ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಂಗಳೂರಿನ ಜಾನ್ಸನ್ ಕ್ರಿಕೆಟ್ ಕ್ಲಬ್‌ನ ೧೫ ನೇ ವರ್ಷಾಚರಣೆ ಪ್ರಯುಕ್ತ ಕುಂದಾಪುರದ ಗಾಂಧಿ ಮೈದಾನದಲ್ಲಿ ಆಯೋಜಿಸಿದ ಎರಡು ದಿನಗಳ ರಾಜ್ಯ ಮಟ್ಟದ ‘ಜಾನ್ಸನ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟವನ್ನು ರಾತ್ರಿ ದಾಂಡೇಲಿಯ ಉದ್ಯಮಿ ಪ್ರಕಾಶ್ ಶೆಟ್ಟಿ ಗೈನಾಡಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ದೈನಂದಿನ ಬದುಕಿನಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸಿದ್ದು, ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ ಎಂದವರು ಹೇಳಿದರು.
ಕ್ರೀಡಾ ಅಕಾಡೆಮಿ ಸ್ಥಾಪನೆ
ಇಲ್ಲಿಯೂ ರಾಜ್ಯ, ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸುವಂತಹ ಉತ್ತಮ ಕ್ರೀಡಾ ಪಟುಗಳಿದ್ದು, ಆದರೆ ಅವರಿಗೆ ಪ್ರೋತ್ಸಾಹದ ಕೊರತೆಯಿದೆ. ಅದಕ್ಕಾಗಿ ಕುಂದಾಪುರದಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸಿದರೆ ಪ್ರಯೋಜನವಾಗಲಿದೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಬಿಜೆಪಿ ರಾಜ್ಯ ಕಾರ‍್ಯಕಾರಣಿ ಸದಸ್ಯ ಬಿ.ಎಂ. ಸುಕುಮಾರ್ ಶೆಟ್ಟಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಶಿಕ್ಷಣದ ಜತೆಗೆ ಕಲೆ, ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರೆ ನಿಮ್ಮ ಬೆಳವಣಿಗೆಗೆ ಇನ್ನಷ್ಟು ಸಹಕಾರಿಯಾಗಲಿದೆ. ಶಿಕ್ಷಣಕ್ಕೊಸ್ಕರ ಪ್ರವೃತ್ತಿಯನ್ನು ನಿಲ್ಲಿಸಬಾರದು. ಮುಂದಿನ ದಿನಗಳಲ್ಲಿ ರಣಜಿ ಟ್ರೋಫಿಯಂತಹ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಕುಂದಾಪುರದವರು ಭಾಗವಹಿಸುವಂತಾಗಲಿ. ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದವರು ಹೇಳಿದರು.
ಸಾಧಕರಿಗೆ ಸನ್ಮಾನ
ಇದೇ ವೇಳೆ ಬಲ್ಗೇರಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ‘ಪ್ರಭಾವಶಾಲಿ ಮಹಿಳೆ’ ಎನ್ನುವ ಹೆಗ್ಗಳಿಕೆಗೆ ಪಾತ್ರರಾದ ಉಡುಪಿಯ ಶಾಸ್ತ್ರ ಶೆಟ್ಟಿ ಹಾಗೂ ಖಾಸಗಿ ವಾಹಿನಿಯ ರಿಯಾಲಿಟಿ ಶೋಗೆ ಆಯ್ಕೆಯಾದ ಕುಂದಾಪುರದ ಪ್ರತಿಭೆ ಋತ್ವಿಕ್ ರತ್ನಾಕರ್ ಅವರನ್ನು ಸಮ್ಮಾನಿಸಲಾಯಿತು.
ಜೆಡಿಯು ಜಿಲ್ಲಾಧ್ಯಕ್ಷ ರಾಜೀವ್ ಕೋಟ್ಯಾನ್, ಕುಂದಾಪುರ ಪುರಸಭಾಧ್ಯಕ್ಷೆ ವಸಂತಿ ಮೋಹನ್ ಸಾರಂಗ ಮಾತನಾಡಿದರು. ಹೋಟೆಲ್ ಉದ್ಯಮಿ ಅಶೋಕ ಶೆಟ್ಟಿ, ಕುಸುಮಾಕರ್ ಶೆಟ್ಟಿ, ಜೆಡಿಎಸ್‌ನ ಅಬ್ದುಲ್ ಬಶೀರ್, ಹುಸೇನ್ ಹೈಕಾಡಿ, ತಾ.ಪಂ. ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಮತ್ತಿತರರು ಉಪಸ್ಥಿತರಿದ್ದರು. ಜಾನ್ಸನ್ ಕ್ರಿಕೆಟ್ ಕ್ಲಬ್‌ನ ಗೌರವಾಧ್ಯಕ್ಷ ಚಿತ್ತರಂಜನ್ ಹೆಗ್ಡೆ ಸ್ವಾಗತಿಸಿದರು. ಅಧ್ಯಕ್ಷ ರಾಘವೇಂದ್ರ ಪೈ ವಂದಿಸಿದರು. ನರೇಶ್ ಬಿ. ಕಾರ‍್ಯಕ್ರಮ ನಿರೂಪಿಸಿದರು.
ವಿಜೇತ ತಂಡ:
ಜಾನ್ಸ್‌ನ್ ಟ್ರೋಫಿಯನ್ನು ಬೆಂಗಳೂರಿನ ಜಯಕರ್ನಾಟಕ ತಂಡ ವಿಜೇತರಾಗಿದ್ದು, ರನರ್‌ಅಪ್ ಆಗಿ ಕೀಳೇಶ್ವರಿ ಮತ್ತು ಕೋಟ ಫ್ರೇಂಡ್ಸ್ ಹೊರಬಂದಿದೆ. ಸರಣಿ ಶ್ರೇಷ್ಟನಾಗಿ ಜಯಕರ್ನಾಟಕ ತಂಡದ ಮೌಸಿನ್ ಹೊರಹೊಮ್ಮಿದ್ದಾನೆ.