ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಕನ್ನಡ ವಿಶ್ವವಿದ್ಯಾಲಯ, ಹಂಪಿ ಮಾನ್ಯತೆ ಪಡೆದಿರುವ ಕುಂದಾಪುರದ ರಂಗ ಅಧ್ಯಯನ ಕೇಂದ್ರವು ನಡೆಸುವ 2017-18 ರ ಸಾಲಿನ ಒಂದು ವರ್ಷದ ನಾಟಕ ಡಿಪ್ಲೋಮಾ ತರಗತಿಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇದು ಪೂರ್ಣಾವಧಿ ಕೋರ್ಸ್ ಆಗಿದ್ದು, ತರಗತಿಗಳು ಜುಲೈ 24 , 2017 ರಿಂದ 15 ಮೇ 2018 ರ ವರೆಗೆ ನಡೆಯಲಿದೆ. ತರಗತಿಗಳು ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯುವುದು. ಗರಿಷ್ಠ 20 ಮಂದಿಗೆ ಅವಕಾಶವಿದೆ. ಕೋರ್ಸಿನ ಅವಧಿಯಲ್ಲಿ ಪಾಶ್ಚಾತ್ಯ ರಂಗಭೂಮಿ, ಅಭಿಜಾತ ಭಾರತೀಯ ರಂಗಭೂಮಿ, ಆಧುನಿಕ ಭಾರತೀಯ ರಂಗಭೂಮಿ ಹಾಗೂ ಕನ್ನಡ ರಂಗಭೂಮಿಯ ಬಗ್ಗೆ ಸಮಗ್ರ ಅಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗುವುದು. ನಾಲ್ಕು ಪೂರ್ಣ ಪ್ರಮಾಣದ ನಾಟಕಗಳನ್ನು ತಯಾರಿಸಲಾಗುವುದು. ನಟನೆ, ನಿರ್ದೇಶನ, ಬೆಳಕು, ವರ್ಣಾಲಂಕಾರ, ರಂಗವಿನ್ಯಾಸಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುವುದು. ರಂಗಭೂಮಿಯ ಬಗ್ಗೆ ಈಗಾಗಲೇ ತಿಳುವಳಿಕೆ ಹೊಂದಿದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಆಯ್ಕೆಯಾದವರಿಗೆ ಊಟ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸಲಾಗುವುದು. ತೇರ್ಗಡೆ ಹೊಂದಿದವರಿಗೆ ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ಪ್ರಮಾಣಪತ್ರ ನೀಡುವುದು. ಕನಿಷ್ಠ ಅರ್ಹತೆ ಪಿ.ಯು.ಸಿ. ಆಸಕ್ತರು basck.org/rak.htm/ ಈ ವಿಳಾಸದಿಂದ ಅರ್ಜಿಯನ್ನು ಪಡೆದು ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು. ಅಲ್ಲದೇ ನಿರ್ದೇಶಕರು , ರಂಗ ಅಧ್ಯಯನ ಕೇಂದ್ರ, ಭಂಡಾರ್ಕಾರ‍್ಸ್ ಕಾಲೇಜು ಆವರಣ, ಕುಂದಾಪುರ – 576201, ಉಡುಪಿ ಜಿಲ್ಲೆ ಈ ವಿಳಾಸಕ್ಕೆ ಡಿ.ಡಿ ಸಲ್ಲಿಸಿ ಅರ್ಜಿ ಪಡೆಯಬಹುದು. ಅರ್ಜಿ ಶುಲ್ಕವು ಸಾಮಾನ್ಯ ವರ್ಗ – 3೦೦ ರೂ. , ಪ. ಜಾ , ಪ. ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 150 ರೂ. ಡಿ.ಡಿ ನಿರ್ದೇಶಕರು ರಂಗ ಅಧ್ಯಯನ ಕೇಂದ್ರ ಇವರ ಹೆಸರಿನಲ್ಲಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04 ಜುಲೈ 2017. ಕೇಂದ್ರದ ಆವರಣದಲ್ಲಿ 10 ಜಲೈ 2017 ರಂದು ನಡೆಯುವ ಸಂದರ್ಶನಕ್ಕೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಬೆಳಿಗ್ಗೆ 10 ಗಂಟೆಯ ಒಳಗಾಗಿ ಹಾಜರಿರಬೇಕು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9449105052 (ವಸಂತ ಬನ್ನಾಡಿ, ಸಂಚಾಲಕರು, ರಂಗ ಅಧ್ಯಯನ ಕೇಂದ್ರ) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.