ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇವರ ವಿಸ್ತಾರ ಅರಿತುಕೊಂಡಾಗ ಧೇವರನ್ನು ಆರಾಧಿಸಲು ಸಾಧ್ಯವಾಗುತ್ತದೆ. ಉಪಕರಣದ ಜೊತೆಗೆ ಅಂತಃಕರಣವಿದ್ದಾಗ ದೇವರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಬ್ಯಾಂಕಿನ ಎಜಿಎಂ ವಿದ್ಯಾಲಕ್ಷ್ಮೀ ಆರ್ ಹೇಳಿದರು.
ಬಿಜೂರು ಗ್ರಾಪಂ ವ್ಯಾಪ್ತಿಯ ಶ್ರೀಮಕ್ಕಿಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ೩೦ನೇ ವಾರ್ಷಿಕೋತ್ಸವದ ವಿಶೇಷ ಕಾರ್ಯಕ್ರಮ ಯಕ್ಷೋತ್ಸವ-೨೦೧೭ ಉದ್ಘಾಟಿಸಿ ಮಾತನಾಡಿದರು. ಇಂದು ನಾವು ಜಗತ್ತಿನ ಅಲೌಕಿಕ ಸುಖದ ಭ್ರಮೆಗೆ ಒಳಗಾಗುತ್ತಿದ್ದೇವೆ. ಇದರಿಂದ ಹೊರಬಂದು ನಮ್ಮೊಳಗಿನ ಆನಂದವನ್ನು ಕಾಣುವಂತಾಗಬೇಕು. ಇಂದಿನ ಯುವಪೀಳಿಗೆಗೆ ನಮ್ಮ ಸಂಸ್ಕೃತಿ ಮತ್ತು ದೇಶದ ಪರಂಪರೆಯನ್ನು ಕಲಿಸುವ ಶಿಕ್ಷಣದ ಅವಶ್ಯಕತೆಯಿದೆ. ಶಿಕ್ಷಣದ ಜತೆಗೆ ಸಾಂಸ್ಕೃತಿಕವಾಗಿಯೂ ಮಕ್ಕಳು ಬೆಳೆಯುವಲ್ಲಿ ಪಾಲಕರು ಪ್ರೇರೇಪಿಸಬೇಕು. ಇದು ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುವ ಮೂಲಕ ಜೀವನ ಮೌಲ್ಯಗಳನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಬಲ್ಲದು ಎಂದರು.
ನಂತರ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿದ್ದು, ಶಾಸ್ತ್ರೀಯ ಕನ್ನಡ ಶಬ್ದಗಳನ್ನೇ ಬಳಕೆಮಾಡಿಕೊಂಡು ಬಂದ ಯಕ್ಷಗಾನ ರಂಗಭೂಮಿ ತನ್ನ ಪ್ರಬುದ್ಧತೆಯನ್ನು ಕಾಪಾಡಿಕೊಂಡು ಬಂದಿದೆ. ಯಕ್ಷಗಾನದ ಸೊಬಗು ಉಳಿಸುವ ಸಲುವಾಗಿ ಅನಗತ್ಯವಾಗಿ ಪ್ರವೇಶಿಸಿದ ವಸ್ತುಗಳನ್ನು ತೆಗೆದುಹಾಕುವ ಅನಿವಾರ್ಯತೆಯಿದೆ. ಈ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿರುವುದರಿಂದ ಕಲಾವಿದರು ಎಚ್ಚೆತ್ತುಕೊಂಡು ವ್ಯವಹರಿಸುವುದು ಸೂಕ್ತ ಎಂದರು.
ಸತ್ಯಸೇವಾ ಸಮಿತಿ ಅಧ್ಯಕ್ಷ ಎಸ್. ರಾಜೀವ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಅಂತರ್‌ರಾಷ್ಟ್ರೀಯ ಬಾಲ ಪ್ರತಿಭೆ, ಭರತನಾಟ್ಯ ಕಲಾವಿದೆ ಸ್ಪೂರ್ತಿ ಬಿ. ವಿ. ಮೈಸೂರು ಇವರಿಗೆ ಪ್ರತಿಷ್ಠಿತ ಶ್ರೀ ಮಹಾದೇವ ಪ್ರಶಸ್ತಿ ಪ್ರದಾನಿಸಲಾಯಿತು. ನಿವೃತ್ತ ಉಪತಹಶೀಲ್ದಾರ್ ಶಂಕರ ಶೆಟ್ಟಿ, ನಿವೃತ್ತ ಯೋಧ ಮಂಜುನಾಥ ಬಸನ ಗೌಡ ಪಾಟೀಲ್, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇವರನ್ನು ಗೌರವಿಸಲಾಯಿತು. ಡಾ. ಬಾಲಚಂದ್ರ ಭಟ್ ಅಭಿನಂದನಾ ಹಾಗೂ ಶಿಕ್ಷಕ ಗಣೇಶ ಪೂಜಾರಿ ಸಂಸ್ಕರಣಾ ನುಡಿಗಳನ್ನಾಡಿದರು. ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಅಧ್ಯಕ್ಷ ಸ್ವಾಗತಿಸಿ, ಎಚ್. ವೆಂಕಟೇಶ್ ರಾವ್ ವಂದಿಸಿದರು. ನಂತರ ಮಾರುತಿ ಪ್ರತಾಪ ಯಕ್ಷಗಾನ ಪ್ರದರ್ಶನ ನಡೆಯಿತು.