ಮಾತು ಕಥೆ ಖಾದ್ಯದೊಂದಿಗೆ ಜರುಗಿತು ಸಸ್ಯಾಮೃತ ಸಂಭ್ರಮ.
ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ತಾಲೂಕಿನ ವಕ್ವಾಡಿ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ ತುಂಬೆಲ್ಲಾ ಭಾನುವಾರ ವಿವಿಧ ಖಾದ್ಯಗಳ ಘಮ. ಸಾಂಪ್ರದಾಯಿಕ ಹಾಗೂ ಔಷಧಿಯ ಗುಣಗಳುಳ್ಳ ಸಸ್ಯಗಳಿಂದ ತಯಾರಾದ ವಿವಿಧ ಬಗೆಯ ಸವಿಯಾದ ಶುಚಿರುಚಿಯಾದ ತಿನಿಸುಗಳು ಬಾಯಲ್ಲಿ ನೀರುರಿಸುತ್ತಿದ್ದವು.
ಗುಣಮಟ್ಟದ ಶಿಕ್ಷಣದೊಂದಿಗೆ ಸದಾ ಹೊಸತನ ಆಲೋಚನೆಗಳನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸುವ ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್‌ನ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆ ಪಠ್ಯದ ಜತೆಗೆ ಆಹಾರ, ಕ್ರೀಡೆ, ಸಂಸ್ಕ್ರತಿ, ಕಲೆ, ಸಾಹಿತ್ಯ, ಆರೋಗ್ಯ ಮೊದಲಾದ ಪಠ್ಯೇತರ ಕಾರ‍್ಯಕ್ರಮಗಳನ್ನೂ ನಿಯಮಿತವಾಗಿ ಆಯೋಜಿಸಿ ವಿದ್ಯಾರ್ಥಿಗಳಲ್ಲೊಂದು ನಾವಿನ್ಯತೆಯನ್ನು ತುಂಬುತ್ತಾ ಬದುಕಿನ ಪಾಠ ಕಲಿಸುತ್ತಿದೆ. ಆಷಾಢ ಮಾಸದ ಆಸುಪಾಸಿನಲ್ಲಿ ದೇಸಿ ಶೈಲಿಯ ಆಹಾರ ಕ್ರಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ’ಸಸ್ಯಾಮೃತ’ ಆಯೋಜಿಸಿದ್ದ ಕಾರ್ಯಕ್ರಮ ಸಂಸ್ಥೆಯ ಕ್ರೀಯಾಶೀಲ ಪ್ರಯೋಗಗಳಲ್ಲೊಂದು.
ಸಸ್ಯ ಪದಾರ್ಥಗಳ ಸವಿ:
ಶುಂಠಿ ಲಿಂಬು ಕಷಾಯ, ಕಣಲೆ – ಧಾರೆಹುಳಿ, ಉಪ್ಪಿನಕಾಯಿ, ಈರುಳ್ಳಿ ಸೊಪ್ಪಿನ ಕೋಸಂಬರಿ, ಸಾಂಬಾರ್ ಸೊಪ್ಪಿನ ಚಟ್ನಿ, ಕೆಸುವಿನ ಚಟ್ನಿ, ಚಗ್ತೆ ಸೊಪ್ಪಿನ ಚಟ್ನಿ, ಕಣಲೆ ಪಲ್ಯ, ಬಾಳೆದಿಂಡಿನ ಪಲ್ಯ, ಪತ್ರೋಡೆ ಪಲ್ಯ, ಗಜಗೆಂಡೆ ಸೊಪ್ಪಿನ ಪಲ್ಯ, ದಾಸವಾಳ ಸೊಪ್ಪಿನ ಇಡ್ಲಿ, ಪತ್ರೋಡೆ ಗಾಲಿ , ನವಣೆ ಬೇಳೆಬಾತ್, ಅನ್ನ , ಬೂದು ನೇರಳೆ ತಂಬುಳಿ , ಎಲೆ ಉರಗ ತಂಬುಳಿ , ಗೋವೆ ಕೆಸುವಿನ ಗೆಡ್ಡೆ ಸಾಸಿವೆ, ಕನ್ಯಕುಡಿ ಸಾಂಬಾರ್, ಹುರುಳಿ ಸಾರು, ಗೆಣೆಸಲೆ, ಸಾಮೆ ಅಕ್ಕಿಯ ಪಾಯಸ, ಸಬ್ಬಕ್ಕಿ ಸೊಪ್ಪಿನ ಹಾಲುಬಾಯಿ, ನುಗ್ಗೆ ಸೊಪ್ಪಿನ ಬೋಂಡಾ, ಹಲಸಿನ ಬೀಜದ ವಡೆ, ಮಜ್ಜಿಗೆ ಸೇರಿದಂತೆ ಸುಮಾರು ೨೮ ಬಗೆಯ ವಿವಿಧ ಔಷಧೀಯ ಹಾಗೂ ಸಾಂಪ್ರದಾಯಿಕ ಖಾದ್ಯಗಳನ್ನು ಆಹ್ವಾನಿತ ಅತಿಥಿಗಳು ಸವಿದು ಖುಷಿಪಟ್ಟರು. ಬಸ್ರೂರಿನ ಬಾಣಸಿಗ ಮಹಾಬಲೇಶ್ವರ ಹರಿಕಾರ ಮತ್ತು ತಂಡ ಈ ಆಹಾರ ಖಾದ್ಯ ತಯಾರಿಸಿತ್ತು.
ಸಸ್ಯಾಮೃತ ಕಾರ್ಯಕ್ರಮ ಉದ್ಘಾಟನೆ:
ಸಸ್ಯಾಮೃತ ಕಾರ್ಯಕ್ರಮವನ್ನು ಉದ್ಘಾಟಿಸಿದ ವೈದ್ಯೆ ಡಾ. ಅಪೇಕ್ಷಾ ರಾವ್ ಮಾತನಾಡಿ, ಆಹಾರ ಕ್ರಮದ ಬಗ್ಗೆ ಅರಿವು ಮುಖ್ಯ. ಮಳೆಗಾಲದ ಸಂದರ್ಭ ನಮ್ಮ ಪರಿಸರದಲ್ಲಿ ಸಿಗುವ ಸಸ್ಯಗಳು ಹಾಗೂ ಅದರಿಂದ ತಯಾರಿಸಿದ ಆಹಾರಗಳು ರೋಗನಿರೋಧಕ ಶಕ್ತಿ ಹೊಂದಿದ್ದು, ಬಹುತೇಕ ಖಾಯಿಲೆಗಳಿಗೆ ರಾಮಬಾಣ. ಆಹಾರ ಸಮತೋಲನ ಕಾಯ್ದುಕೊಳ್ಳುವ ಮೂಲಕ ಹಾಗೂ ಹಿತ-ಮಿತ ಆಹಾರ ಸೇವನೆ ಕ್ರಮದಿಂದ ಆರೋಗ್ಯ ಭಾಗ್ಯ ಪಡೆಯಬಹುದು ಎಂದರು.
ಆಯಾ ಋತುಗಳಿಗನುಸಾರವಾಗಿ ಮನುಷ್ಯನ ದೇಹ ಹಾಗೂ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಅದಕ್ಕಾಗಿಯೇ ಆಯಾ ಋತುಗಳಿಗೆ ತಕ್ಕಂತೆ ಆಹಾರ ಪದ್ಧತಿ ಅನುಸರಿಸಬೇಕು. ಅಲ್ಲದೇ ಬಹುತೇಕ ಕುಟುಂಬದ ಆಹಾರ ಪದ್ಧತಿ ಅನುಸರಿಸುವ ಮೂಲಕ ಶಾಸ್ತ್ರದ ಪ್ರಕಾರ ನಿತ್ಯ ಎರಡು ಬಾರಿ ಊಟ ಮಾಡಬೇಕು. ಆಹಾರ ಸೇವನೆ ಬಳಿಕ ದೇಹ ಆರಾಮವಿದ್ದರೇ ಜೀರ್ಣ ಕ್ರೀಯೆ ಸುಲಲಿತವಾಗಿದೆ ಎಂದರ್ಥ. ಆಹಾರ ಕ್ರಮದ ಜತೆಗೆ ಜೀವನ ಕಲೆಯಾದ ಯೋಗವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ವೈದ್ಯಕೀಯ ತರಬೇತುದಾರರಾದ ಜಯಶ್ರೀ ಭಟ್, ಗುರುಕುಲ ಸಂಸ್ಥೆ ಜಂಟಿ ಕಾರ್ಯನಿವಾಹಕರಾದ ಅನುಪಮ ಎಸ್.ಶೆಟ್ಟಿ, ಕೆ.ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಮುನ್ನೂರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಪ್ರಶ್ನೆ ಹಾಗೂ ಗೊಂದಲಗಳನ್ನು ಸಂಪನ್ಮೂಲ ವ್ಯಕ್ತಿಗಳ ಮುಂದಿಟ್ಟು ಉತ್ತರ ಪಡೆದರು. ಶಿಕ್ಷಕರುಗಳಾದ ರಾಮಚಂದ್ರ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿ, ರಾಘವೇಂದ್ರ ಪರಿಚಯಿಸಿ, ಅನುಪಮಾ ಶೆಟ್ಟಿ ಸ್ವಾಗತಿಸಿ, ಸುಮನಾ ಪೈ ವಂದಿಸಿದರು.
ಇಂದಿನ ಯುವ ಜನಾಂಗ ಪ್ರಾಚೀನ ಸಸ್ಯ ಪ್ರಭೇದಗಳ ಮಹತ್ವದ,ಅದು ಆರೋಗ್ಯದ ಮೇಲೆ ಬೀರುವ ಪರಿಣಮ ಹಾಗೂ ಪೂರ್ವಜರು ಅವನ್ನು ಉಪಯೋಗಿಸುತ್ತಿದ್ದ ರೀತಿಯನ್ನು ಅನುಸರಿಸಬೇಕಿದೆ. ಆಯುರ್ವೇದ ಪದ್ಧತಿಯ ಮೇಲೆ ನಂಬಿಕೆ ಇಡುವುದರೊಂದಿಗೆ ಸ್ಥಳೀಯ ಔಷಧ ಸಂಪತ್ತುಗಳನ್ನು ಉಳಿಸಿ ಬೆಳೆಸುವುದು ಹಾಗೂ ಅವುಗಳನ್ನು ಉಪಯೋಗಿಸುವುದನ್ನು ಕಲಿಯಬೇಕಿದೆ. – ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷರು, ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್
ಕಳೆದ 5 ವರ್ಷಗಳಿಂದ ಸ್ಥಳಿಯರು ಹಾಗೂ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೊಗಡಿನ ಔಷಧಿಯ ಖಾದ್ಯಗಳ ರುಚಿ ಮತ್ತು ಅರಿವು ಮೂಡಿಸಲಾಗುತ್ತಿದೆ. ಸ್ಥಳೀಯ ಪ್ರಾಚೀನ ಆಹಾರ ಪದ್ಧತಿಯನ್ನು ನೆನಪಿಸಿ, ಪರಿಚಯಿಸಿ, ತಿಳುವಳಿಕೆ ನೀಡುವುದು ಇದರ ಉದ್ದೇಶ. ಶಾಲಾ ವಠಾರದಲ್ಲಿ ಸಿಗುವ ಸಸ್ಯೋತ್ಪನ್ನಗಳಲ್ಲದೇ ಉತ್ತರಕನ್ನಡ ಭಾಗದಿಂದ ವಿವಿಧ ಸಸ್ಯಪ್ರಭೇದಗಳನ್ನು ಸಂಗ್ರಹಿಸಿ ಈ ಬಾರಿ ೨೮ ವಿವಿಧ ಅಡುಗೆ ತಯಾರಿ ಮಾಡಿದ್ದೇವೆ –ಅನುಪಮಾ ಎಸ್. ಶೆಟ್ಟಿ, ಜಂಟಿ ಕಾರ್ಯನಿವಾಹಕಿ ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್