ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಲು ಬಂದಿದ್ದ ಗರ್ಭಿಣಿಯನ್ನು ನಡುರಾತ್ರಿಯೇ ಆಸ್ಪತ್ರೆಯಿಂದ ಹೊರಕಳುಹಿಸಿದ ಅಮಾನವೀಯ ಘಟನೆ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ಕೋಡಿ ಹಳೆ ಅಳಿವೆ ನಿವಾಸಿ ಆಶಾ (29) ಎಂಬುವವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಲು ನಿರಾಕರಿಸಿದ್ದು ಬಳಿಕ ಕುಂದಾಪುರದ ಖಾಸಗಿ ಆಸ್ಪತ್ರೆಯೊಂದಿರಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಕುಂದಾಪ್ರ ಡಾಟ್ ಕಾಂ.
ಆಗಿದ್ದೇನು?
ಗರ್ಭಿಣಿಯಾಗಿದ್ದ ಆಶಾ ಅವರಿಗೆ ಶನಿವಾರ ತಡರಾತ್ರಿ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಅವರ ತಾಯಿ ಹಾಗೂ ಚಿಕ್ಕಮ್ಮ ಆಟೋದಲ್ಲಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಸ್ಪತ್ರೆಯಲ್ಲಿ ಪರೀಕ್ಷೆಗೆ ಕರೆದೊಯ್ದ ದಾದಿಯರು ಈಗ ಹೆರಿಗೆ ಆಗುವುದಿಲ್ಲ. ವೈದ್ಯರು ಕೂಡ ರಜೆಯಲ್ಲಿದ್ದಾರೆ ಎಂದು ಸಬೂಬು ಹೇಳಿದ್ದಾರೆ. ಗರ್ಭೀಣಿ ಹೊಟ್ಟೆ ನೋವಿನಿಂದ ಕೂಗಾಡುತ್ತಿದ್ದಾಗ ವೈದ್ಯರಿಗೆ ಕರೆ ಮಾಡಿದರೂ ತಾನು ರಜೆಯಲ್ಲಿದ್ದೇನೆ ಬದಲಿ ವೈದ್ಯರೂ ಇಲ್ಲ ಎಂದು ಹೇಳಿದ್ದಾರೆ. ಬಳಿಕ ಅದೇ ಸ್ಥಿತಿಯಲ್ಲಿ ಉಡುಪಿಯ ಆಸ್ಪತ್ರೆಗೆ ದಾಖಲಿಸಿ ಎಂದು ಹೇಳಿ ಅವರನ್ನು ಹೊರಕಳುಹಿಸಿದ್ದಾರೆ.
ಆಶಾ ಅವರ ಚಿಕ್ಕಮ್ಮ 108ಕ್ಕೆ ಕರೆ ಮಾಡಿದರೂ ಸ್ಪಂದನವಿಲ್ಲ. ಆಸ್ಪತ್ರೆಯಲ್ಲಿ ಇದ್ದ ನಗು ಮಗು ಆಂಬುಲೆನ್ಸ್ ಬಗೆಗೂ ಸಿಬ್ಬಂಧಿಗಳು ಮಾಹಿತಿ ನೀಡದಿದ್ದಾಗ ಬೇರೆ ವಾಹನವೂ ಸಿಗದೇ ರಾತ್ರಿ ವೇಳೆ ಹನಿ ಮಳೆ ಬಿಳುತ್ತಿರುವಾಗಲೇ ಗರ್ಭಿಣಿಯನ್ನು ನಡೆಸಿಕೊಂಡು ತೆರಳಿದ್ದಾರೆ. ಬಳಿಕ ಅಲ್ಲಿಗೆ ಬಂದ ರಿಕ್ಷಾದಲ್ಲಿ ಕುಂದಾಪುರದ ಶ್ರೀದೇವಿ ನರ್ಸಿಂಗ್ ಹೋಮ್‌ಗೆ ದಾಖಲಿಸಲಾಯಿತು. ದಾಖಲಿಸಿ ಹತ್ತು ನಿಮಿಷಗಳಲ್ಲಿಯೇ ಗರ್ಭಿಣಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಶಾಳ ಪತಿ ಕೋಣಿ ನಿವಾಸಿ ಸಂತೋಷ್ ಮೈಸೂರಿನ ಬೇಕರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕುಂದಾಪುರಕ್ಕೆ ಆಗಮಿಸಿದ್ದಾರೆ. ತಾಯಿ ಮಗು ಆರೋಗ್ಯದಿಂದಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು
ಸಂಕಷ್ಟದ ಕಾಲದಲ್ಲಿ ಆಸ್ಪತ್ರೆಯ ಸಿಬ್ಬಂಧಿಗಳು ನಡೆಸಿಕೊಂಡ ರೀತಿಯ ಬಗೆಗೆ ಬೇಸತ್ತ ಆಶಾ ಅವರ ಕುಟುಂಬ ಕುಂದಾಪುರದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ದೂರು ನೀಡಿದೆ. ಸಾಂತ್ವಾನ ಕೇಂದ್ರವು ಸಂಬಂಧಪಟ್ಟ ಇಲಾಖೆಗೆ ಲಿಖಿತ ದೂರು ನೀಡಿದೆ. ತಮಗಾದ ಅನ್ಯಾಯ ಇತರರಿಗೆ ಆಗಬಾರದೆಂದು ಈ ನಿರ್ಣಯಕ್ಕೆ ಬರಲಾಗಿದೆ ಎಂದು ಸಂತ್ರಸ್ಥರು ತಿಳಿಸಿದ್ದಾರೆ.