ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಡವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸಮರ್ಪಕವಾಗಿ ಪ್ರತಿಯೋರ್ವರಿಗೂ ತಲುಪುವಂತೆ ಮಾಡಬೇಕಿದೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದಲ್ಲಿ ಜನರು ತಮ್ಮ ಕೆಲಸ ಕಾರ್ಯ ಬಿಟ್ಟು ತಾಲೂಕು ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಬಹುದಾಗಿದೆ. ಕಾನೂನಿನ ಇತಿಮಿತಿಯಲ್ಲಿ ಶೀಘ್ರ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪ್ರೀತಿಯಿಂದ ಅವರ ಮನಸ್ಸನ್ನು ಗೆಲ್ಲಿ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ನಾಗೂರು ಶ್ರೀ ಶಾಂತೇರಿ ಕಾಮಾಕ್ಷಿ ಸಭಾಭವನದಲ್ಲಿ ನಡೆದ ಕಿರಿಮಂಜೇಶ್ವರ, ಕಂಬದಕೋಣೆ, ಹೇರೂರು ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಪಡಿತರ ಚೀಟಿಗೆ ಆಧಾರ್ ಲಿಂಕ್ ಜೋಡಣೆ ಸಮಸ್ಯೆಯಿಂದ ಹಲವು ಕುಟುಂಬಗಳಿಗೆ ಅನ್ಯಾಯವಾಗಿದ್ದು, ಶೀಘ್ರ ಈ ಸಮಸ್ಯೆಯನ್ನು ಬಗೆಹರಿಸುವಂತೆ ಆಹಾರ ಮತ್ತು ನಾಗರೀಕ ಖಾತೆಯ ಸಚಿವ ಯು.ಟಿ ಖಾದರ್ ಅವರಿಗೆ ಮನವಿ ಮಾಡಲಾಗಿದೆ ಎಂದರು.
ಬಸವ ವಸತಿ ಯೋಜನೆಯಡಿ ಕ್ಷೇತ್ರ ವ್ಯಾಪ್ತಿಗೆ 1864 ಮನೆ ಮಂಜೂರಾಗಿದ್ದು ಮತ್ಸ್ಯಾಶ್ರಯ ಯೋಜನೆಯಡಿ ಮೀನುಗಾರ ಕುಟುಂಬಗಳಿಗೆ 240 ಮನೆ ಮಂಜೂರು ಮಾಡಲಾಗಿದೆ, ಕ್ಷೇತ್ರ ವ್ಯಾಪ್ತಿಯ ನಾನಾ ರಸ್ತೆ ದುರಸ್ತಿ ಕಾಮಗಾರಿಗಾಗಿ 10ಕೋಟಿ ರೂ. ಅನುದಾನ ಮಂಜೂರಾಗಿದ್ದು ಅಗಸ್ಟ್ ಮೊದಲ ವಾರದಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಲಾಗುವುದು. ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ರಾಮಮಂದಿರ ರಸ್ತೆ ದುರಸ್ತಿಗೆ 45 ಲಕ್ಷ ರೂ. ಕೊಡೇರಿ ರಸ್ತೆ ದುರಸ್ತಿಗೆ 1 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದರು. ಕಾರ್ಪೊರೇಶನ್ ಬ್ಯಾಂಕಿನ ಸಹಭಾಗಿತ್ವದಲ್ಲಿ ಸರ್ಕಾರ ಮೀನುಗಾರ ಮಹಿಳೆಯರಿಗೆ ಶೇ. 2 ರಷ್ಟು ಬಡ್ಡಿದರದಲ್ಲಿ 50 ಸಾವಿರ ರೂ. ವರೆಗೆ ಸಾಲ ಸೌಲಭ್ಯ ನೀಡಲು ಕ್ರಮ ಕೈಗೊಂಡಿದೆ ಎಂದರು.
ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ತಾ.ಪಂ. ಸದಸ್ಯರಾದ ಶ್ಯಾಮಲ ಕುಂದರ್, ಮಹೇಂದ್ರ ಪೂಜಾರಿ, ಹೆಚ್. ವಿಜಯ ಶೆಟ್ಟಿ, ಜಗದೀಶ ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಕಿರಿಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಖಾರ್ವಿ, ಉಪಾಧ್ಯಕ್ಷ ಶೇಖರ ಖಾರ್ವಿ, ಕಂಬದಕೋಣೆ ಗ್ರಾ.ಪಂ. ಅಧ್ಯಕ್ಷ ರಾಜೇಶ ದೇವಾಡಿಗ, ಹೇರೂರು ಗ್ರಾ.ಪಂ. ಅಧ್ಯಕ್ಷೆ ಸಾಕು, ಉಪಾಧ್ಯಕ್ಷ ಶೇಖರ ಪೂಜಾರಿ ಉಪಸ್ಥಿತರಿದ್ದರು.
ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೆ.ಎಸ್.ಆರ್.ಟಿ.ಸಿ, ಮೆಸ್ಕಾಂ, ಆರೋಗ್ಯ, ಕೃಷಿ, ತೋಟಗಾರಿಕಾ, ಸಮಾಜ ಕಲ್ಯಾಣ, ಮಹಿಳಾ ಮತತು ಮಕ್ಕಳ ಕಲ್ಯಾಣ, ಶಿಕ್ಷಣ ಪಶು ಸಂಗೋಪನಾ, ಮೀನುಗಾರಿಕಾ ಹಾಗೂ ಅರಣ್ಯ ಇಲಾಖೆಯ ತಾಲೂಕು ಮಟ್ಟದ ಅಕಾರಿಗಳು ಹಾಜರಿದ್ದರು. ಬೈಂದೂರು ಕ್ಷೇತ್ರ ಶಿಕ್ಷಧಾಧಿಕಾರಿ ಆರ್. ಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು, ತಹಶೀಲ್ದಾರ ಕಿರಣ ಗೌರಯ್ಯ ಸ್ವಾಗತಿಸಿ, ಸುಧಾಕರ ಪಿ. ನಿರೂಪಿಸಿದರು.