ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿಶ್ವವ್ಯಾಪಿಯಾದ ಸಂಸ್ಕೃತ ನಮ್ಮ ನೆಲದ ಅತ್ಯಂತ ಪ್ರಾಚೀನ ಭಾಷೆ. ಸಹಸ್ರಾರು ವರ್ಷಗಳು ಸಂದರೂ ಒಂದು ಶಬ್ದವೂ ಅಪಭ್ರಂಶಗೊಳ್ಳದೆ, ಪರಿಶುದ್ಧತೆಯನ್ನು ಕಾಪಾಡಿಕೊಂಡು ಬಂದಿರುವುದು ಇದರ ವೈಶಿಷ್ಟ್ಯ. ಕನ್ನಡ ಮೊದಲಾದ ರಾಜ್ಯ ಭಾಷೆಗಳ ಮೇಲೆ ಸಂಸ್ಕೃತ ಗಾಢವಾದ ಪ್ರಭಾವ ಬೀರಿದೆ. ವೇದಗಳಿಂದ ಮೊದಲ್ಗೊಂಡು ಜಾನಪದ ಸಾಹಿತ್ಯದವರೆಗೆ ವಿಪುಲವಾದ ಸಾಹಿತ್ಯವನ್ನು ಹೊಂದಿದ ಸಂಸ್ಕೃತ ತ್ರಿಕಾಲಾಭಾಧಿತವಾದ ಸುಂದರ ಸೂಕ್ತಿಗಳ ಸಾಗರ. ಅಂತಹ ಸೂಕ್ತಿಗಳಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಉಪಯುಕ್ತ ಸೂಕ್ತಿಗಳನ್ನು ಸಂಗ್ರಹಿಸಿ, ಸರಳ ಕನ್ನಡ ಅನುವಾದದೊಂದಿಗೆ ಪ್ರಕಟಿಸಲಾದ ಈ ಕೃತಿ ಸಾಹಿತ್ಯ ಲೋಕಕ್ಕೊಂದು ವಿಶಿಷ್ಟ ಕೊಡುಗೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಾಹಿತಿ ಶ್ರೀ ನೀಲಾವರ ಸುರೇಂದ್ರ ಅಡಿಗರು ಹೇಳಿದರು.
ಅವರು ಇಲ್ಲಿನ ರೋಟರಿ ಭವನದಲ್ಲಿ ಹಿರಿಯ ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ ಡಾ| ಎಚ್.ವಿ. ನರಸಿಂಹಮೂರ್ತಿಯವರ ’ಸಂಸ್ಕೃತ ಸೂಕ್ತಿಗಳು’ ಎಂಬ ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದರು. ಕುಂದಾಪುರ ರೋಟರಿ ಅಧ್ಯಕ್ಷ ರೊ| ಉದಯಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಅಪೂರ್ವವಾದ ಈ ಕೃತಿಯಲ್ಲಿರುವ ಎಲ್ಲ ಸೂಕ್ತಿಗಳನ್ನು ಉಪಯುಕ್ತ ವಿವರಣೆಯೊಂದಿಗೆ ಪ್ರಕಟಿಸಿದರೆ ಇದೊಂದು ಹೆಬ್ಬೊತ್ತಿಗೆಯಾಗುವುದರಲ್ಲಿ ಸಂಶಯವಿಲ್ಲ. ಡಾ|| ಮೂರ್ತಿಯವರು ಬರೆದುಕೊಟ್ಟರೆ ಆ ಹೊತ್ತಿಗೆಯನ್ನು ನನ್ನ ಪ್ರಕಾಶನ ಸಂಸ್ಥೆಯ ಆಶ್ರಯದಲ್ಲಿ ಉಚಿತವಾಗಿ ಪ್ರಕಟಿಸಿ, ಆಸಕ್ತರಿಗೆಲ್ಲ ತಲುಪಿಸುತ್ತೇನೆ ಎಂದು ಶ್ರೀ ಅಡಿಗರು ಘೋಷಿಸಿದರು.
ಅಂತಾರಾಷ್ಟ್ರೀಯ ರೋಟರಿಯ ಶತಾಬ್ದಿ ಜಿಲ್ಲಾ ಗವರ್ನರರಾದ ಶ್ರೀ ಎ.ಎಸ್.ಎನ್. ಹೆಬ್ಬಾರರ ಪರವಾಗಿ ಕುಂದಾಪುರ ರೋಟರಿಯ ಹಿರಿಯ ಸ್ಥಾಪಕಸದಸ್ಯ ಶ್ರೀ ಸೊಲಮನ್ ಸೋನ್ಸ್‌ರವರು ಈ ಪುಸ್ತಕದ ಲೇಖಕರಾದ ರೊ| ಡಾ| ಎಚ್.ವಿ. ನರಸಿಂಹಮೂರ್ತಿಯವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮ್ಮಾನಿಸಿದರು. ರೊ| ರತ್ನಾಕರ ಶೆಟ್ಟಿ ಪ್ರಾರ್ಥಿಸಿದರು. ರೊ| ಉದಯಕುಮಾರ ಶೆಟ್ಟಿ ಸ್ವಾಗತಿಸಿದರು. ರೊ| ಶಶಿಧರ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ರೊ| ಮನೋಜ್ ನಾಯರ್ ವಂದಿಸಿದರು.