ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಸಿದ್ದಾಪುರ ಗ್ರಾಮದ ದೊಟ್ಟಿನಬೇರು ಮೀಸಲು ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಸಿದ್ದಾಪುರ – ಶಿವಮೊಗ್ಗ ಜಿಲ್ಲಾ ರಸ್ತೆ ಪಕ್ಕದಲ್ಲಿ ಚಿರತೆಯೊಂದನ್ನು ಕೊಂದು ಬಿಸಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಫೆ.04ರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯಡಮೊಗೆಯ ಮಂಜುನಾಥ ಶೆಟ್ಟಿ ಎಂಬುವವರನ್ನು ಮಾ.21ರಂದು ದಸ್ತಗಿರಿ ಮಾಡಿ, ಪ್ರಕರಣದ ಬಗ್ಗೆಬಅವರ ಹೇಳಿಕೆಯಂತೆ ಎ1 ಆರೋಪಿ ಕಂಡ್ಲೂರಿನ ಮಹಮ್ಮದ್ ನದೀಮ್ ಕರಾಣಿ, ಎ5 ಆರೋಪಿ ಹನೆಬಚ್ಚಲು ನಾಗರಾಜ ಭೋವಿ, ಎ6 ಆರೋಪಿ ಹನೆಬಚ್ಚಲು ವೆಂಕಟರಮಣ ಭೋವಿ ಎಂಬುವವರನ್ನು ದಸ್ತಗಿರಿ ಮಾಡಲಾಗಿದೆ. ಪ್ರಕರಣದಲ್ಲಿ ಬಾಗಿಯಾಗಿರುವ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಬಾಗಿಯಾದ ಆರೋಪಿತರಿಂದ ಚಿರತೆಯ ಕಳವಾದ 4 ಕಾಲಿನ ಉಗುರು ಹಾಗು ಮೂಳೆಯ ಬಿಡಿ ಭಾಗಗಳು, ಬಂದೂಕು-01, ಜೀವಂತ ಗುಂಡುಗಳು-05, 02 ಮೋಟಾರ್ ಬೈಕುಗಳು ಹಾಗೂ ಇತರ ಸೊತ್ತುಗಳನ್ನು ಸರಕಾರದ ಪರ ಅಮಾನತು ಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ರಿ ಪ್ರಕರಣದಲ್ಲಿ ತಲೆಮರೆಸಿಕೊಂಡ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿರುತ್ತದೆ.
ಸದ್ರಿ ಪ್ರಕರಣವನ್ನು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೆನ್ ಪಿ ಅವರ ಮಾರ್ಗದರ್ಶನದಲ್ಲಿ ಶಂಕರನಾರಾಯಣ ವಲಯದ ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಹಾಗೂ ಸಿಬ್ಬಂದಿಯವರು, ಕುಂದಾಪುರ ವಲಯದ ಸಿಬ್ಬಂದಿಗಳು , ಬೈಂದೂರು ವಲಯದ ಸಿಬ್ಬಂದಿಗಳು ಮತ್ತು ಕಂಡ್ಲೂರು ಗ್ರಾಮಾಂತರ ಪೋಲೀಸ್ ಠಾಣೆಯ ಠಾಣಾಧಿಕಾರಿ ನಿರಂಜನ್ ಗೌಡ ಮತ್ತು ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸದ್ರಿ ಪ್ರಕರಣಕ್ಕೆ ಸಂಬಂದಿಸಿದಂತೆ ಮಹಜರು ಕುಂದಾಪುರ ವಿಭಾಗದ ಹೆಚ್ಚುವರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕರಾದ ಪಿ. ಶ್ರೀಧರ್ ಇವರ ಸಮಕ್ಷಮದಲ್ಲಿ ನಡೆದಿರುತ್ತದೆ.
















