ಕುಂದಾಪ್ರ ಡಾಟ್ ಕಾಂ ಸುದ್ದಿ –
ಕುಂದಾಪುರ: ಕುಂದಾಪುರ ಪುರಸಭೆ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಬಬ್ಬುಕುದ್ರುವಿನ ಶ್ಮಶಾನ ಅಭಿವೃದ್ಧಿಗೆ ಅನುದಾನವನ್ನು ಮೀಸಲಾಗಿರಿಸುವ ಬಗ್ಗೆ , ವಲಸೆ ಕಾರ್ಮಿಕರಿಗೆ ರಾತ್ರಿ ವಸತಿ ಸೌಲಭ್ಯ ಒದಗಿಸುವ ಕುರಿತು ವ್ಯಾಪಕ ಚರ್ಚೆ ನಡೆಯಿತು.
ಪ್ರಸ್ತುತ ಕುಂದಾಪುರದಲ್ಲಿ ನೂರಾರು ಮಂದಿ ವಲಸೆ ಕಾರ್ಮಿಕರು ನೆಹರೂ ಮೈದಾನದ ಪಕ್ಕದಲ್ಲಿರುವ ಶಾಲೆ, ಸರಕಾರಿ ಕಟ್ಟಡಗಳಲ್ಲಿ ರಾತ್ರಿ ಹೊತ್ತು ವಸತಿಗಾಗಿ ಆಶ್ರಯ ಪಡೆದುಕೊಳ್ಳುತ್ತಿದ್ದು, ಅವರು ಅಲ್ಲಿ ಶುಚಿತ್ವದ ಬಗ್ಗೆ ಹೆಚ್ಚಿನ ಗಮನ ಹರಿಸದೇ ಇರುವ ಹಿನೆ°ಲೆಯಲ್ಲಿ ಚರ್ಚೆ ನಡೆಸಲಾಗಿದ್ದು, ಈ ಬಗ್ಗೆ ಗಮನ ಹರಿಸಿದ ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್ ಅವರು ಕುಂದಾಪುರ ಪುರಸಭೆಯ ವತಿಯಿಂದ ವಲಸೆ ಕಾರ್ಮಿಕರಿಗೆ ನೈಟ್ ಶೆಲ್ಟರ್‌ವೊಂದನ್ನು ನಿರ್ಮಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ತಿಳಿಸಿದ ಪುರಸಭೆಯ ಮುಖ್ಯಾಧಿಕಾರಿ ಅವರು ಈ ಕುರಿತು ಕುಂದಾಪುರದ ಬಸ್ಸು ನಿಲ್ದಾಣದ ಬಳಿ ಇರುವ ಸಂಕೀರ್ಣದ ಎರಡನೇ ಅಂತಸ್ತಿನಲ್ಲಿ ಸೂಕ್ತ ಸ್ಥಳಾವಕಾಶ ಮಾಡಿಕೊಡುವ ಬಗ್ಗೆ ನಿರ್ಣಯವನ್ನು ತೆಗೆದುಕೊಳ್ಳಲು ಸದಸ್ಯರ ಅನುಮತಿಗಾಗಿ ಮಂಡಿಸಲಾಗುವುದು ಹಾಗೂ ವಲಸೆ ಕಾರ್ಮಿಕರಿಗೆ ಸೂಕ್ತ ರಾತ್ರಿ ವಸತಿಯನ್ನು ಕಲ್ಪಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ನೆಹರೂ ಮೈದಾನ ಪರಿಸರ ಹಾಗೂ ಶಾಲಾ ಪರಿಸರವನ್ನು ಸ್ವತ್ಛತೆಯಲ್ಲಿಡಲು ಸಾಧ್ಯ ಹಾಗೂ ನೈರ್ಮಲ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯ ಎಂದರು.
ಈ ಬಗ್ಗೆ ಸಭೆಯ ಸಮ್ಮತಿ ಸೂಚಿಸಲು ವಿಷಯವನ್ನು ಮಂಡಿಸಲಾಯಿತು. ಅಲ್ಲದೇ ಈ ವ್ಯವಸ್ಥೆಯನ್ನು ಯಾವುದಾದರೂ ಸ್ವಯಂಸೇವಾ ಸಂಸ್ಥೆಗಳಿಗೆ ವಹಿಸಿಕೊಟ್ಟು ಈ ವ್ಯವಸ್ಥೆಯನ್ನು ಮುಂದುವರಿಸಲು ಸಹಕರಿಸಲು ವಿನಂತಿಸುವ ಬಗ್ಗೆ ನಿರ್ಣಯವನ್ನು ತಗೆದುಕೊಳ್ಳಲಾಯಿತು.
ವಲಸೆ ಕಾರ್ಮಿಕರಿಗೆ ಶೌಚಾಲಯ ವ್ಯವಸ್ಥೆ ಹಾಗೂ ಅದರ ಶುಶಿತ್ವದ ಬಗ್ಗೆ ಗಮನಹರಿಸಬೇಕಾದ ಪುರಸಭೆ ಗಾಂಧಿ ಪಾರ್ಕು ಬಳಿ ಇರುವ ಶೌಚಾಲಯಕ್ಕೆ ಬೀಗ ಹಾಕಿರುವುದು ಸೂಕ್ತವಲ್ಲ ಎಂದು ಚಂದ್ರಶೇಖರ ಖಾರ್ವಿ ಪ್ರಶ್ನಿಸಿದರೆ, ಮೋಹನದಾಸ ಶೆಣೈ ಅವರು ಶೌಚಾಲಯದ ಸುಚಿತ್ವದ ಬಗ್ಗೆ ಕಾಳಜಿ ವಹಿಸಬೇಕು. ವಲಸೆ ಕಾರ್ಮಿಕರಿಗೆ ಈ ಶೌಚಾಲಯವನ್ನು ಉಚಿತವಾಗಿ ನೀಡಿದಾಗ ಇದಕ್ಕೆ ಶುಚಿತ್ವದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ವಲಸೆ ಕಾರ್ಮಿಕರಿಂದ ಒಂದು ಅಥವಾ ಎರಡು ರೂ.ಗಳನ್ನು ಪಡೆದು ಈ ಶೌಚಾಲಯದ ಸುಚಿತ್ವದ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು.
ಬಬ್ಬುಕುದ್ರು ಪುರಸಭೆಯ ವ್ಯಾಪ್ತಿಗೆ ಬರುವುದಿಲ್ಲ, ಆದರೂ ಇಲ್ಲಿನ ಶ್ಮಶಾನವನ್ನು ಅಭಿವೃದ್ಧಿ ಪಡಿಸಲು ಅನುದಾನ ಮೀಸಲಾಗಿರಿಸುವುದು ಸರಿಯಲ್ಲ, ಅದನ್ನು ಬಿಟ್ಟು ಸಾಕಷ್ಟು ಜನ ವಸತಿ ಇರುವ ಕೋಡಿಯ ಶ್ಮಶಾನದ ಅಭಿವೃದ್ಧಿಗೆ ಅನುದಾನ ನೀಡಿ ಎಂದು ಕೋಡಿ ಪ್ರಭಾಕರ ಆಗ್ರಹಿಸಿದರು.
ಕುಂದಾಪುರದ ಬಳಿ ಇರುವ ಬಬ್ಬುಕುದ್ರುವಿನ ಶ್ಮಶಾನ ಅಭಿವೃದ್ಧಿಗೆ ಹಣ ಮೀಸಲಿಟ್ಟ ಬಗ್ಗೆ ಪ್ರಶ್ನಿಸಿದ ಪ್ರಭಾಕರ್ ಕೋಡಿಯ ಶ್ಮಶಾನದ ಆಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಪಟ್ಟು ಹಿಡಿದರು. ಇವರಿಗೆ ಬೆಂಬಲವಾಗಿ ಮಾತನಾಡಿದ ಸಂದೀಪ್ ಪೂಜಾರಿ ಬಬ್ಬುಕುದ್ರು ಪುರಸಭಾ ವ್ಯಾಪ್ತಿಗೆ ಬರುವುದಿಲ್ಲ. ಪುರಸಭೆಯ ಅನುದಾನವನ್ನು ಹೊಳೆಗೆ ಹಾಕುವುದು ಸರಿಯಲ್ಲ . ವ್ಯವಸ್ಥೆಯೇ ಇಲ್ಲದ ಕೋಡಿಯ ಶ್ಮಶಾನಕ್ಕೆ ಅನುದಾನ ನೀಡಿ ಎಂದರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ರವಿರಾಜ್ ಖಾರ್ವಿ ಶ್ಮಶಾನದ ಅಭಿವೃದ್ಧಿಗೆ ಅನುದಾನ ನೀಡುವುದು ಒಂದು ಮಾನವೀಯತೆಯ ನಿರ್ದಾರ . ಅದಕ್ಕೆ ವ್ಯಾಪ್ತಿಯ ಸೀಮಿತವಿರುವುದಿಲ್ಲ. ಬಬ್ಬುಕುದ್ರುವಿನ ಶ್ಮಶಾನವನ್ನು ಕುಂದಾಪುರದ ಖಾರ್ವಿಕೇರಿಯ ಜನರಿಗೆ ವಿನಾ ಅನ್ಯರಿಗಲ್ಲ. ಈ ಹಿಂದೆ ಕುಂದಾಪುರದ ಎಲ್ಲ ವಾರ್ಡುಗಳ ಶ್ಮಶಾನಗಳಿಗೆ ಅನುದಾನ ಕಟ್ಟ ಬಗ್ಗೆ ನನ್ನಲ್ಲಿ ದಾಖಲೆಗಳಿವೆ. ಹಾಗಿರುವಾಗ ಮಾನವೀಯ ನೆಲೆಯಲ್ಲಿ ಬಬ್ಬುಕುದ್ರುವಿನ ಸ್ಮಾಶಾನ ಅಭಿವೃದ್ಧಿಗೆ ಕೊಡುವುದು ತಪ್ಪಾಗಿ ಕಾಣುವುದು ಸರಿಯಲ್ಲ ಎಂದರು.
ಈ ಸಮಯದಲ್ಲಿ ವಿಪಕ್ಷದ ಸದಸ್ಯರು ಇದಕ್ಕೆ ಅಡ್ಡಿ ಪಡಿಸಿದ ಸಂದರ್ಭದಲ್ಲಿ ಸಭೆಯಲ್ಲಿ ಕೊಂಚ ಕಾಲ ಗದ್ದಲ ಏರ್ಪಟ್ಟಿತು. ಶಿವರಾಂ ಪುತ್ರನ್ ಕೋಡಿಗೆ ಅನ್ಯಾಯ ಮಾಡುವುದು ಸರಿಯಲ್ಲ ಎಂದರೆ ಸಂದೀಪ್ ಬಬ್ಬುಕುದ್ರು ಶ್ಮಶಾನಕ್ಕೆ ನೀವು ಅನುದಾನವನ್ನು ಮೀಸಲಾಗಿರಿಸಿದರೆ ನಾವು ಜಿಲ್ಲಾಧಿಕಾರಿಯವರ ಕಚೇರಿಯ ಮೆಟ್ಟಿಲ್ಲನ್ನೇರಬೇಕಾಗುತ್ತದೆ ಎಂದು ಆಕ್ರೊಶ ವ್ಯಕ್ತಪಡಿಸಿದರು. ಚರ್ಚೆಗೆ ಬಿಸಿ ಏರಿದಾಗ ಸಭೆಯಲ್ಲಿ ಶಿಸ್ತಿನಲ್ಲಿ ಮಾತನಾಡುವುದನ್ನು ಕಲಿತುಕೊಳ್ಳಬೇಕು ಎಂದು ರವಿರಾಜ ಖಾರ್ವಿ ಹೇಳಿದರು.
ಇದಕ್ಕೆ ಸಿಟ್ಟಿಗೆದ್ದ ಸಂದೀಪ್ ನಮಗೆ ಶಿಸ್ತಿನ ಪಾಠವನ್ನು ಕಲಿಸಿಕೊಡುವುದು ಅಗತ್ಯವಿಲ್ಲ ಎಂದರು. ಸಭೆಯಲ್ಲಿ ಗದ್ದಲ ಏರ್ಪಟ್ಟಾಗ ಮಧ್ಯ ಮಾತನಾಡಿದ ಮೋಹನದಾಶ ಸೇಣೈ ಅವರು ಪ್ರತಿಯೊಬ್ಬನಿಗೂ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳುವ ಹಕ್ಕು ಸಭೆಯಲ್ಲಿ ಇರುತ್ತದೆ. ಆದರೆ ಬಬ್ಬುಕುದ್ರು ಶ್ಮಶಾನ ಅಭಿವೃದ್ಧಿಗೆ ಸಾಕಷ್ಟು ಅನುದಾನದ ಅಗತ್ಯವಿದೆ ಆದರೆ ಪುರಸಭೆಯಲ್ಲಿ ಅಷ್ಟು ಅನುದಾನ ಇದೆಯೇ ಎನ್ನುವುದನ್ನು ಮೊದಲು ನೋಡಬೇಕು ಎಂದರು.
ಪುರಸಭೆಯ ಅಧ್ಯಕ್ಷೆ ವಸಂತಿ ಸಾರಂಗ ಅಧ್ಯಕ್ಷತೆ ವಹಿಸಿದ್ದೆರು. ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ಸಿಸಿಲಿ ಕೋಟ್ಯಾನ್, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.