ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೊಗೇರಿ ಗೋಪಾಲಕೃಷ್ಣ ಅಡಿಗರು ಬಹು ಅರ್ಥಗಳುಳ್ಳ ಕವಿತೆಗಳನ್ನು ರಚಿಸಿದ ಶ್ರೇಷ್ಠ ಕವಿ. ಓದುಗರ ಗ್ರಹಿಕೆಯ ಸಾಮರ್ಥ್ಯದ ಆಧಾರದ ಮೇಲೆ ಅವರ ಕವಿತೆಗಳು ವಿವಿಧ ತೆರನಾದ ಅರ್ಥವನ್ನು ನೀಡುತ್ತಿದ್ದವು ಎಂದು ಹಿರಿಯ ಸಾಹಿತಿ ಯು. ಚಂದ್ರಶೇಖರ ಹೊಳ್ಳ ಹೇಳಿದರು.
ಅವರು ಉಪ್ಪುಂದದ ಸುವಿಚಾರ ಬಳಗ ಮತ್ತು ಕುಂದ ಅಧ್ಯಯನ ಕೇಂದ್ರ ಸಿರಿಮೊಗೇರಿ ಸಮಷ್ಟಿ ವೇದಿಕೆಯ ಸಹಕಾರದೊಂದಿಗೆ ಗುರುವಾರ ಬೈಂದೂರು ರತ್ತೂಬಾಯಿ ಜನತಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಎಂ. ಗೋಪಾಲಕೃಷ್ಣ ಅಡಿಗ ಜನ್ಮಶತಾಬ್ದಿ ಸಪ್ತಾಹದ ಎರಡನೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಡಿಗರು ತಮ್ಮ ಅನುಭವಕ್ಕೆ ನಿಲುಕದ್ದನ್ನು ಇರಬಹುದು ಎನ್ನುತ್ತಿದ್ದರೇ ಹೊರತು ಒಂದು ಪರಿಧಿಗೆ ಸೀಮಿತಗೊಳಿಸಿ ಎಲ್ಲವನ್ನೂ ಒಪ್ಪಿಕೊಂಡವರಲ್ಲ. ಆ ಕಾರಣಕ್ಕೆ ಅಡಿಗರು ಗತಿಸಿದ ಬಳಿಕವೂ ಅವರ ವಿಚಾರಧಾರೆ, ಕಥೆ ಕವಿತೆಗಳು ಇಂದಿಗೂ ಪ್ರಸ್ತುತವಾಗಿ ಉಳಿದಿವೆ ಎಂದರು.
ಶಾಲೆಯ ಮುಖ್ಯೋಪಧ್ಯಾಯ ಮಂಜು ಕಾಳಾವರ ಮಾತನಾಡಿ ಅಡಿಗರನ್ನು ಓದಿ ಹಾಡಿದಷ್ಟೂ ಸುಸಂಸ್ಕೃತ ಸಮಾಜವನ್ನು ಕಟ್ಟುವ ನಾಗರಿಕ ಪ್ರಜ್ಞೆ ಬೆಳೆಯುತ್ತದೆ. ಅವರು ಸಮಾಜದ ಲೋಪಗಳನ್ನು ತಿದ್ದುವ, ಸತ್ಯವನ್ನು ಪ್ರತಿಪಾದಿಸುವ ಕಾರ್ಯವನ್ನು ಮಾಡುತ್ತಲೇ ಬಂದವರು. ಜಗದ ಕವಿ ಎಂದೆನಿಸಿಕೊಂಡಿರುವ ಗೋಪಾಲಕೃಷ್ಣ ಅಡಿಗರನ್ನು ನೆನಪಿಸಿ ಯುವ ಚೇತನಗಳಿಗೆ ಸ್ಫೂರ್ತಿ ತುಂಬುವ ಕೆಲಸವಾಗುತ್ತಿರುವು ಶ್ಲಾಘನೀಯ ಎಂದರು.
ರತ್ತೂಬಾಯಿ ಜನತಾ ಪ್ರೌಢಶಾಲೆಯ ವಿದ್ಯಾರ್ಥಿ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿದರು. ಕವಿ ಪುಂಡಲೀಕ ನಾಯಕ್, ಶಿಕ್ಷಕರಾದ ಡಿ.ಸಿ ಹಾಸ್ಯಗಾರ್, ಪ್ರಕಾಶ್, ಸಾಹಿತ್ಯ ವೇದಿಕೆಯ ಅಧ್ಯಕ್ಷ ಯೋಗೇಶ್ ಉಪಸ್ಥಿತರಿದ್ದರು. ಶಿಕ್ಷಕ ಚಂದ್ರ ದೇವಾಡಿಗ ಸ್ವಾಗತಿಸಿದರು. ಸಿರಿಮೊಗೇರಿ ಸಮಷ್ಟಿ ವೇದಿಕೆಯ ಎಂ. ಜಯರಾಮ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುವಿಚಾರ ಬಳಗದ ಸಂಚಾಲಕ ವಿ. ಎಚ್. ನಾಯಕ್ ವಂದಿಸಿದರು. ಶಿಕ್ಷಕ ಆನಂದ ಮದ್ದೋಡಿ ನಿರೂಪಿಸಿದರು. ಅಡಿಗರ ಕವನ ಗಾಯನ ನಡೆಯಿತು.