ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಅನಂತ ಚತುರ್ದಶಿ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ೮ ಗಂಟೆಗೆ ದೇವತಾ ಪ್ರಾರ್ಥನೆಯಿಂದ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿತು. ನಂತರ ಕೋಟಿ ತೀರ್ಥಕ್ಕೆ ತೆರಳಿ ಗಂಗಾಪೂಜೆ, ಶೇಷ ಪೂಜೆ ನಡೆದು ಅನಂತ ಕಲಶವನ್ನು ಪುರಮೆರವಣಿಗೆಯೊಂದಿಗೆ ತಂದು ಶ್ರೀ ದೇವಳದಲ್ಲಿ ಸ್ಥಾಪಿಸಲಾಯಿತು. ದೇವಳದಲ್ಲಿ ಕಲ್ಪೋಕ್ತ ಪೂಜೆ, ಗ್ರಂಥಿ ಪೂಜೆ ನಡೆದವು. ಮಧ್ಯಾಹ್ನ ಭಜನೆ, ಶ್ರೀ ಪಟ್ಟಾಭಿ ರಾಮಚಂದ್ರ ದೇವರಿಗೆ ಮಧ್ಯಾಹ್ನ ಪೂಜೆ, ಶ್ರೀ ಅನಂತ ದೇವರಿಗೆ ಮಹಾಪೂಜೆ, ಚತುರ್ದಶ ನಮಸ್ಕಾರಗಳು ನಡೆದವು. ರಾತ್ರಿ ದೇವರಿಗೆ ರಾತ್ರಿ ಪೂಜೆ, ವಸಂತ ಪೂಜೆ, ಅಷ್ಟಾವಧಾನ ಸೇವೆ ಜರುಗಿತು. ದೇವಳವನ್ನು ಪಲ ಪುಷ್ಪದೊಂದಿಗೆ ವಿಶೇಷವಾಗಿ ಸಿಂಗರಿಸಲಾಗಿತ್ತು. ಧಾರ್ಮಿಕ ಕಾರ್ಯಕ್ರಮ ವೇ.ಮೂ. ಶ್ರೀನಿವಾಸ ಭಟ್, ವೇ.ಮೂ ಪ್ರಶಾಂತ ಭಟ್ ಅವರ ನೇತೃತ್ವದಲ್ಲಿ ನಡೆದವು. ಈ ಎಲ್ಲಾ ಕಾರ್ಯಕ್ರಮಕ್ಕೆ ದೇವಳದ ಮೊಕ್ತೇಸರರು,ರಾಮ ಸೇವಾ ಸಂಘದ ಸದಸ್ಯರು, ಸಮಾಜ ಬಾಂಧವರು ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.