ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ಒತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ದೇವಾಡಿಗರ ಒಕ್ಕೂಟ ಬೈಂದೂರು ಹಾಗೂ ದೇವಾಡಿಗ ನವೋದಯ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ಸಮುದಾಯದ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಣಾ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮವನ್ನು ಉದ್ಧೇಶಿಸಿ ಬೆಂಗಳೂರು ದೇವಾಡಿಗ ನವೋದಯ ಸಂಘದ ಪ್ರಧಾನ ಕಾರ್ಯದರ್ಶಿ ಚರಣ್ ಬೈಂದೂರು ಮಾತನಾಡಿ ದೇಶದ ಪ್ರಗತಿಗೆ ಹಳ್ಳಿಗಳು ಅಭಿವೃದ್ಧಿ ಹೊಂದಬೇಕು. ಗ್ರಾಮೀಣ ಪರಿಸರದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ಮಾಡಲು ಅವಕಾಶ ನೀಡಬೇಕು. ಜತೆಗೆ ವಿದ್ಯಾರ್ಥಿಗಳು ಕೂಡಾ ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಸಸ್ಸು ದೊರೆತಾಗ ಸಂತೋಷ ಪಡುತ್ತಾರೆ. ಆ ಕಾರಣದಿಂದ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಹೆಚ್ಚು ಸಹಕಾರಿಯಾಗಿದ್ದು, ಅವರ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದೆಂಬ ನೆಲೆಯಲ್ಲಿ ಸಂಸ್ಥೆ ವತಿಯಿಂದ ಉಚಿತ ನೋಟ್‌ಬುಕ್‌ಗಳನ್ನು ನೀಡಲಾಗುತ್ತಿದೆ ಎಂದರು.
ಒಕ್ಕೂಟದ ಅಧ್ಯಕ್ಷ ಹೊಸಾಡು ನಾರಾಯಣ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದೇವಾಡಿಗ ನವೋದಯ ಸಂಘ ಬೆಂಗಳೂರು ಕೊಡಮಾಡಿದ ಸುಮಾರು ರೂ. 30 ಸಾವಿರ ವೆಚ್ಚದ ನೋಟ್‌ಬುಕ್‌ಗಳನ್ನು ಸಮುದಾಯದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಗೌರವಾಧ್ಯಕ್ಷ ಕೆ. ಜಿ. ಸುಬ್ಬ ದೇವಾಡಿಗ, ಸ್ಥಾಪಕಾಧ್ಯಕ್ಷ ಕೆ. ನಾರಾಯಣ ದೇವಾಡಿಗ, ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ ಶೇಖರ ದೇವಾಡಿಗ, ಪ್ರಗತಿಪರ ಹಿರಿಯ ಕೃಷಿಕ ವೆಂಕ್ಟಯ್ಯ ದೇವಾಡಿಗ ಉಪಸ್ಥಿತರಿದ್ದರು. ರಾಘವೇಂದ್ರ ದೇವಾಡಿಗ ಪ್ರಾಸ್ತಾವಿಸಿದರು. ಮಾಲತಿ ದೇವಾಡಿಗ ಸ್ವಾಗತಿಸಿ, ಚಂದ್ರ ದೇವಾಡಿಗ ನಿರೂಪಿಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸತ್ಯಪ್ರಸನ್ನ ವಂದಿಸಿದರು.