ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಮೀನುಗಾರಿಕೆ ಮುಗಿಸಿ ದಡಕ್ಕೆ ಬರುತ್ತಿದ್ದ ಮೀನುಗಾರನೋರ್ವ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಭಾನುವಾರ ಮಧ್ಯಾಹ್ನ ಗಂಗೊಳ್ಳಿಯ ಖಾರ್ವಿಕೇರಿ ಎಂಬಲ್ಲಿ ನಡೆದಿದೆ.
ಗಂಗೊಳ್ಳಿ ಖಾರ್ವಿಕೇರಿ ನಿವಾಸಿ ಜಿ.ನಾಗರಾಜ ಖಾರ್ವಿ (೪೫) ಮೃತಪಟ್ಟ ಮೀನುಗಾರ. ಅವರು ಭಾನುವಾರ ಮಧ್ಯಾಹ್ನ ದೋಣಿಯಲ್ಲಿ ಮೀನುಗಾರಿಕೆ ಮುಗಿಸಿಕೊಂಡು ವಾಪಾಸು ಬರುತ್ತಾ ಸಮುದ್ರದ ದಡದಲ್ಲಿ ದೋಣಿಯಲ್ಲಿ ಏಕಾಏಕಿ ಕುಸಿದು ಬಿದ್ದರು. ಕೂಡಲೇ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಗಂಗೊಳ್ಳಿ ಕೊಂಕಣಿ ಖಾರ್ವಿ ಮಾರ್ಕೇಟಿಂಗ್ ಸಮಿತಿ, ಗಂಗೊಳ್ಳಿ ಕೊಂಕಣಿ ಖಾರ್ವಿ ಸಮಾಜದ ನಿರ್ದೇಶಕರಾಗಿ, ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ, ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಸದಸ್ಯರಾಗಿ, ಖಾರ್ವಿಕೇರಿ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರ ಸಂಘದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಇವರು ಪರಿಸರದ ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿ ಜನಾನುರಾಗಿದ್ದರು.