ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ವಕ್ವಾಡಿ ಗುರುಕುಲ ಸಮೂಹ ಸಂಸ್ಥೆಯಲ್ಲಿ ಶಾಲಾ ಸಂಸ್ಥಾಪನಾ ದಿನ ಮತ್ತು ವಿವೇಕಾನಂದರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದಿನದ ವಿಶೇಷ ಎಂಬಂತೆ ಶಾಲಾವರಣದಲ್ಲಿ ಎಲ್ಲರನ್ನೂ ಆಕರ್ಷಿಸುವಂತೆ ನಿಂತಿರುವ ಭರತ ಭೂಮಿಯ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರ ಮೂರ್ತಿಗೆ ಹಾರವನ್ನು ಹಾಕಿ ಪುಷ್ಪನಮನ ಸಲ್ಲಿಸುವ ಮೂಲಕ ಯುವ ದಿನವನ್ನು ಆರಂಭಿಸಲಾಯಿತು.
ವಿದ್ಯಾರ್ಥಿಗಳಿಗೆ ವಿವೇಕಾನಂದರ ಮಹತ್ವದ ಸಂದೇಶಗಳನ್ನು ಮನಮುಟ್ಟುವಂತೆ ತಿಳಿಸಲಾಯಿತು. ಜೊತೆಗೆ ವಿದ್ಯಾರ್ಥಿಗಳು ಹಾಡು ಹಾಡುವ ಮೂಲಕ ವಿವೇಕಾನಂದರ ಗುಣಗಾನ ಮಾಡಿದರು. ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ವಿವೇಕಾನಂದರ ವೇಷ ಭೂಷಣದಿಂದ ಎಲ್ಲರ ಗಮನ ಸೆಳೆದನು. ಜೊತೆಗೆ ಸಂಸ್ಥಾಪನಾ ದಿನದ ಅಂಗವಾಗಿ ಶಾಲೆ ಬೆಳೆದು ಬಂದ ಹಾದಿಯ ಯಶಸ್ಸನ್ನು ಸಹ ಶಿಕ್ಷಕಿ ಸುಲಕ್ಷಣ ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯನಿರ್ವಾಹಕ ರಾದ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ವಿವೇಕಾನಂದರ ಧ್ಯೇಯವನ್ನು ನೀವು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಿ ಎಂದು ತಿಳಿಸಿ, ಸಂಕ್ರಾಂತಿ ಹಬ್ಬ ಮತ್ತು ಶಾಲಾ ಸಂಸ್ಥಾಪನಾ ದಿನದ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಹಾಗೂ ಚೆಸ್ ಮತ್ತು ಕರಾಟೆ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮವನ್ನು ಸಹಶಿಕ್ಷಕಿ ನಾಗರತ್ನ ನಿರೂಪಿಸಿ, ವಂದಿಸಿದರು.