ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳೂರು ಗ್ರಾಮದ ಕಾಕ್ತೋಟ ಎಂಬಲ್ಲಿ ಶುಕ್ರವಾರ ದೈವಸ್ಥಾನದ ಆವರಣ ಗೋಡೆ ಕುಸಿದು ಸ್ನಾತಕೊತ್ತರ ಪದವಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸೇನಾಪುರಮನೆ ಚಂದ್ರಶೇಖರ ಶೆಟ್ಟಿ-ಹೇಮಾ ದಂಪತಿಯ ಮಗಳು ಧನ್ಯಾ ಕೆ.(22) ಮೃತ ದುರ್ದೈವಿ.
ಘಟನೆಯ ವಿವರ:
ಧನ್ಯಾ ಮನೆಯಿಂದ 100 ಮೀಟರು ಅಂತರದಲ್ಲಿದ್ದ ಜಟ್ಟಿಗೇಶ್ವರ ದೈವಸ್ಥಾನಕ್ಕೆ ಹೋಗುತ್ತಿದ್ದಾಗ ಅದರ ಪೂರ್ವ ಪಾರ್ಶ್ವದ ಆವರಣ ಕುಸಿದು ಅವಳ ಮೇಲೆ ಬಿದ್ದಿದೆ. ಅದೇ ವೇಳೆಗೆ ಬಿರುಸಾದ ಮಳೆ ಬೀಳುತ್ತಿತ್ತು. ಆವರಣದ ಕಲ್ಲುಗಳ ಅಡಿ ಸಿಲುಕಿದ್ದ ಅವಳ ಮೇಲೆ ನೀರು ಹರಿದ ಕಾರಣ ಉಸಿರುಕಟ್ಟಿ ಮೃತಳಾದಳೆಂದು ಶಂಕಿಸಲಾಗಿದೆ.
ಆ ದಾರಿಯಾಗಿ ಕಿರಿಮಂಜೇಶ್ವರ ಸರ್ಕಾರಿ ಪ್ರೌಢಶಾಲೆಗೆ ಹೋಗುತ್ತಿದ್ದ ೧೦ನೇ ತರಗತಿ ವಿದ್ಯಾರ್ಥಿ ಕೃತನ್ ಶೆಟ್ಟಿ ಕಲ್ಲುಗಳ ಅಡಿ ಕೊಡೆ, ತಲೆ ಕೂದಲು ನೋಡಿ ಆಕೆಯ ಮನೆಗೆ ಓಡಿಹೋಗಿ ವಿಷಯ ತಿಳಿಸಿದ್ದಾನೆ. ನೆರೆಕೆರೆಯವರು ಬಂದು ಕಲ್ಲುಗಳನ್ನು ಸರಿಸಿ ಅವಳನ್ನು ಮೇಲೆತ್ತುವುದರೊಳಗೆ ಅವಳು ಇಹಲೋಕದ ಯಾತ್ರೆ ಮುಗಿಸಿದ್ದಳು.
ಹೈದರಾಬಾದಿನಲ್ಲಿ ಹೋಟೆಲ್ ಕಾರ್ಮಿಕನಾಗಿ ದುಡಿಯುತ್ತಿರುವ ಚಂದ್ರಶೇಖರ ಶೆಟ್ಟರ ಮೂವರು ಪುತ್ರಿಯರಲ್ಲಿ ಧನ್ಯಾ ಕೊನೆಯವಳು. ಕಲಿಕೆಯಲ್ಲಿ ಪ್ರತಿಭಾವಂತಳಾಗಿರುವ ಅವಳು ಮಂಗಳಗಂಗೋತ್ರಿಯಲ್ಲಿ ಸಂಖ್ಯಾಶಾಸ್ತ್ರದಲ್ಲಿ ಪ್ರಥಮ ವರ್ಷದ ಎಂಎಸ್‌ಸಿ ಮುಗಿಸಿದ್ದಾಳೆ. ಈಗ ರಜೆ ಇರುವುದರಿಂದ ಮನೆಗೆ ಬಂದಿದ್ದಳು. ದೈವಭಕ್ತೆಯಾಗಿದ್ದ ಅವಳು ಪ್ರತಿದಿನ ಬೆಳಿಗ್ಗೆ ಮನೆ ಸಮೀಪದ ನಾಗ ಮತ್ತು ಜಟ್ಟಿಗೇಶ್ವರ ದೈವಕ್ಕೆ ಕೈಮುಗಿಯುವ ರೂಢಿ ಬೆಳೆಸಿಕೊಂಡಿದ್ದಳು. ಇಂದು ಅದೇ ಉದ್ದೇಶಕ್ಕೆ ಬರುತ್ತಿದ್ದಾಗ ದುರಂತ ಸಂಭವಿಸಿದೆ. ಅವಳ ದೇಹ, ಉರುಳಿದ ಆವರಣದ ಕೊನೆಯ ಭಾಗದಲ್ಲಿ ಇತ್ತು. ಎರಡು ಹೆಜ್ಜೆ ಮುಂದೆ ಹೋಗಿದ್ದರೆ ಅಪಾಯ ಸಂಭವಿಸುತ್ತಿರಲಿಲ್ಲ. ಅವಳಿಗೆ ಅವಳಿಜವಳಿ ಅಕ್ಕಂದಿರಿದ್ದು, ಮೊದಲಿನವಳಿಗೆ ವಿವಾಹವಾಗಿದೆ. ಎರಡನೆಯವಳಿಗೆ ನಿಶ್ಚಿತಾರ್ತವಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ದೈವಸ್ಥಾನದ ಸ್ಥಳ ಅವಳು ನಡೆದು ಹೋಗಬೇಕಾಗಿದ್ದ ದಾರಿಗಿಂತ ೩ ಮೀಟರು ಎತ್ತರದಲ್ಲಿದೆ. ಕಳೆದ ವರ್ಷ ದಾರಿಯ ಬುಡದಿಂದ ದೈವಸ್ಥಾನದ ಅಂಗಳದ ಮಟ್ಟದ ವರೆಗೆ ಗೋಡೆ ಕಟ್ಟಿ, ಮರಳಿನ ಅಭಾವದ ಕಾರಣ ಅಲ್ಲಿಗೇ ನಿಲ್ಲಿಸಲಾಗಿತ್ತು. ಈ ವರ್ಷ ಅದರ ಮೇಲೆ ಒಂದೂವರೆ ಮೀಟರು ಎತ್ತರದ ಆವರಣ ಕಟ್ಟಲಾಗಿದೆ. ಇಂದು ಆವರಣದ ೧೨ ಮೀಟರ್ ಉದ್ದದ, ನಾಲ್ಕೂವರೆ ಮೀಟರು ಎತ್ತರದ ಇಡೀ ನಿರ್ಮಾಣ ಕುಸಿದು ಬಿದ್ದಿದೆ. ಇಷ್ಟೇ ಎತ್ತರದ ಉತ್ತರ ದಿಕ್ಕಿನ ಆವರಣದ ಸಮೀಪ ಧನ್ಯಾಳ ದೊಡ್ಡಮ್ಮನ ಮನೆ ಇದೆ. ಆ ಆವರಣವೂ ಅಪಾಯಕಾರಿ ಎಂದು ಭಾವಿಸಿದ ಜನರು ಅದನ್ನು ಕೂಡಾ ಇಂದು ಕೆಡಹಿದರು.
ಜಿಲ್ಲಾ ಎಡಿಶನಲ್ ಎಸ್‌ಪಿ ಕುಮಾರಚಂದ್ರ, ವೃತ್ತ ನಿರೀಕ್ಷಕ ಪರಮೇಶ್ವರ ಗುನಗ ಮರ್ಗದರ್ಶನದಲ್ಲಿ ಬೈಂದೂರು ಎಸ್‌ಐ ತಿಮ್ಮೇಶ್ ಬಿ. ಎನ್. ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಆಗಮಿಸಿ ಮಹಜರು ಮಾಡಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೈಂದೂರಿಗೆ ಒಯ್ಯಲಾಯಿತು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿಪಂ ಸದಸ್ಯರಾದ ಗೌರಿ ದೇವಾಡಿಗ, ಶಂಕರ ಪೂಜಾರಿ, ತಾಪಂ ಸದಸ್ಯರಾದ ಮಹೇಂದ್ರಕುಮಾರ್, ಎಚ್. ವಿಜಯ ಶೆಟ್ಟಿ, ಸ್ಥಳೀಯರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ತಹಶೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ಅಧಿಕಾರಿ ಅಣ್ಣಪ್ಪ ಬಿ., ಪಿಡಿಒ ಗಿರಿಜಾ ವೀರಶೇಖರ್, ಗ್ರಾಮಲೆಕ್ಕಿಗ ಮಂಜು, ಇತರರು ಭೇಟಿ ನೀಡಿದರು./ಕುಂದಾಪ್ರ ಡಾಟ್ ಕಾಂ ಸುದ್ದಿ./