ಕುಂದಾಪುರ: ಕಳೆದ ವಾರ ಗೋಪಾಡಿಯಲ್ಲಿ ಗರ್ಭಿಣಿಯನ್ನು ಮಹಿಳೆಯನ್ನು ಅತ್ಯಾಚಾರಗೈದು ಕೊಲೆ ನಡೆಸಿರುವ ಪ್ರಕರಣವನ್ನು ಖಂಡಿಸಿ ಹಾಗೂ ಹತ್ಯೆ ಗೀಡಾದ ಮಹಿಳೆಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕುಂದಾಪುರ ತಾಲೂಕಿನ ಮಹಿಳಾ ಮಿತ್ರರು ಹಾಗೂ ಮಕ್ಕಳ ಮಿತ್ರರು, ಅಂಗನವಾಡಿ ಕಾರ್ಯಕರ್ತರು, ಮಹಿಳಾ ಸಂಘಟನೆ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
ಕುಂದಾಪುರದ ಶಾಸ್ತ್ರೀ ವೃತ್ತದಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ಕುಂದಾಪುರ ಮಿನಿ ವಿಧಾನಸೌಧಕ್ಕೆ ತೆರಳಿದ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಬಳಿಕ ಪೊಲೀಸ್ ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ, ಮಕ್ಕಳ ಮಿತ್ರ ರವೀಂದ್ರ ದೊಡ್ಮನೆ ಕರಾವಳಿಯಲ್ಲಿ ಹೆಚ್ಚುತ್ತಿರುವ ಮಹಿಳೆಯ ಹಾಗೂ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಕರಾವಳಿಯ ಹಲವಾರು ಕಡೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ಫಿಲೋಮಿನಾ, ದಿ ಕನ್ಸ್‌ರ್ರ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಕಾರ್ಯಕರ್ತರು ಹಾಗೂ ತಾಲೂಕಿನ ಎಲ್ಲಾ ಗ್ರಾಮಗಳ ಮಕ್ಕಳ ಹಾಗೂ ಮಹಿಳಾ ಮಿತ್ರರು ಭಾಗವಹಿಸಿದ್ದರು.