ಕುಂದಾಪ್ರ ಡಾಟ್ ಕಾಂ ಸುದ್ದಿ
ಸಿದ್ದಾಪುರ: ಅಂಪಾರು ಗ್ರಾಮದ ಬಾಳ್ಕಟ್ಟು ಬಳಿ ಬುಧವಾರ ಕಾರು ಬೈಕ್ ಢಿಕ್ಕಿಯಾಗಿ ಗ್ರಾ. ಪಂ. ಮಾಜಿ ಸದಸ್ಯ ಮಹೇಶ ಹೆಗ್ಡೆ ಬೇಳೂರು (56) ಅವರು ಮೃತಪಟ್ಟಿದ್ದಾರೆ. ಬೇಳೂರು ಬಾಳ್ಕಟ್ಟು ಮನೆ ನಿವಾಸಿ ಮಹೇಶ ಹೆಗ್ಡೆ ಅವರು ಬೈಕ್‌ನಲ್ಲಿ ಸಿದ್ದಾಪುರದಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದಾಗ ಕುಂದಾಪುರದಿಂದ ಸಿದ್ದಾಪುರ ಕಡೆಗೆ ವೇಗವಾಗಿ ಸಾಗುತ್ತಿದ್ದ ಮಾರುತಿ ರಿಟ್ಜ್ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಬೈಕನ್ನು ಸುಮಾರು 15 ಮೀ. ದೂರ ಎಳೆದುಕೊಂಡು ಹೋಗಿ, ಕಾರು ಮರಕ್ಕೆ ಗುದ್ದಿ ಕಂದಕಕ್ಕೆ ಉರುಳಿದೆ.
ಕಾರಿನಲ್ಲಿ ಚಾಲಕ ಹಾಗೂ ಇನ್ನೊಬ್ಬರು ಪ್ರಯಾಣಿಸುತ್ತಿದ್ದು, ಅವರಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ಚಾಲಕನಿಗೆ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ, ಕಾರಿನ ಮಾಲಕ ಬೆಳ್ವೆ ಗ್ರಾಮದ ಶಂಕರ ಶೆಟ್ಟಿ ಸೂರೊಳಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಸರಳ ಸಜ್ಜನಿಕೆಯ ವ್ಯಕ್ತಿ
ಮಹೇಶ್ ಹೆಗ್ಡೆ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯ ಕರ್ತರಾಗಿದ್ದು, ಬೇಳೂರು ಗ್ರಾ. ಪಂ. ಮಾಜಿ ಸದಸ್ಯರು. ಅವರ ಪತ್ನಿ ಶ್ರೀಲತಾ ಹೆಗ್ಡೆ ಅವರು ಕುಂದಾಪುರ ತಾ. ಪಂ. ಸದಸ್ಯೆಯಾಗಿದ್ದಾರೆ. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಮಹೇಶ ಹೆಗ್ಡೆ ಅವರು ಬೆಳಗ್ಗೆ ಬೇಳೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪರವಾಗಿ ಮತಯಾಚನೆ ನಡೆಸಿದ್ದರು. ಉತ್ತಮ ಸಾವಯವ ಕೃಷಿಕರಾಗಿದ್ದ ಅವರು ದೇಲಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿಯಾಗಿ, ಹಿಂದೂ ಯುವ ಸೇನೆ ಬೇಳೂರು ಘಟಕದ ಗೌರವಾಧ್ಯಕ್ಷರಾಗಿ ಹಾಗೂ ಇನ್ನೂ ಹಲವಾರು ಸಂಘಟನೆಯಲ್ಲಿ ಸಕ್ರಿಯ ರಾಗಿದ್ದರು. ಅತ್ಯಂತ ಸರಳತೆ, ಸಜ್ಜನಿಕೆಯಿಂದ ಸಾರ್ವ ಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದರು.
ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು 108 ಆ್ಯಂಬುಲೆನ್ಸ್ 1 ತಾಸು ವಿಳಂಬ ವಾಗಿ ಬಂದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಶಂಕರ ನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















