ಕೊಲ್ಲೂರು: ಶಂಕರಾಚಾರ್ಯರ ತಪೋಭೂಮಿಯಾದ ಕೊಡಚಾದ್ರಿಯಲ್ಲಿ ಎ. 23ರಂದು ವಿಶೇಷ ಪೂಜೆಯೊಡನೆ ಶಂಕರ ಜಯಂತಿ ನಡೆಯಿತು.
ಕೊಡಚಾದ್ರಿ ಪರಿಸರ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಮಾತನಾಡಿದ ಕೇಮಾರು ಸ್ವಾಮೀಜಿ, ಶಂಕರಾಚಾರ್ಯರ ತಪೋಭೂಮಿಯಾದ ಕೊಡಚಾದ್ರಿಯ ಸರ್ವಜ್ಞ ಪೀಠ ಬಹಳ ಮಹತ್ವದ್ದಾಗಿದೆ. ಶ್ರೀದೇವಿಯನ್ನು ಸಾಕ್ಷಾತ್ಕಾರಗೊಳಿಸಿದ ಶ್ರೇಷ್ಠ ಋಷಿ ಮುನಿಗಳಲ್ಲಿ ಶಂಕರಾಚಾರ್ಯರು ಓರ್ವರಾಗಿದ್ದು, ಅವರ ಭಗವತ್ ಭಕ್ತಿ, ಧಾರ್ಮಿಕ ಶ್ರದ್ದೆ ಪ್ರತಿಯೋರ್ವರಿಗೂ ದಾರಿದೀಪ. ಇಂತಹ ಶ್ರೇಷ್ಠ ಪರಂಪರೆಯ ವ್ಯಕ್ತಿತ್ವ ಹೊಂದಿರುವ ಶಂಕರಾಚಾರ್ಯರನ್ನು ವರುಷಕ್ಕೊಮ್ಮೆ ಶಂಕರ ಜಯಂತಿಯಂದು ನೆನಪಿಸಿ ಸದ್ಭಕ್ತಿಯಿಂದ ಧ್ಯಾನಿಸಿ ಪೂಜಿಸಿದಲ್ಲಿ ಪ್ರತಿಯೋರ್ವರಿಗೂ ಶ್ರೇಯಸ್ಸಾಗುವುದು ಎಂದರು.
ಕೊಡಚಾದ್ರಿ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಕೆ.ಕೆ. ಸಾಬೂ, ಖಜಾಂಚಿ ನಾಗೇಂದ್ರ ಜೋಗಿ, ಅಲ್ಲಿನ ದೇವಸ್ಥಾನದ ಅಧ್ಯಕ್ಷ ಶಿವರಾಮ ಶೆಟ್ಟಿ, ಹರೀಶ್ ತೋಳಾರ್, ವಿನೋದ್ ಹೆಬ್ಟಾರ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಚಿತ್ರಮೂಲದ ಅಗಸ್ತ್ಯ ಗುಹೆಗೆ ತೆರಳಿ ಅಲ್ಲಿನ ಪರ್ವತೇಶ್ವರೀ ಗಂಭೀರನಾಥ ಇನ್ನಿತರ ದೇವಾಲಯಗಳಲ್ಲಿ ಪ್ರಾರ್ಥನೆ ಹಾಗೂ ಪೂಜೆ ನಡೆಯಿತು. ಭಾರೀ ಸಂಖ್ಯೆಯಲ್ಲಿ ಸೇರಿದ ಭಕ್ತರಿಗೆ ಸಿಹಿ ಹಂಚಲಾಯಿತು.