ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಬಿರುಸಿನ ಮಳೆಯಿಂದಾಗಿ ಬೈಂದೂರು, ಶಿರೂರು ವ್ಯಾಪ್ತಿಯ ಕರಾವಳಿ ಪ್ರದೇಶಗಳಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದೆ. ಇದರಿಂದ ಕಡಲಿನ ರಕ್ಕಸ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಹಲವು ಕಡೆಗಳಲ್ಲಿ ಕಡಲ್ಕೊರೆತ ಉಂಟಾಗಿದೆ.
ಶಿರೂರು ಅಳ್ವೆಗದ್ದೆ ಬಂದರಿನಲ್ಲಿ ಲಂಗರೂ ಹಾಕಿದ ಆರು ದೋಣಿ ಮತ್ತು ಎರಡು ಪರ್ಷಿನ್ ಬೋಟ್‌ಗಳು ಅಲೆಗೆ ಕೊಚ್ಚಿಹೋಗಿ ಸಮುದ್ರ ಸೇರಿದೆ. ಅದೃಷ್ಟವಶಾತ್ ಇವುಗಳು ಮಂಗಳವಾರ ಬೆಳಗಿನ ಜಾವ ಇಲ್ಲಿ ಸಮೀಪದ ಕಳಿಹಿತ್ಲು ಕಡಲ ತೀರಕ್ಕೆ ತೇಲಿಬಂದಿದೆ. ಉಪ್ಪುಂದದ ಸಾಗರದೀಪ ಹೆಸರಿನ ಮೂರು ದೋಣಿ, ಬಪ್ರಿಹಿಂಡ್ ಪ್ರಸಾದ ಹೆಸರಿನ ಮೂರು ದೋಣಿ, ಶಿರೂರು ವಕೀಲ ಲಿಂಗಪ್ಪ ಮೆಸ್ತ ಹಾಗೂ ಬೆಳ್ಕೆಯ ಮಾದೇವ ಮೊಗೇರ ಇವರ ತಲಾ ಒಂದು ಬೋಟ್‌ಗಳನ್ನು ಸ್ಥಳೀಯ ಮೀನುಗಾರರು ಸಾರ್ವಜನಿಕರ ನೆರವಿನಿಂದ ಹಗ್ಗದ ಮೂಲಕ ರಕ್ಷಣೆ ಮಾಡಿದ್ದರೂ ಎರಡೂ ಬೋಟ್‌ಗಳ ಇಂಜಿನ್ ವಿಭಾಗ ಸಂಪೂರ್ಣ ಹಾನಿಯಾಗಿದ್ದು, ಸುಮಾರು ಮೂರು ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸಾಲಮಾಡಿ ನಿರ್ಮಿಸಿದ ಬೋಟ್‌ಗಳು ನಿಷ್ಕೃಯವಾಗಿದ್ದು, ಮರುಪಾವತಿಯ ಬಗ್ಗೆ ಮಾಲಕರು ಚಿಂತಿತರಾಗಿದ್ದಾರೆ. ಸ್ವಲ್ಪ ಮಟ್ಟಿಗೆ ವಿಮಾ ಹಣ ದೊರಕಿದರೂ ಕೂಡಾ ಬಾಕಿ ಹಣ ಹೊಂದಿಸುವ ಬಗೆಯ ಕುರಿತು ದಿಕ್ಕು ಕಾಣದಾಗಿದೆ. ಸರ್ಕಾರದಿಂದ ನೆರವಿನ ಹಸ್ತಕ್ಕೆ ಮನವಿ ಮಾಡಿದ್ದಾರೆ. ಈ ಘಟನೆಯಿಂದ ಇನ್ನಷ್ಟೆ ಮೀನುಗಾರಿಕೆ ಆರಂಭಿಸಬೇಕಾದ ಮೀನುಗಾರರಲ್ಲಿ ಆತಂಕ ಸೃಷ್ಠಿಸಿದೆ. ಅಲ್ಲದೇ ಮಳೆಯ ಅಬ್ಬರಕ್ಕೆ ಈ ಭಾಗದ ಕೃಷಿಕರೂ ಕೂಡಾ ಹೈರಾಣಾಗಿದ್ದು, ಇವರು ಕೂಡಾ ನಷ್ಟದ ಹಾದಿಯಲ್ಲಿದ್ದಾರೆ.