ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆಯ ಅಪೂರ್ವ ಹೊಟೇಲ್ ಬಳಿ ಮಾರುತಿ ಆಲ್ಟೋ ಹಾಗೂ ಸ್ವಿಫ್ಟ್ ಕಾರುಗಳ ನಡುವೆ ಸೋಮವಾರ ಮಧ್ಯಾಹ್ನ ಸಂಭವಿಸಿದ ಮುಖಾಮುಖೀ ಢಿಕ್ಕಿಯಲ್ಲಿ ಆಲ್ಟೋ ಕಾರಿನ ಚಾಲಕ ಮೂಲತಃ ತಮಿಳುನಾಡು ಮೂಲದ ಪ್ರಸ್ತುತ ಬೆಂಗಳೂರಿನ ಎಂ.ಜಿ. ರಸ್ತೆಯ ನಿವಾಸಿ ಧನ ಪಾಂಡ್ಯನ್ (36) ಮೃತಪಟ್ಟಿದ್ದು, ಓರ್ವ ಬಾಲಕ ಸಹಿತ ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರಿನಿಂದ ಪಣಜಿಗೆ ತೆರಳುತ್ತಿದ್ದ ಕುಟುಂಬವಿದ್ದ ಸ್ವಿಫ್ಟ್ ಕಾರು ಹಾಗೂ ಮುರುಡೇಶÌರ ಯಾತ್ರೆ ಮುಗಿಸಿ ಧರ್ಮಸ್ಥಳದ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಕುಟುಂಬವಿದ್ದ ಆಲ್ಟೋ ಕಾರು ನಡುವೆ ಢಿಕ್ಕಿ ಸಂಭವಿಸಿತ್ತು. ಢಿಕ್ಕಿಯಾದ ರಭಸಕ್ಕೆ ಆಲ್ಟೋ ಕಾರು ನುಜ್ಜು ಗುಜ್ಜಾಗಿದ್ದು, ಅದೇ ಕಾರಿನಲ್ಲಿದ್ದ ಧನ ಪಾಂಡ್ಯನ್ ಅವರ ಪುತ್ರ ಕಮಲಿ (4), ತಂದೆ ಕಾಮಾಟಿ (65), ತಾಯಿ ಸರೋಜಾ (55) ಗಂಭೀರವಾಗಿ ಗಾಯಗೊಂಡಿದ್ದಾರೆ.
ಪುತ್ರ ನಿದರ್ಶನ (8) ಹಾಗೂ ಪತ್ನಿ ವಾಸುಕಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಿಫ್ಟ್ ಕಾರಿನ ಚಾಲಕ ಸಚಿನ್, ಸುಜಾತಾ, ಕೃಷ್ಣಪ್ಪ, ಶಶಿರೇಖಾ ಅವರು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಧಾವಿಸಿದ ಸ್ಥಳೀಯರು ಕಾರಿನೊಳಗೆ ಸಿಲುಕಿದ ವರನ್ನು ಹೊರತೆಗೆಯುವಲ್ಲಿ ನೆರವಾದರು.
ಗಾಯಾಳುಗಳನ್ನು ತಮ್ಮ ಖಾಸಗಿ ವಾಹನ ಗಳಲ್ಲಿ ಹಾಕಲು ನಿರಾಕರಿಸಿದಾಗ ಅಲ್ಲೆ ರಸ್ತೆಯಲ್ಲಿ ಸಾಗುತ್ತಿದ್ದ ಮಕ್ಕಳ ತಜ್ಞ ಕಾರಂತ ಅವರು ತಮ್ಮ ಕಾರಿನಲ್ಲಿಯೇ ಗಂಭೀರವಾಗಿ ಗಾಯಗೊಂಡು ರಕ್ತಸಿಕ್ತವಾಗಿದ್ದ ಓರ್ವರನ್ನು ಹಿಂಬದಿ ಸೀಟಿನಲ್ಲಿ ಮಲಗಿಸಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಸ್ಥಳಕ್ಕೆ ಧಾವಿಸಿ ಸಂಚಾರ ಸುಗಮಗೊಳಿಸುವುದರೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.