ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಕ್ಷೇತ್ರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ತಾಂತ್ರಿಕ ಸಮಸ್ಯೆಗಳು ಬಗೆಹರಿದ ಬಳಿಕ ಬಿಜೆಪಿ ಸೇರ್ಪಡೆ ಖಚಿತವಾಗಿ, ಅವರ ಮರಳಿ ಬಿಜೆಪಿ ಸೇರ್ಪಡೆಯನ್ನು ವಿರೋಧಿಸುವವರು ಪಕ್ಷ ಬಿಟ್ಟು ಹೊರನಡೆಯಲಿ. ಮುಂದಿನ ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿಯವರೇ ಆಗಲಿದ್ದಾರೆ ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಅವರು ಕುಂದಾಪುರದಲ್ಲಿ ಜರುಗಿದ ಬಿಜೆಪಿ ಪರಿವರ್ತನಾ ಯಾತ್ರೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಸ್ವತಃ ಮುಖ್ಯಮಂತ್ರಿಗಳೇ ಹಲವು ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಅಧಿವೇಶನದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ಹಗರಣಗಳನ್ನು ದಾಖಲೆ ಸಹಿತ ಬಹಿರಂಗ ಮಾಡಲಾಗುವುದು. ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್‌ಗೆ ಅತ್ಯಾಚಾರದ ಆರೋಪ ಹೊತ್ತಿರುವ ವೇಣುಗೋಪಾಲ ಉಸ್ತುವಾರಿಯಾಗಿ ಬಂದಿರುವುದು ದುರಂತವೇ ಸರಿ. ಕಾಂಗ್ರೆಸ್‌ನ ಸದ್ದಡಗಿಸಲು ಮತ್ತೆ ರಾಜ್ಯದಲ್ಲಿ ಬಹುಮತದಿಂದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಂತೆ ಮಾಡುವ ಜವಾಬ್ದಾರಿ ಕಾರ್ಯಕರ್ತರಿಗಿದೆ ಎಂದರು. ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಜನಸಾಮಾನ್ಯರಿಗಾಗಿ ತಂದ ಹಲವಾರು ಯೋಜನೆಗಳು ಹಾಗೂ ಪ್ರಸ್ತುತ ಕೇಂದ್ರ ಸರಕಾರದ ಕಾರ್ಯವೈಖರಿ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಕುಂದಾಪುರದಲ್ಲಿ ಹಾಲಾಡಿಯೇ ಅಂತಿಮ:
ಕುಂದಾಪುರದಲ್ಲಿ ಪರಿವರ್ತನಾ ಯಾತ್ರೆ ಆರಂಭಗೊಳ್ಳುತಿದ್ದಂತೆಯೇ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪರ ವಿರೋಧ ಬಣಗಳ ಮಾತಿನ ಜಟಾಪಟಿ ತಾರಕಕ್ಕೇರಿತ್ತು. ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರೋಧಿ ಬಣದಿಂದ ಬಾವುಟ, ಬ್ಯಾನರ್ ಪ್ರದರ್ಶನ ಒಂದು ಕಡೆಯಾದರೆ ಅವರ ಪರವಾಗಿದ್ದ ಕಾರ್ಯಕರ್ತರು ಹಾಲಾಡಿ ಪರವಾಗಿ ನಿರಂತವಾಗಿ ಘೋಷಣೆ ಕೂಗಿದರು. ವೇದಿಕೆಯ ಮುಂಭಾಗದ ತನಕ ಜಮಾಯಿಸಿದ್ದ ಕಾರ್ಯಕರ್ತರು ಹಾಗೂ ಪೊಲೀಸ ನಡುವೆ ಮಾತಿನ ಚಕಮಕಿ ನಡೆಯಿತು. ಇತ್ತ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತಿಗೆ ನಿಲ್ಲುತ್ತಿದ್ದಂತೆ ತಾರಕಕ್ಕೇರಿದ ಗದ್ದಲ ಬಿಜೆಪಿಯ ಬಣ ರಾಜಕೀಯವನ್ನು ಸಂಪೂರ್ಣ ಬಯಲು ಮಾಡಿತ್ತು. ಯಡಿಯೂರಪ್ಪ ಮಾತು ಆರಂಭಿಸುತ್ತಿದ್ದಂತೆ ಹಾಲಾಡಿಯೇ ಬಿಜೆಪಿಯ ಮುಂದಿನ ಅಭ್ಯರ್ಥಿ. ನಮ್ಮ ನಿಲುವನ್ನು ವಿರೋಧಿಸುವವರು ಪಕ್ಷದಿಂದ ಹೊರನಡೆಯಲಿ ಎಂದು ತಾಕೀತು ಮಾಡಿದರು. ಇದರ ಬೆನ್ನಲ್ಲೆ ಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅತ್ತ ಸಭೆಯಲ್ಲಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಾರ್ಯಕರ್ತರಿಗೆ ಸುಮ್ಮನಿರುವಂತೆ ಮನವಿ ಮಾಡಿಕೊಳ್ಳುತ್ತಿದ್ದರೇ, ಮತ್ತೊಂದೆಡೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಕಾರ್ಯಕರ್ತರೊಂದಿಗೆ ನಿಂತ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಸದಾನಂದ ಗೌಡ, ಅನಂತಕುಮಾರ್ ಹೆಗ್ಡೆ, ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ಶ್ರೀರಾಮಲು, ಜಯಪ್ರಕಾಶ್ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ವಿವಿಧ ವಿಭಾಗಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
► ಕುಂದಾಪುರದಲ್ಲಿ ಹಾಲಾಡಿಯೇ ಅಂತಿಮ. ವಿರೋಧಿಸುವವರಿಗೆ ಪಕ್ಷದಲ್ಲಿಯೂ ಸ್ಥಾನವಿಲ್ಲ! – http://kundapraa.com/?p=26172 .