ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವೇಗದ ಹಾಗೂ ತಾಂತ್ರಿಕ ಬದುಕಿನ ನಡುವೆ ಭಾವನಾತ್ಮಕ ಸಂಬಂಧಗಳು ದೂರವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಕುರಿತು ನೈತಿಕವಾದ ಮಾರ್ಗದರ್ಶನ ನೀಡಬೇಕಾದ ಅನಿವಾರ್ಯತೆಯಿದೆ. ಶಾಲೆಯಲ್ಲಿ ದೊರೆಯುವ ಸರಕಾರಿ ಸೌಲಭ್ಯಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಪಂ ಸದಸ್ಯ ಶಂಕರ ಪೂಜಾರಿ ಹೇಳಿದರು.
ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಕಪ್ಪಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಸಭಾಧ್ಯಕ್ಷತೆವಹಿಸಿದ್ದ ಜಿಪಂ ಶಿಕ್ಷಣ ಹಾಗೂ ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಮಾತನಾಡಿ, ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ದಿ ಶಿಕ್ಷಣದ ಗುರಿಯೆನಿಸಿದೆ. ಅದರ ಸಾಧನೆಗೆ ವಿದ್ಯಾರ್ಥಿ, ಶಿಕ್ಷಕ, ಪೋಷಕರ ಸಂಯೋಜಿತ ತ್ರಿಕೋನ ಸ್ಪಂದನೆ ಜತೆಗೆ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಶಿಕ್ಷಣಾಭಿಮಾನಿಗಳು ಕೂಡಾ ಆಸಕ್ತಿವಹಿಸಿದರೆ ಮಾತ್ರ ಶಿಕ್ಷಣ ಸಂಸ್ಥೆಗಳು ಸುಸ್ಥಿತಿಯಲ್ಲಿ ಮುಂದುವರಿಯಲು ಸಾಧ್ಯ. ಪೋಷಕರು ಮಕ್ಕಳ ಭವಿಷ್ಯವನ್ನು ಶಾಲೆ ಮತ್ತು ಶಿಕ್ಷಕರಿಗೆ ಒಪ್ಪಿಸಿ ನಿಶ್ಚಿಂತರಾಗುವಂತಿಲ್ಲ. ಅವರು ಮಕ್ಕಳಿಗೆ ಒಳ್ಳೆಯ ಮಾದರಿಗಳಾಗಬೇಕು ಎಂದರು.
ಈ ಸಂದರ್ಭ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲ್ತೋಡು ಗ್ರಾಪಂ ಅಧ್ಯಕ್ಷ ಭಟ್ನಾಡಿ ಅಣ್ಣಪ್ಪ ಶೆಟ್ಟಿ ಬಹುಮಾನ ವಿತರಿಸಿದರು. ಗ್ರಾಪಂ ಸದಸ್ಯ ಚಂದ್ರಶೇಖರ ಶೆಟ್ಟಿ, ಗುತ್ತಿಗೆದಾರ ಗಣೇಶ ಶೆಟ್ಟಿ, ಸ್ಥಳದಾನಿ ಹೆರಿಯ ಮಡಿವಾಳ, ನಂದಿಕೇಶ್ವರ ಪರಿವಾರ ದೈವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಗ್ರಾಪಂ ಸದಸ್ಯೆ ಲಲಿತಾ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಓ. ಆರ್. ಪ್ರಕಾಶ್, ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷೆ ಸವಿನಾ ಶೆಟ್ಟಿ, ಶಿಕ್ಷಣ ಸಂಯೋಜಕ ವೆಂಕಪ್ಪ ಉಪ್ಪಾರ್, ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಗೋಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಸಂಜೀವ ಗೌಡ ಸ್ವಾಗತಿಸಿ, ದೀಪಾ ವಂದಿಸಿದರು. ಶಿಕ್ಷಕ ಮಂಜುನಾಥ ದೇವಾಡಿಗ ನಿರೂಪಿಸಿ, ನಾಗರಾಜ ಮೆರ್ಟ ಸಹಕರಿಸಿದರು. ನಂತರ ಸ್ಥಳೀಯ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಳೆದ ಮಳೆಗಾಲದಲ್ಲಿ ಈ ಶಾಲಾ ಕಟ್ಟಡದ ಮೇಲ್ಚಾವಣಿ ಭೀಕರ ಗಾಳಿ, ಮಳೆಯಿಂದ ಹಾರಿಹೋಗಿತ್ತು. ಬೆಳಗಿನ ಜಾವ ಘಟನೆ ಸಂಭವಿಸಿರುವುದರಿಂದ ಯಾವುದೇ ಅವಘಡವಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ನಿರಂತರ ಪ್ರತಿಭಟನೆ ಮಾಡಿದ್ದರು. ರಾಜ್ಯಾದ್ಯಂತ ಈ ಬಗ್ಗೆ ಸುದ್ದಿಯಾಗಿತ್ತು. ನಂತರ ಶಾಲಾ ಕಟ್ಟಡದ ಪಕ್ಕದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ಪಾಠಗಳು ನಡೆಯುತ್ತಿತ್ತು. ಇಲಾಖೆ ಹಾಗೂ ಜನಪ್ರತಿನಿಧಿಗಳ ನೆರವಿನಿಂದ ಈಗ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಈ ಶಾಲೆಯ ಹಿಂದಿನ ಸ್ಥಿತಿ-ಗತಿಗಳ ಬಗ್ಗೆ ಕುಂದಾಪ್ರ ಡಾಟ್ ಕಾಂ ಸರಣಿ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.