ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯ ಸರ್ಕಾರ ಮೀನುಗಾರರಿಗೆ ಸೀಮೆಎಣ್ಣೆ ಸಬ್ಸಿಡಿಯನ್ನು ಆರ್‌ಟಿಜಿಎಸ್ ಮೂಲಕ ಜಮೆ ಮಾಡಲು ಉದ್ದೇಶಿಸಿದ್ದು, ಇದರಿಂದ ಬಡ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಖರೀದಿಸಲು ತೊಂದರೆಯಾಗುತ್ತಿದೆ. ಹೀಗಾಗಿ ಸರ್ಕಾರ ಈ ಹಿಂದೆ ನೀಡುತ್ತಿದ್ದ ಸೀಮೆಎಣ್ಣೆ ಸಬ್ಸಿಡಿಯನ್ನು ಮುಂದುವರೆಸುವಂತೆ ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದೆ.
ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ನೇತೃತ್ವದಲ್ಲಿ ಮೀನುಗಾರಿಕಾ ಸಚಿವ ಪ್ರಮೋದ ಮಧ್ವರಾಜ್, ರಾಜ್ಯಸಭಾ ಸದಸ್ಯ ಆಸ್ಕರ ಫೆರ್ನಾಂಡಿಸ್ ಸಮ್ಮುಖದಲ್ಲಿ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ, ಉಪಾಧ್ಯಕ್ಷ ಗುರುನಾಥ ಪಟೇಲ್, ನಾಗಪ್ಪಯ್ಯ ಪಟೇಲ್, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸೋಮಶೇಖರ ಕೆ.ಎಂ., ಮಾಜಿ ಅಧ್ಯಕ್ಷ ಬಿ.ಎಚ್.ಕುಮಾರ್, ಕೋಶಾಧಿಕಾರಿ ಅಣ್ಣಯ್ಯ ಖಾರ್ವಿ ನೇತೃತ್ವದ ಮೀನುಗಾರರ ನಿಯೋಗ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅವರ ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದೆ.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಯು.ಟಿ.ಖಾದರ್ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಯವರೊಂದಿಗೆ ಚರ್ಚಿಸಿ ಈ ಹಿಂದಿನ ರೀತಿಯಲ್ಲಿ ಸಬ್ಸಿಡಿ ಸೀಮೆಣ್ಣೆ ಪೂರೈಕೆ ಮಾಡುವಂತೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ನಿಯೋಗದ ಸದಸ್ಯರು ತಿಳಿಸಿದ್ದಾರೆ.
ಸಾಂಪ್ರದಾಯಿಕ ಮೀನುಗಾರಿಕೆ ವರ್ಷದ ೧೧ ತಿಂಗಳು ನಡೆಯುವ ಸರ್ವಋತು ಮೀನುಗಾರಿಕೆಯಾಗಿದ್ದು ಕಳೆದ ಹಲವಾರು ವರ್ಷಗಳಿಂದ ೯ ತಿಂಗಳು ಮಾತ್ರ ಸೀಮೆಎಣ್ಣೆ ವಿತರಣೆ ಮಾಡಲಾಗುತ್ತಿದೆ. ೨೦೧೭-೧೮ನೇ ಸಾಲಿನಿಂದ ವರ್ಷದ ೧೧ ತಿಂಗಳು ಸೀಮೆಎಣ್ಣೆ ವಿತರಣೆ ಮಾಡಬೇಕು. ಕುಂದಾಪುರ ತಾಲೂಕಿನ ಗಂಗೊಳ್ಳಿ, ಮರವಂತೆ, ಕೊಡೇರಿ, ಉಪ್ಪುಂದ-ಮಡಿಕಲ್, ಅಳ್ವೆಕೋಡಿ, ಶಿರೂರು ಅಳ್ವೆಗದ್ದೆ ಪ್ರದೇಶದಲ್ಲಿ ನಾಡದೋಣಿ ಮೀನುಗಾರಿಕೆ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು ೪೦೨೫ ಸೀಮೆಎಣ್ಣೆ ರಹದಾರಿಗಳಿದ್ದು, ೨೬೧೦ ಸೀಮೆಎಣ್ಣೆ ರಹದಾರಿಗಳಿಗೆ ಮಾತ್ರ ಸಬ್ಸಿಡಿ ಸೀಮೆಎಣ್ಣೆ ಪೂರೈಕೆ ಮಾಡಲಾಗುತ್ತಿದೆ. ಉಳಿದ ೧೪೧೫ ರಹದಾರಿಗಳಿಗೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ಪೂರೈಕೆ ಮಾಡಬೇಕು. ಮೀನುಗಾರಿಕಾ ದೋಣಿಗಳಿಗೆ ಬಳಸುವ ೨೫ ಹೆಚ್‌ಪಿ ಇಂಜಿನ್‌ಗೆ ಸಬ್ಸಿಡಿ ನೀಡಬೇಕು ಮತ್ತು ೪೦ ಹೆಚ್‌ಪಿ ಇಂಜಿನ್‌ಗೆ ಆರ್‌ಸಿ ನೀಡುವಂತೆ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಮೀನುಗಾರರಿಗೆ ಸೀಮೆಎಣ್ಣೆ ಸಬ್ಸಿಡಿಯನ್ನು ಆರ್‌ಟಿಜಿಎಸ್ ಮೂಲಕ ಜಮೆ ಮಾಡಲು ಉದ್ದೇಶಿಸಿದ್ದು, ಇದರಿಂದ ಬಡ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಖರೀದಿಸಲು ಆರ್ಥಿಕ ತೊಂದರೆಯಾಗುತ್ತಿದ್ದು, ಒಮ್ಮೆಲೆ ಅಷ್ಟು ಹಣವನ್ನು ಹೊಂದಿಸಲು ಕಷ್ಟವಾಗುತ್ತದೆ. ಹೀಗಾಗಿ ಸರಕಾರವು ಈ ಹಿಂದೆ ನೀಡುತ್ತಿದ್ದ ರೀತಿಯಲ್ಲೇ ಸೀಮೆಎಣ್ಣೆ ಸಬ್ಸಿಡಿಯನ್ನು ಮುಂದುವರಿಸುವಂತೆ ಮನವಿ ಮಾಡಿದ್ದಾರೆ.