ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಪ್ರಸ್ತುತದ ಪೈಪೋಟಿ ಯುಗದಲ್ಲಿ ನಾವಿದ್ದೇವೆ. ಇನ್ನೊಬ್ಬರನ್ನು ಹಿಂದಿಕ್ಕಿ ಅಥವಾ ಸೋಲಿಸಿ ಗೆಲುವು ಪಡೆಯುವುದಕ್ಕೆ ಕಾರ್ಪೋರೇಟ್ ವಲಯzಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುವುದಿಲ್ಲ. ಜೀವನದಲ್ಲಿ ನಮ್ಮೊಂದಿಗಿರುವವರನ್ನು ಗೆಲ್ಲಿಸಿ ನಾವು ಗೆಲ್ಲಬೇಕು ಜೊತೆಗೆ ಸಾಧಿಸಬೇಕು. ಆ ಇನ್ನೊಬ್ಬರನ್ನು ಗೆಲ್ಲಿಸಿ ನಾವು ಗೆಲ್ಲುವುದು ನಿಜವಾದ ಮತ್ತು ಪರಿಪೂರ್ಣ ಗೆಲುವು ಎನಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳು ಮನೋಭಾವವನ್ನು ಅರಿತುಕೊಂಡು ಮುಂದೆ ಸಾಗಬೇಕು ಎಂದು ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಹೇಳಿದರು. ಅವರು ಭಂಡಾರ್‌ಕಾರ‍್ಸ್ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ವಿಶ್ವದಾದ್ಯಂತ ಯಾವುದೇ ಕ್ಷೇತ್ರದಲ್ಲಿ ಕಾರ‍್ಯ ನಿರ್ವಹಿಸುವ ಸಂದರ್ಭ ಬಂದೊದಗಿದಲ್ಲಿ ಆಯಾ ಪರಿಸರ, ಸಂಸ್ಕೃತಿಯನ್ನು ಕುರಿತು ಚೆನ್ನಾಗಿ ಅರಿತುಕೊಂಡು ಅವರೊಂದಿಗೆ ನಮ್ಮ ಕಾರ್ಯವೈಖರಿಯನ್ನು ನಿರ್ವಹಿಸಬೇಕು. ಅಲ್ಲದೇ ಈ ವಿದ್ಯಾರ್ಥಿ ಜೀವನದಲ್ಲಿ ಸಿಗುವಂತಹ ಅವಕಾಶಗಳನ್ನು ಉಪಯೋಗಿಸಿಕೊಂಡು ಎಲ್ಲಾ ಒಳ್ಳೆಯ ಕ್ಷೇತ್ರಗಳಲ್ಲಿ ಸಕ್ರೀಯರಾಗಿ ತೊಡಗಿಸಿಕೊಳ್ಳಬೇಕು. ಹಾಗಾದಲ್ಲಿ ಮಾತ್ರ ಭವಿಷ್ಯದ ಜೀವನವನ್ನು ಸುಖಮಯವಾಗಿಸಿಕೊಳ್ಳಲು ಸಾಧ್ಯ. ಕಾಲೇಜು ಎನ್ನುವುದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಅದನ್ನು ಸಾಧ್ಯವಾದಷ್ಟರ ಮಟ್ಟಿಗೆ ಅನುಭವಿಸಿ ಆಸ್ವಾದಿಸಿ ಎಂದು ಅವರು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಎಚ್. ಶಾಂತರಾಮ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲ್ಲಿ ಕಾಲೇಜಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿ, 2017-18 ನೇ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತರಾದ ಪ್ರಾಧ್ಯಾಪಕರಾದ ಪ್ರೊ| ಉದಯ ಕುಮಾರ್, ಡಾ| ಪಾರ್ವತಿ ಜಿ. ಐತಾಳ್, ಪ್ರೊ. ನಾರಾಯಣ ತಂತ್ರಿ, ಪ್ರೊ. ಜಿ.ಎಸ್. ಹೆಗಡೆ, ಹಾಗೂ ಬೋಧಕೇತರ ಸಿಬಂದಿ ಸರಸ್ವತಿ ಬಾಯಿ ಅವರನ್ನು ಸಮ್ಮಾನಿಸಲಾಯಿತು.
ಕಾಲೇಜನ್ನು ಪ್ರತಿನಿಧಿಸಿ, ಮಂಗಳೂರು ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ವಿಜೇತರಾದ ಶಾಂಭವಿ, ಸಂಧ್ಯಾ, ಸಂಗೀತಾ ಯ.ಎಸ್.ಶೆಣೈ, ರಜನಿ ಹಾಗೂ ಕಾರ್ತಿಕ್ ಕಾಮತ್ ಅವರನ್ನು ಕಾಲೇಜಿನ ಪರವಾಗಿ ಸಮ್ಮಾನಿಸಲಾಯಿತು.
ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ಶಾಂತರಾಮ್ ಪ್ರಭು, ರಾಜೇಂದ್ರ ತೋಳಾರ್, ಕೆ. ಪ್ರಜ್ಞೇಶ್ ಪ್ರಭು, ಕೆ. ದೇವದಾಸ್ ಕಾಮತ್ ಉಪಸ್ಥಿತರಿದ್ದರು.
ವಿಶ್ವಸ್ಥ ಮಂಡಳಿಯ ಸದಸ್ಯ ಸದಾನಂದ ಛಾತ್ರ ಸ್ವಾಗತಿಸಿದರು. ಕಾಲೇಜಿನ ವಾರ್ಷಿಕ ವರದಿಯನ್ನು ಪ್ರಾಂಶುಪಾಲ ಡಾ| ಎನ್. ಪಿ. ನಾರಾಯಣ ಶೆಟ್ಟಿ ವಾಚಿಸಿದರು. ಉಪನ್ಯಾಸಕ ಹಯವಧನ ಉಪಾಧ್ಯಾಯ ಸಮ್ಮಾನಿತರ ವಿವರ ನೀಡಿದರು. ಉಪನ್ಯಾಸಕಿ ರೋಹಿಣಿ ವಂದಿಸಿದರು. ವಿದ್ಯಾರ್ಥಿನಿಯರಾದ ವಿನಯಾ ಶೆಟ್ಟಿ ಪರಿಚಯಿಸಿದರು. ಮಹಾಲಕ್ಷ್ಮಿ ಕಾರ‍್ಯಕ್ರಮ ನಿರ್ವಹಿಸಿದರು.















