ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನ.19ರ ಭಾನುವಾರ ಬೆಳಿಗ್ಗೆ 10ಗಂಟೆಗೆ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಆರ್.ಆರ್. ಕಾಂಪ್ಲೆಕ್ಸ್‌ನಲ್ಲಿ ಶ್ರೀ ಸಾಯಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ರಿ. ಹಾಗೂ ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ ನಿ. ಈ ಎರಡು ಸಂಸ್ಥೆಗಳು ಶುಭಾರಂಭಗೊಳ್ಳಲಿದ್ದು ಸಾರ್ವಜನಿಕರು ಸಂಸ್ಥೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಆಡಳಿತ ಟ್ರಸ್ಟ್ರೀ ಎನ್. ಪಂಜು ಬಿಲ್ಲವ ಹಾಗೂ ಸಹಕಾರಿ ಸಂಘದ ಅಧ್ಯಕ್ಷೆ ನಿರ್ಮಲ ಶಂಕರ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಸಾಯಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ರಿ. ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸ್ವಸಹಾಯ ಸಂಘವನ್ನು ರಚಿಸಿ ಆರ್ಥಿಕ ಸಬಲೀಕರಣಕ್ಕೆ ಪ್ರೋತ್ಸಾಹಿಸುವುದು, ಸ್ವ ಉದ್ಯೋಗ ಮಾಹಿತಿ ನೀಡುವುದು, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವುದು, ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವುದು, ರಕ್ತದಾನಕ್ಕೆ ಪ್ರೋತ್ಸಾಹಿಸುವುದು, ಅಶಕ್ತ-ಅನಾಥರ ಸೇವೆಗೆ ಬದ್ಧವಾಗಿರುವುದು, ಕನ್ನಡ ನಾಡು ನುಡಿ ಭಾಷೆ ರಕ್ಷಣೆಗೆ ಹೋರಾಡುವುದು ಮುಂತಾದ ಉದ್ದೇಶದೊಂದಿಗೆ ಸಂಸ್ಥೆಯನ್ನು ಆರಂಭಿಸಲಾಗುತ್ತಿದೆ.
ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘದ ಮೂಲಕ ಪರಿಸರದ ಜನರ ಆರ್ಥಿಕ ಅಗತ್ಯತೆಗಳನ್ನು ಪೂರೈಸುವ ಉದ್ದೇಶ ಹೊಂದಲಾಗಿದ್ದು, ಠೇವಣಿಗೆ ಉತ್ತಮ ಬಡ್ಡಿದರ, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ ಬಿಲ್ಲವ ತಿಳಿಸಿದ್ದಾರೆ.