ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ ವೆಲ್ತ್ ಗೇಮ್ಸ್ ನ ವೆಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಕುಂದಾಪುರದ ಗುರುರಾಜ್ ಬೆಳ್ಳಿ ಪದಕ ಪಡೆದು ಭಾರತದ ಪದಕಗಳ ಭೇಟೆ ಆರಂಭ ದೊರಕಿಸಿದ್ದಾರೆ .
56ಕೆ.ಜಿ ವಿಭಾಗದಲ್ಲಿ ವೆಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಗುರುರಾಜ್ ಬೆಳ್ಳಿ ಪದಕ ಪಡೆದು ಈ ಸಾಧನೆ ಮಾಡಿದ್ದಾರೆ. ಚಿತ್ತೂರು ಗ್ರಾಮದ ಜಡ್ಡು ಮಹಾಬಲ ಪೂಜಾರಿ ಹಾಗು ಪದ್ದು ದಂಪತಿಗಳ ಆರು ಮಕ್ಕಳಲ್ಲಿ ಐದನೇಯವರಾದ ಗುರುರಾಜಗೆ ಓದಿನಷ್ಟೇ ಕ್ರೀಡೆಯಲ್ಲಿಯೂ ಆಸಕ್ತಿ. ತಂದೆ ತಾಯಿಯೂ ಅಷ್ಟೇ. ಮಗನ ಮನದ ಇಂಗಿತ ಅರಿತು ಅವರ ಸಾಧನೆಗೆ ಶಕ್ತಿ ಮೀರಿ ನೆರವಾಗುತ್ತಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ರ್ವೆಸ್ಲಿಂಗ್ ನಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದ ಗುರುರಾಜ್‌ಗೆ ಸುಕೇಶ್ ಶೆಟ್ಟಿ ಅವರು ತರಬೇತಿ ನೀಡಿದ್ದರು.
ಮುಂದೆ ಪದವಿ ವ್ಯಾಸಂಗಕ್ಕಾಗಿ ಉಜಿರೆಯ ಎಸ್.ಡಿ.ಎಂ ಕಾಲೇಜು ಸೇರಿದ ಬಳಿಕ ಗುರುರಾಜ್ ಬದುಕಿಗೊಂದು ತಿರುವು ದೊರೆತಿತ್ತು. ಈ ಅವಧಿಯಲ್ಲಿ ಎಂ. ರಾಜೇಂದ್ರ ಪ್ರಸಾದ್ ವೇಯ್ಡ್ ಲಿಫ್ಟಿಂಗ್ ತರಬೇತಿ ನೀಡಿ ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಿದರು. ಗುರುರಾಜ್ ಎಸ್.ಡಿ.ಎಂ ಕ್ರೀಡಾ ತರಬೇತಿ ಸಂಸ್ಥೆಯ ಕೋಚ್ ರಾಜೇಂದ್ರ ಪ್ರಸಾದ್ ಅವರ ಮೂಲಕ ಮೂಲಕ ನಿರಂತರವಾಗಿ ತರಬೇತಿ ಪಡೆದರು. ಅಲ್ಲಿಂದೀಚೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈಯುತ್ತಲೇ ಬಂದಿರುವ ಗುರುರಾಜ್ ಸೌತ್ ಏಷ್ಯನ್ ಗೇಮ್ಸ್ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದು ಹೊಸ ಭರವಸೆ ಮೂಡಿಸಿದ್ದರು. (ಕುಂದಾಪ್ರ ಡಾಟ್ ಕಾಂ ವರದಿ)
ಪುರುಷರ 56 ಕೆಜಿ ವಿಭಾಗದಲ್ಲಿಒಟ್ಟು 241 ಕೆಜಿ ಭಾರ ಎತ್ತಿದ ಅವರು ಸ್ಯಾಚ್ ವಿಭಾಗದಲ್ಲಿ 104ಕೆಜಿ ಕ್ಲೀನ್‌ಎಂಡ್‌ಜರ್ಕ್ ವಿಭಾಗದಲ್ಲಿ 137 ಕೆಜಿ ಎತ್ತುವುದರ ಮೂಲಕ ಪದಕ ಪಡೆದು ದಾಖಲೆ ಮಾಡಿದ್ಧಾರೆ. ಚಂಡಿಗಡ್ ಭಾರತೀಯ ವಾಯು ಸೇನೆಗೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ಗುರುರಾಜ್ ಪ್ರತಿದಿನ 4 ಘಂಟೆ ಅಭ್ಯಾಸ ಸ್ಪರ್ಧೆಗೆ ತೆರಳುತ್ತಿದ್ಧರು. ಮಗನ ಸಾಧನೆಗೆ ಪೋಷಕರು ಖುಷಿಯಾಗಿದ್ದಾರೆ. ಇತ್ತಿಚಿಗೆ ಅವರು ಏಕಲವ್ಯ ಪ್ರಶಸ್ತಿಯನ್ನೂ ಪಡೆದಿದ್ದರು.