ್ಷ ನಿರಂಜನ ಅಸೋಡು, ಕರಾವಳಿ ಕುಲಾಲ ಯುವ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕುಲಾಲ್ ನಡೂರು, ಕರಾವಳಿ ಕುಲಾಲ ಯುವ ವೇದಿಕೆ ಕುಂದಾಪುರ ವಿಧಾನಸಭಾ ಮಟ್ಟದ ಅಧ್ಯಕ್ಷ ಹರೀಶ್ ಕುಲಾಲ್ ಕೆದೂರು, ಜಿ. ಪಂ. ಸದಸ್ಯೆ ಸುಪ್ರೀತಾ ಉದಯ್‌ಕುಲಾಲ್, ಬೈಂದೂರು ವಲಯದ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಮಡಾಮಕ್ಕಿ ಗ್ರಾ. ಪಂ. ಅಧ್ಯಕ್ಷ ರಾಜು ಕುಲಾಲ, ಕಾರ್ಕಳ ಕುಲಾಲ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಭೋಜು ಕುಲಾಲ್, ಪೆರ್ಡೂರು ಕುಂಬಾರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುಲಾಲ್ ಪಕ್ಕಾಲು, ಹೆಂಗವಳ್ಳಿ ಕುಲಾಲ ಯುವ ಸಂಘಟನೆಯ ಮಾರ್ಗದರ್ಶಕ ಕೊರಗ ಕುಲಾಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಹೆಂಗವಳ್ಳಿ ಕುಲಾಲ ಯುವ ವೇದಿಕೆ ಕಾರ್ಯದರ್ಶಿ ತಿಮ್ಮಪ್ಪ ಕುಲಾಲ್ ಸ್ವಾಗತಿಸಿದರು. ಉಪಾಧ್ಯಕ್ಷ ರಮೇಶ್ ಕುಲಾಲ್ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ್ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ರಾಜ್ಯ ಕುಂಭಕಲಾ ನಿಗಮದ ಜತೆ ರಾಷ್ಟ್ರೀಯ ಕುಂಭಕಲಾ ನಿಗಮ ನೀಡುವಂತೆ ಕರ್ನಾಟಕ ರಾಜ್ಯ ಕುಂಬಾರ ಮಹಾಸಂಘ ಹಾಗೂ ಕುಂಬಾರ ಸರ್ವಜ್ಞ ವೇದಿಕೆಯ ಮೂಲಕ ಕೇಂದ್ರ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ ಮುಂದಿನ ನವೆಂಬರ್ ತಿಂಗಳಿನಲ್ಲಿ ಉಡುಪಿಯಲ್ಲಿ ಬೃಹತ್ ವಿಶ್ವ ಕುಂಬಾರರ ಸಮ್ಮೇಳನ ಹಾಗೂ ವಿಶ್ವ ಸರ್ವಜ್ಞ ಪ್ರಶಸ್ತಿಯನ್ನು ಸ್ಥಾಪಿಸಿ ಕುಂಬಾರ ಸಮುದಾಯಕ್ಕೆ ಸಾಮಾಜಿಕ ಹಾಗೂ ರಾಜಕೀಯ ನ್ಯಾಯಕ್ಕಾಗಿ ಹಕ್ಕೊತ್ತಾಯ ಮಾಡಲು ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಯಿತು.