ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಕ್ಷೇತ್ರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ತಾಂತ್ರಿಕ ಸಮಸ್ಯೆಗಳು ಬಗೆಹರಿದ ಬಳಿಕ ಬಿಜೆಪಿ ಸೇರ್ಪಡೆ ಖಚಿತವಾಗಿ, ಅವರ ಮರಳಿ ಬಿಜೆಪಿ ಸೇರ್ಪಡೆಯನ್ನು ವಿರೋಧಿಸುವವರು ಪಕ್ಷ ಬಿಟ್ಟು ಹೊರನಡೆಯಲಿ. ಮುಂದಿನ ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿಯವರೇ ಆಗಲಿದ್ದಾರೆ ಎಂದು ಕುಂದಾಪುರದಲ್ಲಿ ಜರುಗಿದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಹೇಳುವ ಮೂಲಕ ಹಾಲಾಡಿ ವಿರೋಧಿ ಬಣಕ್ಕೆ ಚಾಟಿ ಬೀಡಿದ್ದಾರೆ.
ಕುಂದಾಪುರದಲ್ಲಿ ಪರಿವರ್ತನಾ ಯಾತ್ರೆ ಆರಂಭಗೊಳ್ಳುತಿದ್ದಂತೆಯೇ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪರ ವಿರೋಧ ಬಣಗಳ ಮಾತಿನ ಜಟಾಪಟಿ ತಾರಕಕ್ಕೇರಿತ್ತು. ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರೋಧಿ ಬಣದಿಂದ ಬಾವುಟ, ಬ್ಯಾನರ್ ಪ್ರದರ್ಶನ ಒಂದು ಕಡೆಯಾದರೆ ಅವರ ಪರವಾಗಿದ್ದ ಕಾರ್ಯಕರ್ತರು ಹಾಲಾಡಿ ಪರವಾಗಿ ನಿರಂತವಾಗಿ ಘೋಷಣೆ ಕೂಗಿದರು. ವೇದಿಕೆಯ ಮುಂಭಾಗದ ತನಕ ಜಮಾಯಿಸಿದ್ದ ಕಾರ್ಯಕರ್ತರು ಹಾಗೂ ಪೊಲೀಸ ನಡುವೆ ಮಾತಿನ ಚಕಮಕಿ ನಡೆಯಿತು. ಇತ್ತ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತಿಗೆ ನಿಲ್ಲುತ್ತಿದ್ದಂತೆ ತಾರಕಕ್ಕೇರಿದ ಗದ್ದಲ ಬಿಜೆಪಿಯ ಬಣ ರಾಜಕೀಯವನ್ನು ಸಂಪೂರ್ಣ ಬಯಲು ಮಾಡಿತ್ತು. ಯಡಿಯೂರಪ್ಪ ಮಾತು ಆರಂಭಿಸುತ್ತಿದ್ದಂತೆ ಹಾಲಾಡಿಯೇ ಬಿಜೆಪಿಯ ಮುಂದಿನ ಅಭ್ಯರ್ಥಿ. ನಮ್ಮ ನಿಲುವನ್ನು ವಿರೋಧಿಸುವವರು ಪಕ್ಷದಿಂದ ಹೊರನಡೆಯಲಿ ಎಂದು ತಾಕೀತು ಮಾಡಿದರು. ಇದರ ಬೆನ್ನಲ್ಲೆ ಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಮಧ್ಯ ಪ್ರವೇಶಿಸಿದ ಪೊಲೀಸರು ಹಾಗೂ ಪಕ್ಷದ ನಾಯಕರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರೂ ನಾಯಕರುಗಳು ಸಭೆಯಿಂದ ಹೊರಡುವೆ ವೇಳೆ ಕಾರ್ಯಕರ್ತರ ನಡುವೆ ತಲ್ಲಾಟ ಉಂಟಾಯಿತು.