ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಪೌರಾಣಿಕ ಹಿನ್ನೆಲೆಯಿರುವ ದೇವಸ್ಥಾನಗಳ ಸಮುಚ್ಛಯ ಕುಂಭಾಶಿಯಲ್ಲಿ ನೂತನ ಶಿಲಾಮಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಸಮರ್ಪಣೆ, ರಾಜಗೋಪುರ ಲೋಕಾರ್ಪಣೆ, ಬಿಂಬ ಪ್ರತಿಷ್ಠೆ, ಕಡುಶರ್ಕರ ಲೇಪನ, ಸಹಸ್ರ ಕಲಶ ಬ್ರಹ್ಮಕುಂಭಾಭಿಷೇಕ, ಮಹಾ ಅನ್ನಸಂತರ್ಪಣೆ, ಧಾರ್ಮಿಕ, ಸಾಂಸ್ಕೃತಿಕ ಕಾರ‍್ಯಕ್ರಮ ಎ.27 ರಿಂದ ಮಾ.5ರ ತನಕ ನಡೆಯಲಿದೆ.
ಪ್ರತೀದಿನ ಸಂಜೆ 6 ರಿಂದ ಧಾರ್ಮಿಕ ಸಭಾ ಕಾರ‍್ಯಕ್ರಮ ನಡೆಯಲಿದ್ದು, ಎ.29ರಂದು ಉಡುಪಿ ಪೇಜಾವರ ಮಠ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಶ್ರೀ ಕ್ಷೇತ್ರ ಮರಕಡ ಶ್ರೀ ನರೇಂದ್ರನಾಥ ಯೋಗೀಶ್ವರ ಸ್ವಾಮೀಜಿ, ಎ.3, ಉಡುಪಿ ಸೋದೆ ಮಠ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ, ಮಾ.1, ಉಡುಪಿ ಕಾಣಿಯೂರು ಮಠ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಮಾ.2,ಉಡುಪಿ ಅದಮಾರು ಮಠ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಮಾ.3, ಉಡುಪಿ ಪುತ್ತಿಗೆ ಮಠ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ, ಆನೆಗುಂದಿ ಮಹಾಸಂಸ್ಥಾನ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ, ಮಾ.4,ಸುಬ್ರಹ್ಮಣ್ಯ ಮಠ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಪ್ರತೀದಿನ ಧಾರ್ಮಿಕ ಉಪನ್ಯಾಸ ನಡೆಯಲಿದೆ. ನವದಿನವೂ ಮಧ್ಯಾಹ್ನ ಮಹಾಅನ್ನಸಂತಪರ್ಣೆ ಜರುಗಲಿದೆ.
ಪ್ರತೀದಿನ ಸಂಜೆ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಲಿದ್ದು, ಎ.27 ರಿಂದ ಮಾ.5ರ ತನಕ ನಿರಂತರ ಭಗವದ್ಗೀತಾ ಅಭಿಯಾನ, ಎ.29, ಮಧ್ಯಾಹ್ನ ವಿದ್ವಾನ ಶ್ರೀಪಾದ ಉಪಾಧ್ಯಾಯ ಕುಂಭಾಶಿ ಹಾಗೂ ವಿದ್ವಾನ ಗಣಪತಿ ಭಟ್ ಯಲ್ಲಾಪುರ ಇವರಿಂದ ಸೀತಾ ಕಲ್ಯಾಣ ಗಾನ ಆಖ್ಯಾನ, ಪ್ರತೀದಿನ ಸಂಜೆ 7.30 ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಲಿದ್ದು, ಉಡುಪಿ ಭಾರ್ಗವಿ ತಂಡದವರಿಂದ ಭಾವ ಯೋಗ ಗಾನ ನೃತ್ಯ, ಎ.30 ಕುಂದಾಪುರ ರೂಪಕಲಾ ತಂಡದವರಿಂದ ಮದುಮಗ-3 ನಾಟಕ ನಡೆಯಲಿದೆ.
ಮಾ.1,ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ಜಾದೂ ಪ್ರದರ್ಶನ, ಮಾ.2 ಉಪ್ಪಿನಕುದ್ರು ಶ್ರೀ ಯಕ್ಷಗಾನ ಗೊಂಬೆಯಾಟ ಮಂಡಳಿಯಿಂದ ಚೂಡಾಮಣಿ,ಲಂಕಾದಹನ ಗೊಂಬೆಯಾಟ, ಮಾ.3 ಡಾ.ವಿದ್ಯಾಭೂಷಣ ತಂಡದವರಿಂದ ಭಕ್ತಿಗೀತೆ, ಮಾ.4 ಮಧ್ಯಾಹ್ನ ಕುಂಭಾಶಿ ವಿದುಷಿ ಜಯಂತಿ ಶ್ರೀಧರ ಉಪಾಧ್ಯಾಯ ಅವರಿಂದ ಭಕ್ತ ಸಂಗೀತ, ಆಯ್ದ ಭಜನಾ ತಂಡಗಳಿಂದ ಕುಣಿತ ಭಜನೆ, ಮಾ.5 ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ತೆಂಕುತಿಟ್ಟು ಕಲಾವಿದರಿಂದ ಸಂಪೂರ್ಣ ದೇವಿ ಮಹಾತ್ಮ ಯಕ್ಷಗಾನ ನಡೆಯಲಿದೆ.
ಪ್ರತಿಯೊಂದು ದೇವಸ್ಥಾನ ಹಾಗೂ ದೈವಸ್ಥಾನಗಳ ಹಿಂದೆ ನಿರ್ಧಿಷ್ಟ ಉದ್ದೇಶವೊಂದು ಅಡಗಿರುತ್ತಿದೆ ಎನ್ನುವ ಸತ್ಯ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಸ್ಥಾಪನೆ ಹಿಂದೂ ಇದೆ. ಕನಸಿನ ಮೂರ್ತರೂಪ ಶಿಲಾಮಯ ದೇವಸ್ಥಾನವಾಗಿದ್ದು, ಪುಷ್ಕರಣಿ, ಚಂಡಿಕಾಹವನ ಮಂದಿರ, ಸಪರಿವಾರ ಹಾಗೂ ಗಣಪತಿ, ವೆಂಕಟರಣ ದೇವರು ಸಹಿತ ಭವ್ಯ ಸ್ವಾಗತಗೋಪುರದೇವಸ್ಥಾನ ಸಮುಚ್ಛಯ ಒಳಗೊಂಡಿದೆ.
ದೇವಸ್ಥಾನ ತಲೆಯೆತ್ತಿದ ಸ್ಥಳ ಹಿಂದೆ ದೇವೀ ಶಕ್ತಿ ಕ್ಷೇತ್ರವಾಗಿದ್ದು, ದೇವಸ್ಥಾನ ನಿರ್ಮಾಣದ ಹಿಂದಿನ ಶಕ್ತಿ ದೇವಿ ಆರಾಧಕರಾದ ಅನಿತಾ ಹಾಗೂ ದೇವರಾಯ ಎಂ.ಶೇರೆಗಾರ್. ಇವರು ಗಂಗೊಳ್ಳಿ ಹೊಸ್ಮನೆ ಮೂಲದವರಾಗಿದ್ದು, ಉದ್ಯೋಗ ನಿಮಿತ್ತ ಬಾಂಬೆ ತೆರಳಿ ಉದ್ಯಮ ಸ್ಥಾಪಿಸಿ ಇಂದು ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ.
ಇವರು ಕುಂಭಾಶಿಯಲ್ಲಿ ಜಾಗ ಪಡೆದ ಮನೆ ನಿರ್ಮಿಸಿದ್ದು, ಮನೆಯ ಪಕ್ಕದ ಜಾಗ ವಿಕ್ರಸಿದ್ದ ಸಂದರ್ಭದಲ್ಲಿ, ದೇವಿ ಕನಸಿನಲ್ಲಿ ಪ್ರತ್ಯಕ್ಷವಾಗಿ ವಿಕ್ರಯಿಸಿದ ಸ್ಥಳದಲ್ಲಿ ತನ್ನ ಸಾನಿಧ್ಯವಿದ್ದು, ಆಲಯ ನಿರ್ಮಾಣದ ಸೂಚನೆ ನೀಡಿದ್ದಳು. ದೇವಿ ಆಣತಿಯಂತೆ ಭವ್ಯ ಶಿಲಾಮಯ ದೇವಸ್ಥಾನ ವಾಸ್ತುತಜ್ಞ ಮಹೇಶ್ ಮುನಿಯಂಗಳ ಮುಂದಾಳತ್ವದಲ್ಲಿ ನಿರ್ಮಾಣವಾಗಿದೆ.
ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಕೊಂಡಂತೆ ಇವರ ಪೂರ್ವಿಕರು ರಾಜಧಿಕಾರದಲ್ಲಿ ಯೋಧರಾಗಿದ್ದು, ಶುಭ ಹಾಗೂ ಯುದ್ಧದ ಸಮಯದಲ್ಲಿ ಶ್ರೀ ಕಾಳಿ ಮಾತೆ ಪೂಜಿಸುತ್ತಿದ್ದರು. ಇವರ ಕುಟುಂಬ ಆರಾಧನೆ ಮಾಡಿಕೊಂಡು ಬಂದ ದೇವಿಯ ಒಂದು ಶಕ್ತಿ ಇವರ ಜೊತೆಯಿದ್ದು, ಶಕ್ತಿಗೆ ಸ್ಥಾನಕೊಡಬೇಕು ಎಂಬ ಪ್ರಶ್ನೆ ಬಂದಿತ್ತು. ಪ್ರಸಕ್ತ ಪಂಚಲೋಹದ ಶ್ರೀ ಚಂಡಿಕಾ ಪರಮೇಶ್ವರಿ ವಿಗ್ರಹ ಪತಿಷ್ಠಾಪನೆ ಮಾಡಲಾಗುತ್ತಿದ್ದು, ಶ್ರೀ ಕಾಳಿಕಾ ಪರಮೇಶ್ವರಿ, ದೇವರಾಯರ ಜತೆ ಬಂದ ದೇವಿಯ ಪರಿವಾರ ಶ್ರೀ ಚಾಮುಂಡೇಶ್ವರಿ, ಬ್ರಾಹ್ಮಣ ಕುಟುಂಬ ಆರಾಧಿಸಿಕೊಂಡ ಬಂದ ದುರ್ಗಾಶಕ್ತಿ ಮೂರು ಶಕ್ತಿ ಸೇರಿಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ನಾಮದೊಂದಿಗೆ ದೇವಸ್ಥಾನ ಸಮರ್ಪಣೆ ಆಗಲಿದ್ದು, ಶ್ರೀ ನಾಗ, ನಾಗಯಕ್ಷಿ, ಶ್ರೀ ಸ್ವರ್ಣ ಯಕ್ಷಿ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ.