ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯದಲ್ಲಿ ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಸ್ವಚ್ಚ ಹಾಗೂ ಪಾರದರ್ಶಕ ಆಡಳಿತವನ್ನು ಜಾರಿಗೆ ತರುವ ಘೋಷಿಸಿದ್ದು, ಅಧಿಕಾರಿಗಳು ತೊಡಗಿಸಿಕೊಳ್ಳುವಿಕೆಯಿಂದ ಇದು ಯಶಸ್ವಿಯಾಗಲಿದೆ. ಭೂಮಿಯಲ್ಲಿ ಬದುಕುವ ಯಾರೊಬ್ಬರೂ ತಮ್ಮ ಹಕ್ಕಿನಿಂದ ವಂಚಿತರಾಗಬಾರದು. ಅಧಿಕಾರಿಗಳು ಉದಾಸಿನ ಮಾಡುವ ಪ್ರವೃತ್ತಿ ಬಿಡಿ, ಸರಕಾರದ ಆದೇಶದಂತೆ ಕೆಲಸ ಮಾಡಿ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಅವರು ನೂತನ ಬೈಂದೂರು ತಾಲೂಕು ಲೋಕಾರ್ಪಣೆ ಮಾಡಿ ಮಾತನಾಡಿ ರಾಜ್ಯದಲ್ಲಿ ಅಕ್ರಮ ಸಕ್ರಮ, ಡೀಮ್ಡ್ ಫಾರೆಸ್ಟ್, ಕುಮ್ಕಿ ಭೂಮಿ ಸಮಸ್ಯೆಯನ್ನು ಸರಳೀಕರಿಸುವ ಪ್ರಯತ್ನ ಮಾಡಲಾಗಿದ್ದು, ಭೂಮಿಯ ಹಕ್ಕಿನಿಂದ ವಂಚತರಿಗೆ ಭೂಮಿ ನೀಡಲು ಸರಕಾರ ಬದ್ಧವಾಗಿದೆ ಎಂದರು. ರಾಜ್ಯದಲ್ಲಿ ನೂತನ ತಾಲೂಕು ರಚನೆಗೆ ಚಾಲನೆ ನೀಡಿದ ಬಳಿಕ ಉದ್ಘಾಟಿಸಲಾಗುತ್ತಿರುವ ಮೊದಲ ತಾಲೂಕು ಬೈಂದೂರು ಆಗಿದೆ ಎಂದ ಅವರು ಶಾಸಕರ ಬೇಡಿಕೆಯಂತೆ ಮಿನಿವಿಧಾನಸೌಧ ಮಂಜೂರು ಮಾಡಿಸುವ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಬೈಂದೂರು ನಾಗಕರಿಕರ ಬಹುಕಾಲದ ಬೇಡಿಕೆಯನ್ನು ತಾಲೂಕು ರಚಿಸುವ ಮೂಲಕ ಈಡೇರಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸರಕಾರ ಇಲಾಖೆಗಳು ತಾಲೂಕು ಕೇಂದ್ರದಲ್ಲಿಯೇ ಕಾರ್ಯಾರಂಭಗೊಳ್ಳಲಿದೆ. ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದ್ದು, ಅವಕಾಶವಾದಿಗಳು ಮಾತ್ರ ಯಾರೋ ಮಾಡಿದ ಕೆಲಸವನ್ನು ಇನ್ಯಾರೋ ಮಾಡಿದ್ದಾರೆಂದು ಬಿಂಬಿಸುತ್ತಿದ್ದಾರೆ ಎಂದರು.
ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ತಾಲೂಕು ದಂಡಾಧಿಕಾರಿ ಭೂಬಾಲನ್, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಶಂಕರ ಪೂಜಾರಿ, ಬಾಬು ಶೆಟ್ಟಿ, ಸುರೇಶ ಬಟವಾಡಿ, ಗೌರಿ ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರಾದ ಮಾಲಿನಿ ಕೆ, ಸುಜಾತ ದೇವಾಡಿಗ, ಪುಪ್ಪರಾಜ ಶೆಟ್ಟಿ, ದಸ್ತಗಿರಿ ಸಾಬೇಬ್, ಗಿರಿಜಾ ಖಾರ್ವಿ, ಜಗದೀಶ ದೇವಾಡಿಗ, ಜಗದೀಶ ಪೂಜಾರಿ, ಗ್ರೀಷ್ಮಾ ಭಿಡೆ, ತಾಲೂಕು ಹೊರಟ ಹಾಗೂ ರಚನಾ ಸಮಿತಿ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ, ಮಾಜಿ ಪುರಸಭಾ ಅಧ್ಯಕ್ಷ ಸುಬ್ರಾಯ ಶೇರುಗಾರ್ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ತಹಶೀಲ್ದಾರ್ ಕಿರಣ್ ಜಿ ಗೌರಯ್ಯ ಸ್ವಾಗತಿಸಿದರು. ಕುಂದಾಪುರ ತಹಶೀಲ್ದಾರ ಜಿ.ಎಂ ಬೋರ್ಕರ್ ವಂದಿಸಿದರು. ಪತ್ರಕರ್ತ ಅರುಣಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.