ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹೆದ್ದಾರಿ ಕಾಮಗಾರಿ; ಸರಕಾರಿ ಆಸ್ಪತ್ರೆ ಅವಾಂತರ, ಹೊಸ ಸರಕಾರಿ ಬಸ್ಸು ಹಾಕಿಸಲು, ಬಸ್ಸು ನಿಲಗಡೆ ಮಾಡಲು ಒತ್ತಾಯ, ಶಿಕ್ಷಣ ಇಲಾಖೆಯೊಂದಿಗೆ ಮುಂದುವರಿದ ಗೊಂದಲ, ಸರಕಾರಿ ಕಾರ್ಯಕ್ರಮಗಳಲ್ಲಿ ಸಂಘ ಸಂಸ್ಥೆಗಳು ಸಹಯೋಗದ ಬಗೆಗೆ ಚರ್ಚೆ, ಕಂದಾಯ ಇಲಾಖೆ, ಆಧಾರ್ ಕಾರ್ಡ್ ರೇಷನ್ ಕಾಡ್ ಗೊಂದಲ, ಮರಳು ಅಲಭ್ಯತೆ, ಎಂಡೋಸಲ್ಪಾನ್ ಪೀಡಿತರಿಗೆ ನೀಡುತ್ತಿರುವ ಪರಿಹಾರದಲ್ಲಿ ತಾರತಮ್ಮ, ಅಧ್ಯಕ್ಷರು ಹಾಗೂ ಅವರದೇ ಪಕ್ಷದ ಸದಸ್ಯರ ನಡುವಿನ ಮಾತಿನ ಚಕಮಕಿ ಇವೇ ಮುಂತಾದ ಚರ್ಚೆ, ಗೊಂದಲ, ವಿವಾದ, ವಾದ ಪ್ರತಿವಾದಗಳಿಗೆ ಕುಂದಾಪುರ ತಾಲೂಕು ಪಂಚಾಯತ್ ಸಮಾನ್ಯ ಸಭೆ ಸಾಕ್ಷಿಯಾಯಿತು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆರಂಭವಾಗುತ್ತಿದ್ದಂತೆ ತಾಲೂಕು ಪಂಚಾಯತ್‌ಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ಹದಿಮೂರು ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಆಯ್ಕೆಮಾಡಿರುವ ಬಗೆಗೆ ಸದಸ್ಯೆ ಜ್ಯೋತಿ ಪುತ್ರನ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಕೆಲವು ಸದಸ್ಯರುಗಳು ಧ್ವನಿಗೂಡಿಸಿದಾಗ ಕಾರ್ಯನಿರ್ವಹಣಾಧಿಕಾರಿಗಳು ಮರು ಆಯ್ಕೆಗೆ ಸಲಹೆ ನೀಡಿದರು.
ಬಸ್ ಸೌಲಭ್ಯ ಬೇಕು:
ಉಪ್ಪುಂದ ಶಾಲೆ ಬಾಗಿಲಿನಿಂದ ಅಳುವೆಕೋಡಿ ರಸ್ತೆಗೆ ಬಸ್ ಸಂಪರ್ಕಕ್ಕೆ ಮನವಿ ಮಾಡಲಾಗಿತ್ತು. ಸರ್ವೆ ಮಾಡಿದ್ದರೂ ಬಸ್ ಸಂಪರ್ಕ ಆರಂಭಿಸಿಲ್ಲ ಎಂದು ಸದಸ್ಯೆ ಪ್ರಮೀಳಾ ದೇವಾಡಿಗ ಅವರು ಹೇಳಿದಾಗ ಕುಂದಾಪುರ ಡಿಪೋ ಮ್ಯಾನೆಜರ್ ಪ್ರತಿಕ್ರಿಯಿಸಿ ಆ ಮಾರ್ಗ ಇಕ್ಕಟ್ಟಾಗಿದ್ದು ಬಸ್ ಸಂಚಾರ ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು. ಸದಸ್ಯ ರಾಜ್ಯ ದೇವಾಡಿಗ ಅವರು ಮಾತನಾಡಿ ಕುಂದಾಪುರದ ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರದ ಅಗತ್ಯವನ್ನು ಮನಗಂಡು ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕು ಪಂಚಾಯತಿಯಲ್ಲಿಯೂ ಕೆಎಸ್‌ಆರ್‌ಟಿಸಿ ಅಧ್ಯಕ್ಷರಾದ ಕೆ. ಗೋಪಾಲ ಪೂಜಾರಿ ಅವರೊಂದಿಗೆ ಸಮಾಲೋಚನೆ ನಡೆಸಿ ಅಗತ್ಯವಿರುವ ಸ್ಥಳಗಳಿಗೆ ಬಸ್ ಸೌಲಭ್ಯಕ್ಕೆ ಬೇಡಿಕೆ ಇಡಬಹುದು ಎಂದರು.
ನಾಯ್ಕನಕಟ್ಟೆಯಲ್ಲಿ ಸರಕಾರಿ ಬಸ್ ನಿಲುಗಡೆ ಮಾಡುವ ಬಗ್ಗೆ ಈ ಹಿಂದೆಯೇ ತಿಳಿಸಲಾಗಿತ್ತಾದರೂ ಕೆಲವು ಬಸ್‌ಗಳು ನಿಲ್ಲಿಸುತ್ತಿಲ್ಲ ಎಂದು ಸದಸ್ಯ ಜಗದೀಶ ದೇವಾಡಿಗ ಅವರು ಪ್ರಸ್ತಾಪಿದಾಗ ಡಿಪೋ ಮ್ಯಾನೇಜರ್ ಪ್ರತಿಕ್ರಿಯಿಸಿ ಭಟ್ಕಳ ಕುಂದಾಪುರ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಪೈಕಿ ಒಂಬತ್ತು ಬಸ್‌ಗಳ ನಿಲುಗಡೆಗೆ ನಿರ್ದೇಶನ ನೀಡಲಾಗಿದೆ ಎಂದರು. ಸದಸ್ಯೆ ಶ್ಯಾಮಲಾ ಅವರು ಬೈಂದೂರು ಹೊಸ ಬಸ್ ನಿಲ್ದಾಣಕ್ಕೆ ತೆರಳುವ ಬಸ್ಸುಗಳು ಒಳ ಮಾರ್ಗದಲ್ಲಿ ಹಳೆ ಬಸ್ ನಿಲ್ದಾಣದ ಮೂಲಕ ಬರುತ್ತಿಲ್ಲ ಎಂದಾಗ ಆರ್‌ಟಿಓ ಅಧಿಕಾರಿ ಪ್ರತಿಕ್ರಿಯಿಸಿ ಬಸ್ ಮಾಲಕರಿಗೆ ಎಲ್ಲರಿಗೂ ನಿರ್ದೇಶನ ನೀಡಲಾಗಿದೆ ಎಂದರು.
ಒತ್ತಿನಣೆ ಕಾಮಗಾರಿ ಅವಾಂತರ:
ಒತ್ತಿನಣೆ ಕಾಮಗಾರಿ ಅವಾಂತರದ ಬಗ್ಗೆ ಎಚ್ಚರಿಸಿದ ಸದಸ್ಯ ಪುಪ್ಪರಾಜ್ ಶೆಟ್ಟಿ ಅವರು, ಕಾಮಗಾರಿಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೀವಭಯದಿಂದ ತಿರುಗುವಂತಾಗಿದೆ. ಅಲ್ಲಿನ ಜೇಡಿ ಮಣ್ಣು ಶಿರೂರು ಪಡುವರಿ ಗ್ರಾಮದ ಗದ್ದೆಗಳಿಗೆ ನುಗ್ಗಿ ಬೇಸಾಯ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಕೃಷಿಕರಿಗಾಗಿರುವ ನಷ್ಟವನ್ನು ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಇಲಾಖೆಯೇ ಭರಿಸಬೇಕು ಎಂದು ಆಗ್ರಹಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡು ಕುಸಿಯುವ ಸ್ಥಿತಿಯಿದ್ದು ಬದಲಿ ಮಾರ್ಗವನ್ನು ಸರಿಪಡಿಸಿ ಇಟ್ಟುಕೊಳ್ಳುವುದು ಒಳಿತು ಎಂದರು.
ಸರಕಾರಿ ಆಸ್ಪತ್ರೆ ಅವಾಂತರ:
ಸರಕಾರಿ ಆಸ್ಪತ್ರೆಯಲ್ಲಿ ಗರ್ಭೀಣಿ ಮಹಿಳೆಯೊಂದಿಗೆ ಅಮಾನವೀತೆಯಿಂದ ನಡೆದುಕೊಂಡ ಸಿಬ್ಬಂಧಿ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಕರುಣ ಪೂಜಾರಿ ಅವರು ಆಗ್ರಹಿಸಿದಾಗ, ಆಸ್ಪತ್ರೆಯ ವೈದ್ಯಾಧಿಕಾರಿ ಪ್ರತಿಕ್ರಿಯಿಸಿ ಆಸ್ಪತ್ರೆಯಲ್ಲಿ ನೂರಾರು ಹೆರಿಗೆ ನಡೆಯುತ್ತಿದ್ದ ಇಂತಹ ತಪ್ಪುಗಳು ನಡೆದಿಲ್ಲ. ಅಚಾಯುರ್ತದಿಂದ ಇಂತಹ ಘಟನೆ ನಡೆದಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದ್ದು ಅವರು ಕ್ರಮಕೈಗೊಳ್ಳಲಿದ್ದಾರೆ ಎಂದರು. ಸರಕಾರಿ ಆಸ್ಪತ್ರೆಯಲ್ಲಿ ಬಹಳಷ್ಟು ವ್ಯವಸ್ಥೆ ಸುಧಾರಣೆಯಾಗಬೇಕಿದೆ ಎಂದು ಸದಸ್ಯೆ ಜ್ಯೋತಿ ಪುತ್ರನ್ ಅವರು ಹೇಳಿದಾಗ ಆಸ್ಪತ್ರೆಯಲ್ಲಿ ಹೆರಿಗೆಗೆ ಬರುವ ಗರ್ಭೀಣಿಯರಿಗೆ ಏಕವಚನದಲ್ಲಿ ಮಾತನಾಡಿಸುವುದು, ಹೊಡೆಯುವುದು ಮಾಡಲಾಗುತ್ತಿದೆ. ಇದು ಸರಿಯಾಗಬೇಕು ಎಂದು ಮಹಿಳಾ ಸದಸ್ಯರು ಆಗ್ರಹಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಅಗತ್ಯ ಬಿತ್ತನೆ ಬೀಜವಿಲ್ಲ:
ಈ ಭಾರಿ ರೈತರಿಗೆ ಅಗತ್ಯವಾದ ಎಂಒ-4 ತಳಿಯ ಬಿತ್ತನೆ ಬೀಜ ನೀಡದೇ ಜ್ಯೋತಿ ಉಮಾ ತಳಿಯ ಬೀಜಗಳನ್ನು ನೀಡಲಾಗಿದೆ. ಅದು ಈ ಪ್ರದೇಶಕ್ಕೆ ಅಷ್ಟಾಗ ಒಗ್ಗಿಕೊಳ್ಳಲು ಎಂದು ಸದಸ್ಯ ಜಗದೀಶ ದೇವಾಡಿಗ ಅವರು ಕೃಷಿ ಇಲಾಖೆಯವರನ್ನು ತರಾಟೆ ತೆಗೆದುಕೊಂಡಾಗ ಬೈಂದೂರು ಕೃಷಿ ಇಲಾಖೆಯ ಅಧಿಕಾರಿ ಪ್ರತಿಕ್ರಿಯಿಸಿ ತುಂಗಭದ್ರಾ ಅಣೆಕಟ್ಟು ಪ್ರದೇಶದಲ್ಲಿ ನೀರಿನ ಅಭಾವದಿಂದ ಈ ಭಾರಿ ಅಗತ್ಯಕ್ಕೆ ತಕ್ಕಷ್ಟು ಎಂಒ-4 ತಳಿಯ ಭತ್ತ ಬೆಳೆದಿಲ್ಲ. ಹಾಗಾಗಿ ಆ ಬೀಜಗಳು ಲಭ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು. ಮುಂದಿನ ವರ್ಷದಿಂದ ಮಳೆಗಾಲಕ್ಕೆ ಮುಂಚಿತವಾಗಿ ಇದರ ಬಗ್ಗೆ ಜಾಗೃತಿ ವಹಿಸುವ ಭರವಸೆ ನೀಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಮರಳಿನ ಅಭಾವ ಕೊನೆಯಾಗಿಲ್ಲ:
ಬಡವರಿಗೆ ಮರಳಿನ ಅಭಾವ ಎದುರಾಗಿದ್ದು ಮನೆ ಕಟ್ಟಲು ಪರದಾಡುವ ಸ್ಥಿತಿ ಬಂದೊದಗಿದೆ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂದು ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಅವರು ಹೇಳಿದಾಗ ಇದಕ್ಕೆ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡುವುದೊಂದೇ ದಾರಿ ಎಂದು ಅಧ್ಯಕ್ಷರು ಪ್ರತಿಕ್ರಿಯಿಸಿದರು. ಗಣಿ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿ ಜೂನ್ ಜುಲೈ ತಿಂಗಳಿನಲ್ಲಿ ಮರಳು ತೆಗೆಯಲು ಅನುಮತಿ ಇಲ್ಲ. ಆ ಬಳಿಕ ಸರಕಾರಿ ಅನುಮತಿ ನೀಡಿರುವ ಯಾರ್ಡ್ ಮೂಲಕ ಮರಳು ಪಡೆಯಬಹುದು ಎಂದರು.
ಸರಕಾರಿ ಇಲಾಖಾ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳಿಗೆ ಆಹ್ವಾನವಿಲ್ಲ:
ಸರಕಾರಿ ಇಲಾಖೆ ಸ್ಥಳೀಯ ಸಂಸ್ಥೆಯ ಸಹಕಾರದೊಂದಿಗೆ ಕಾರ್ಯಕ್ರಮ ನಡೆಸುವಾಗ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೇ ಕಾರ್ಯಕ್ರಮ ನಡೆಸುತ್ತಿದ್ದಾರೆ. ಕಾರ್ಯಕ್ರಮಕ್ಕಾಗಿ ಕಾರ್ಯಕ್ರಮ ನಡೆಯುತ್ತಿದೆಯೇ ಹೊರತು ನಿಜವಾದ ಫಲಾನುಭವಿಗಳಿಗೆ ಅದರ ಲಾಭ ದೊರೆಯುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಫಲಾನುಭವಿಗಳಿಗೆ ಸಮರ್ಪಕ ಮಾಹಿತಿ ನೀಡದೇ ಇಂತಹ ಕಾರ್ಯಕ್ರಮಗಳನ್ನು ಯಾವ ಇಲಾಖೆಯ ನಡೆಸಬಾರದು ಎಂದು ಸದಸ್ಯ ಪುಪ್ಪರಾಜ್ ಶೆಟ್ಟಿ ಅವರು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಅಧ್ಯಕ್ಷ-ಸದಸ್ಯರ ಮಾತಿನ ಚಕಮಕಿ:
ತಾಲೂಕು ಪಂಚಾಯತ್ ಸಭೆಯಲ್ಲಿ ಅಧ್ಯಕ್ಷರು ಹಾಗೂ ಅವರದೇ ಪಕ್ಷದ ಸದಸ್ಯರ ನಡುವೆ ಪಾಲನ ವರದಿ ಫಾಲೋ ಅಪ್ ಮಾಡುವ ವಿಚಾರ ಸಂಬಂಧ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪಾಲನ ವರದಿಯನ್ನು ಫಾಲೋ ಅಪ್ ಮಾಡುತ್ತಿಲ್ಲ. ಅಧ್ಯಕ್ಷರ ಜವಾಬ್ದಾರಿ ಮರೆತು ನಡೆದುಕೊಳ್ಳುತ್ತಿದ್ದಿರಿ ಎಂದು ಸದಸ್ಯ ಕರುಣ ಕುಮಾರ್ ಪೂಜಾರಿ ಅವರು ಹೇಳಿದಾಗ ಸಿಡಿಮಿಡಿಗೊಂಡ ಅಧ್ಯಕ್ಷೆ ಜಯಶ್ರೀ ಮೊಗವೀರ ಅವರು ಸದಸ್ಯರೇ ನೀವು ಲಿಮಿಟ್ ಮೀರಿ ಮಾತನಾಡುತ್ತಿದ್ದೀರಿ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದಾಗ, ಅಂದಿನ ಸಭೆಯ ನಡವಳಿಗಳನ್ನು ಅಲ್ಲಿಗೆ ಬಿಡಲಾಗುತ್ತಿದೆ. ಯಾವ ಕೆಲಸವೂ ನಡೆಯುತ್ತಿಲ್ಲ ನಾವಿಲ್ಲ ಚಾತಿಂಡಿ ತಿನ್ನಲು ಬರುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ಕೆಲಕಾಲ ಮಾತಿನ ಚಕಮಕಿ ಜೋರಾದಾಗ ಇತರೆ ಸದಸ್ಯರು ಮಧ್ಯೆ ಪ್ರವೇಶಿಸಿದ ವಿಷಯಾಂತರ ಮಾಡಿದರು.
94ಸಿ ಅರ್ಜಿದಾರರಿಗೆ ನಿವೇಶನ, ಎಂಡೋಸಲ್ಪನಾ ಪೀಡಿತ ಮಲೆನಾಡು ಭಾಗದ ಜನರಿಗೆ ಮಾಶಾಸನ ನೀಡುವ ಬಗ್ಗೆ ಸೇರಿದಂತೆ ಹಲವು ವಿಚಾರಗಳ ಬಗೆಗೆ ಚರ್ಚೆ ನಡೆಯಿತು. ತಾಲೂಕು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರವೀಣಕುಮಾರ್ ಕಡ್ಕೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ಚಿನ್ನಪ್ಪ ಮೊಯ್ಲಿ ಉಪಸ್ಥಿತರಿದ್ದರು.